US Citizenship : ೪೩ ಕೋಟಿ ರೂಪಾಯಿಗಳಿಗೆ ಅಮೇರಿಕದ ಪೌರತ್ವ ಪಡೆಯಬಹುದು !

ಅಧ್ಯಕ್ಷ ಟ್ರಂಪ್ ಅವರಿಂದ ‘ಗೋಲ್ಡ್ ಕಾರ್ಡ್’ ಯೋಜನೆ ಜಾರಿ

ವಾಷಿಂಗ್ಟನ (ಅಮೇರಿಕಾ) – ಅಮೇರಿಕದಲ್ಲಿ ಅಕ್ರಮವಾಗಿ ವಾಸಿಸುವವರನ್ನು ಹೊರಹಾಕುವ ಅಭಿಯಾನವನ್ನು ಪ್ರಾರಂಭಿಸಿದ ನಂತರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೇರಿಕದ ಪೌರತ್ವವನ್ನು ಖರೀದಿಸಲು ಸಾಧ್ಯವಾಗುತ್ತದೆ ಎಂದು ಘೋಷಿಸಿದ್ದಾರೆ. 50 ಲಕ್ಷ ಡಾಲರ್ ಅಂದರೆ ಸರಿಸುಮಾರು 43 ಕೋಟಿ ರೂಪಾಯಿಗಳನ್ನು ತುಂಬಿ ಅಮೇರಿಕನ್ ‘ಗೋಲ್ಡ್ ಕಾರ್ಡ್’ ಖರೀದಿಸಲು ಸಾಧ್ಯವಾಗುತ್ತದೆ. ಹಿಂದಿನ ‘ಗ್ರೀನ್ ಕಾರ್ಡ್’ ಸ್ಥಾನವನ್ನು ಈಗ ‘ಗೋಲ್ಡ್ ಕಾರ್ಡ್’ ಪಡೆಯಲಿದೆ. ಕನಿಷ್ಠ 10 ಲಕ್ಷ ಜನರಿಗೆ ಚಿನ್ನದ ಕಾರ್ಡ್‌ಗಳನ್ನು ನೀಡುವ ಸಾಧ್ಯತೆಯಿದೆಯೆಂದು ಹೇಳಲಾಗುತ್ತಿದೆ.

ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು 2 ವಾರಗಳಲ್ಲಿ ಘೋಷಿಸಲಾಗುವುದು

ಟ್ರಂಪ್ ಅವರು ಮಾತನಾಡಿ, ಗೋಲ್ಡ್ ಕಾರ್ಡ್‌ಗಳನ್ನು ಪಡೆದವರಿಗೆ ಅಮೇರಿಕದ ಶಾಶ್ವತ ಪೌರತ್ವ ನೀಡಲಾಗುವುದು. ಅವರಿಗೆ ಗ್ರೀನ್ ಕಾರ್ಡ್‌ನಂತೆಯೇ ಲಾಭಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನಾವು 2 ವಾರಗಳಲ್ಲಿ ಪ್ರಕಟಿಸುತ್ತೇವೆ. ಶ್ರೀಮಂತರು ಅಮೇರಿಕಕ್ಕೆ ಬಂದರೆ, ಅವರ ಸಂಪತ್ತಿನಲ್ಲಿ ಇನ್ನೂ ಅಧಿಕ ವೃದ್ಧಿಯಾಗುತ್ತದೆ. ಅವರು ಹೆಚ್ಚು ಯಶಸ್ವಿಯಾಗುತ್ತಾರೆ. ಅವರಿಗೆ ಅಮೇರಿಕದಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ, ಸ್ಥಳೀಯ ಜನರಿಗೆ ಉದ್ಯೋಗ ಒದಗಿಸಬೇಕಾಗುತ್ತದೆ. ಈ ಯೋಜನೆ ಅಭೂತಪೂರ್ವ ಯಶಸ್ಸನ್ನು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ’, ಎಂದು ಹೇಳಿದರು.

ರಷ್ಯಾದ ನಾಗರಿಕರಿಗೂ ‘ಗೋಲ್ಡ್ ಕಾರ್ಡ್’ ನೀಡಲಾಗುತ್ತದೆಯೇ? ಈ ಪ್ರಶ್ನೆಗೆ ಟ್ರಂಪ್ ಇವರು, ರಷ್ಯಾದ ಶ್ರೀಮಂತರು ಸಹ ಈ ಯೋಜನೆಯ ಲಾಭ ಪಡೆಯಬಹುದು. ನನಗೆ ಕೆಲವು ಶ್ರೀಮಂತ ರಷ್ಯನ್ನರು ಗೊತ್ತು, ಅವರು ಒಳ್ಳೆಯ ಜನರಾಗಿದ್ದಾರೆ, ಎಂದು ಹೇಳಿದರು.