Dr S Jaishankar Kashmir Issue Khalistan Attack: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತಕ್ಕೆ ಮರಳಿಸುವುದೇ ಕಾಶ್ಮೀರ ಸಮಸ್ಯೆ ಶಾಶ್ವತವಾಗಿ ಪರಿಹಾರ! – ಡಾ. ಎಸ್. ಜೈಶಂಕರ್

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಲಂಡನ್ ನಲ್ಲಿ ಹೇಳಿಕೆ

ಲಂಡನ್ (ಬ್ರಿಟನ್) – ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗ ಯಾವಾಗ ಭಾರತಕ್ಕೆ ಮರಳುತ್ತದೆ ಎಂದು ನಾವು ಕಾಯುತ್ತಿದ್ದೇವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತಕ್ಕೆ ಮರಳಿದರೆ ಕಾಶ್ಮೀರದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇಲ್ಲಿನ ‘ಚಾಥಮ್ ಹೌಸ್’ ನಲ್ಲಿ “ಭಾರತದ ಉದಯ ಮತ್ತು ಜಾಗತಿಕ ಪಾತ್ರ” ಎಂಬ ವಿಷಯದ ಕುರಿತ ಸಂದರ್ಶನದಲ್ಲಿ ಮಾತನಾಡಿದರು.

ಡಾ. ಎಸ್. ಜೈಶಂಕರ್ ಅವರಿಗೆ “ಭಾರತವು ಕಾಶ್ಮೀರ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತದೆ? ಅಲ್ಲಿ ಶಾಂತಿಯನ್ನು ಹೇಗೆ ಸ್ಥಾಪಿಸುತ್ತದೆ?” ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿದರು. ಇದಕ್ಕೆ ಡಾ. ಜೈಶಂಕರ್, “ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ಪ್ರಕ್ರಿಯೆ 3 ಹಂತಗಳಲ್ಲಿ ನಡೆಯುತ್ತಿದೆ. ಮೊದಲ ಹಂತದಲ್ಲಿ ನಾವು 370ನೇ ವಿಧಿಯನ್ನು ರದ್ದುಗೊಳಿಸಬೇಕಾಗಿತ್ತು. ನಾವು ಮೊದಲ ಹಂತವನ್ನು ಪೂರ್ಣಗೊಳಿಸಿದ್ದೇವೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಲೆಂದೇ ನಾವು ಅದನ್ನು ಮಾಡಿದ್ದೇವೆ. ಎರಡನೇ ಹಂತದಲ್ಲಿ ಕಾಶ್ಮೀರದಲ್ಲಿ ಅಭಿವೃದ್ಧಿ ಮತ್ತು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಜೊತೆಗೆ ಸಾಮಾಜಿಕ ನ್ಯಾಯವನ್ನು ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಮೂರನೇ ಹಂತದಲ್ಲಿ ಕಾಶ್ಮೀರದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ಕೆಲಸ ಮಾಡಲಾಗುತ್ತಿದೆ. ನಾವು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಿದ್ದೇವೆ” ಎಂದರು.

ಅಮೆರಿಕದ ನೀತಿಗಳಿಂದ ಭಾರತಕ್ಕೆ ಲಾಭ !

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಡಾ. ಎಸ್. ಜೈಶಂಕರ್, “ಟ್ರಂಪ್ ಅವರ ನಾಯಕತ್ವದಲ್ಲಿ ಅಮೆರಿಕ ಸರಕಾರ ಹೊಸ ವ್ಯವಸ್ಥೆಯ ಕಡೆಗೆ ಸಾಗುತ್ತಿದೆ. ಅಮೆರಿಕದ ಈ ನೀತಿ ಭಾರತದ ಹಿತಾಸಕ್ತಿಗೆ ಪೂರಕವಾಗಿದೆ. ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಅಗತ್ಯವನ್ನು ಒಪ್ಪಿಕೊಂಡಿವೆ” ಎಂದರು.

ಭಾರತಕ್ಕೆ ಚೀನಾದೊಂದಿಗಿನ ಗಡಿ ಒಂದು ಪ್ರಮುಖ ಅಂಶವಾಗಿದೆ!

“ಭಾರತವು ಚೀನಾದೊಂದಿಗೆ ಯಾವ ರೀತಿಯ ಸಂಬಂಧವನ್ನು ಬಯಸುತ್ತದೆ?” ಎಂಬ ಪ್ರಶ್ನೆಗೆ ಡಾ. ಜೈಶಂಕರ್, “ನಮ್ಮದು ವಿಭಿನ್ನವಾದ ಸಂಬಂಧವಾಗಿದೆ. ಜಗತ್ತಿನಲ್ಲಿ ಒಂದು ಬಿಲಿಯನ್ ಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ದೇಶಗಳು ನಾವಾಗಿದ್ದೇವೆ. ನಮ್ಮಿಬ್ಬರಿಗೂ ಬಹಳ ಹಳೆಯ ಇತಿಹಾಸವಿದೆ, ಇದರಲ್ಲಿ ಕಾಲಕಾಲಕ್ಕೆ ಏರಿಳಿತಗಳು ಆಗಿವೆ. ಇಂದು ಎರಡೂ ದೇಶಗಳು ಮುನ್ನಡೆಯುತ್ತಿವೆ ಮತ್ತು ನಾವು ನೆರೆಹೊರೆಯವರೂ ಆಗಿದ್ದೇವೆ. ಒಂದು ದೇಶ ಬೆಳೆದಂತೆ ಜಗತ್ತಿನೊಂದಿಗೆ ಮತ್ತು ನೆರೆಹೊರೆಯವರೊಂದಿಗೆ ಅದರ ಸಮತೋಲನ ಬದಲಾಗುತ್ತದೆ. ಸಮತೋಲನವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದು ಮುಖ್ಯ ವಿಷಯ. ನಮ್ಮ ಹಿತಾಸಕ್ತಿಗಳಿಗೆ ಗೌರವ ಸಿಗುವಂತಹ ಸ್ಥಿರ ಸಂಬಂಧವನ್ನು ನಾವು ಬಯಸುತ್ತೇವೆ. ಇದು ನಮ್ಮ ಸಂಬಂಧದಲ್ಲಿನ ಪ್ರಮುಖ ಸವಾಲಾಗಿದೆ. ಗಡಿ ಭಾರತಕ್ಕೆ ಒಂದು ಪ್ರಮುಖ ಅಂಶವಾಗಿದೆ. ಕಳೆದ 40 ವರ್ಷಗಳಿಂದ ಸಂಬಂಧಗಳನ್ನು ಹೆಚ್ಚಿಸಲು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆ ಅಗತ್ಯ ಎಂದು ನಂಬಲಾಗಿದೆ. ಗಡಿ ಅಸ್ಥಿರವಾಗಿದ್ದರೆ ಅಥವಾ ಶಾಂತಿಯ ಕೊರತೆಯಿದ್ದರೆ ಅದು ನಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ” ಎಂದರು.

ಖಲಿಸ್ತಾನಿಗಳು ಡಾ. ಜೈಶಂಕರ್ ಅವರ ವಾಹನದ ಮುಂದೆ ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಕಿದರು!

ಇಂತಹ ಭಾರತದ್ರೋಹಿ ಖಲಿಸ್ತಾನಿಗಳನ್ನು ಭಾರತದ ಸಿಖ್ಖರು ಬಹಿರಂಗವಾಗಿ ಏಕೆ ವಿರೋಧಿಸುತ್ತಿಲ್ಲ ?

ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ‘ಚಾಥಮ್ ಹೌಸ್’ ನಿಂದ ಹೊರಬಂದ ನಂತರ ಕೆಲವು ಖಲಿಸ್ತಾನಿ ಬೆಂಬಲಿಗರು ಅವರ ವಾಹನದ ಮುಂದೆ ಗದ್ದಲ ಸೃಷ್ಟಿಸಿದ ವಿಡಿಯೋ ವೈರಲ್ ಆಗಿದೆ. ಡಾ. ಜೈಶಂಕರ್ ಹೊರಬರುತ್ತಿದ್ದಂತೆ ಎದುರಿನ ರಸ್ತೆಯಲ್ಲೇ ಕೆಲವು ಖಲಿಸ್ತಾನಿ ಬೆಂಬಲಿಗರು ಘೋಷಣೆಗಳನ್ನು ಕೂಗುತ್ತಿದ್ದರು. ಡಾ. ಜೈಶಂಕರ್ ಕಾರಿನಲ್ಲಿ ಕುಳಿತ ತಕ್ಷಣ ಎದುರಿನ ಪ್ರತಿಭಟನಾಕಾರರಲ್ಲಿ ಒಬ್ಬ ಖಲಿಸ್ತಾನಿ ಬೆಂಬಲಿಗ ಅವರ ಕಾರಿನ ಮುಂದೆ ಬಂದು ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಕಿದನು. ನಂತರ ಅಲ್ಲಿ ನಿಂತಿದ್ದ ಲಂಡನ್ ಪೊಲೀಸರು ಅವನನ್ನು ಪಕ್ಕಕ್ಕೆ ಕರೆದೊಯ್ದರು ಮತ್ತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರ ಬೆಂಗಾವಲು ಪಡೆ ಮುಂದೆ ಸಾಗಿತು.

ಈ ಘಟನೆಯಿಂದ ಭಾರತೀಯರು ಲಂಡನ್ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಲಂಡನ್ ಪೊಲೀಸರು ಕೇವಲ ಮೂಕಪ್ರೇಕ್ಷಕರಾಗಿ ಏಕೆ ನಿಂತಿದ್ದರು?”, “ಅವರು ಪ್ರತಿಭಟನಾಕಾರರನ್ನು ಬೆಂಬಲಿಸುತ್ತಿದ್ದರೇ?” ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. (ಲಂಡನ್ ಪೊಲೀಸರು ಖಲಿಸ್ತಾನಿ ಪರವಾಗಿದ್ದಾರೆ ಎಂಬುದು ಈ ಹಿಂದೆಯೂ ಕಂಡುಬಂದಿದೆ. ಭಾರತೀಯ ಮೂಲದ ರಿಷಿ ಸುನಕ್ ಪ್ರಧಾನಿಯಾಗಿದ್ದಾಗಲೂ ಖಲಿಸ್ತಾನಿಗಳ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ ಎಂಬುದನ್ನು ಗಮನಿಸಬೇಕು! – ಸಂಪಾದಕರು)