‘ಸ್ಮಾರ್ಟ್‌ಫೋನ್’ ಹೆಸರಿನ ಬ್ರಹ್ಮರಾಕ್ಷಸ !

ಶಿಕ್ಷಣಕ್ಷೇತ್ರದ ‘ಪ್ರಥಮ’ ಎಂಬ ಸಂಸ್ಥೆಯು ದೇಶದ ಸ್ತರದಲ್ಲಿ ‘ಅಸರ ೨೦೨೪’ ಈ ಶೈಕ್ಷಣಿಕ ವರದಿಯನ್ನು ಪ್ರಕಟಿಸಿದೆ. ಈ ವರದಿಯಲ್ಲಿ ೧೪ ರಿಂದ ೧೬ ವಯೋಗುಂಪಿನ ಶೇ. ೫೫ ರಷ್ಟು ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ಖಾತೆಯನ್ನು ಹೊಂದಿರುವುದಾಗಿ ಹೇಳಲಾಗಿದೆ. ಈ ವಯೋಗುಂಪಿನ ಶೇ. ೫೫.೨ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ‘ಸ್ಮಾರ್ಟ್‌ಫೋನ್’ (ಆಧುನಿಕ ಮೊಬೈಲ್‌ ಫೋನ್‌)ಗಳನ್ನು ಬಳಸುತ್ತಾರೆ, ಎಂದು ಈ ವರದಿ ಬಹಿರಂಗಪಡಿಸಿದೆ. ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ಹುಡುಗಿಯರಿಗಿಂತ ಹುಡುಗರೇ ಹೆಚ್ಚಿದ್ದು ಶೇ. ೭೫.೧ ರಷ್ಟು ಹುಡುಗರು ಮತ್ತು ಶೇ. ೭೦.೮ ಹುಡುಗಿಯರಿದ್ದಾರೆ. ಇದರ ಒಂದು ಪರಿಣಾಮವೆಂದರೆ ೨೦೨೨ ಕ್ಕೆ ಹೋಲಿಸಿದರೆ ೨೦೨೪ ರಲ್ಲಿ ಮಹಾರಾಷ್ಟ್ರದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ೨೦೨೨ ರಲ್ಲಿ ಒಂದರಿಂದ ಐದನೇ ತರಗತಿಗಳಲ್ಲಿ ಶೇ. ೭೭.೩ ರಷ್ಟು ಮಕ್ಕಳು ಕಲಿಯುತ್ತಿದ್ದರು. ಈ ಸಂಖ್ಯೆ ಕಡಿಮೆಯಾಗಿ ೨೦೨೪ ರಲ್ಲಿ ಶೇ. ೭೧.೫ ರಷ್ಟಾಗಿದೆ. ಮಧ್ಯಂತರದಲ್ಲಿ ಕೊರೊನಾ ಮಹಾಮಾರಿಯ ಕಾಲದಲ್ಲಿ ಸಂಚಾರವಾಣಿಯ ಮೂಲಕ ಆನ್‌ಲೈನ್‌ ಶಿಕ್ಷಣ ಪಡೆಯುವ ಪ್ರಮಾಣ ಹೆಚ್ಚಾಗಿತ್ತು. ಅದು ಇಂದಿನವರೆಗೂ ಮುಂದುವರೆದಿದೆ. ಇದರಿಂದ, ಸಂಚಾರವಾಣಿಯ ಅನಾವಶ್ಯಕ ಬಳಕೆಯಿಂದಾಗಿ ಚಿಕ್ಕ ವಯಸ್ಸಿನ ಮಕ್ಕಳ ಮೇಲೆ ಯಾವರೀತಿ ವಿಪರೀತ ಪರಿಣಾಮವಾಗುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ.

ಚಿಕ್ಕ ವಯಸ್ಸಿನಲ್ಲಿ ಘಟಿಸಿದ ಅಯೋಗ್ಯ ಸಂಸ್ಕಾರ ಪ್ರೌಢಾವಸ್ಥೆಯಲ್ಲಿ ಸುಲಭವಾಗಿ ತೊಡೆದುಹಾಕಲು ಸಾಧ್ಯವಿಲ್ಲ. ಅದರ ಪರಿಣಾಮ ಶಿಕ್ಷಣದ ಜೊತೆಗೆ ಸ್ವಾಭಿಮಾನ, ರಾಷ್ಟ್ರಾಭಿಮಾನದ ಬಗ್ಗೆ ಮುಂಬರುವ ಪೀಳಿಗೆಗೆ ಜ್ಞಾನವಾಗಲು ಸಾಧ್ಯವೇ ? ‘ಸ್ಮಾರ್ಟ್‌ಫೋನ್’ ಗಳ ಅತಿಯಾದ ಬಳಕೆಯಿಂದ ಸದ್ಯದ ಪೀಳಿಗೆ ಹಾಳಾಗುತ್ತಿದೆ, ಎಂದು ಕೇಳಿ ಬರುತ್ತಿದೆ. ‘ಮಕ್ಕಳು ನಮ್ಮ ಮಾತು ಕೇಳುವುದಿಲ್ಲ. ನಮಗೆ ಏನೂ ಮಾಡಲು ಸಾಧ್ಯವಿಲ್ಲ’, ಎಂದು ಪಾಲಕರು ಹೇಳುತ್ತಾರೆ. ಮಕ್ಕಳು ಪಾಲಕರ ಮಾತನ್ನು ಕೇಳದಿದ್ದರೆ, ಇಂತಹ ಹಾಳಾದ ಮಕ್ಕಳ ಭವಿಷ್ಯವನ್ನು ಯಾರು ಸರಿಪಡಿಸಲಬಲ್ಲರು ? ಶಾಲೆಗಳಲ್ಲಿಯೇ ಸಂಚಾರವಾಣಿಯ ಅತಿಯಾದ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಕಲಿಸುವುದು ಮತ್ತು ಜಾಗೃತಿ ಮೂಡಿಸುವುದು ಯೋಗ್ಯವಾಗಿದೆ. ಇದಕ್ಕಾಗಿ ಸರಕಾರಿ ಮಟ್ಟದಲ್ಲಿ ಶಿಕ್ಷಣಕ್ಷೇತ್ರದಲ್ಲಿ ಬದಲಾವಣೆ ಮಾಡುವುದು ಆವಶ್ಯಕವಾಗಿದೆ. ಮೊಬೈಲ್‌ ಫೋನ್‌ಗಳು ಗಡಿಯಾರ, ರೇಡಿಯೋ, ಟೆಲಿಗ್ರಾಮ ವ್ಯವಸ್ಥೆ, ಪೋಸ್ಟ್ ಕಾರ್ಡ್‌, ಪುಸ್ತಕಗಳು, ವರ್ತಮಾನಪತ್ರಿಕೆಗಳು, ಗಣಕಯಂತ್ರ, ಛಾಯಾಚಿತ್ರಗಾಹಿ (ಕ್ಯಾಮೆರಾ), ದೂರದರ್ಶನ, ಹಾಗೆಯೇ ಸಿನೆಮಾಗೃಹ ಇತ್ಯಾದಿಗಳ ಆವಶ್ಯಕತೆಯನ್ನು ಕ್ರಮೇಣ ಕಡಿಮೆ ಮಾಡಿವೆ. ಮಕ್ಕಳ ಓದುವ ಆಸಕ್ತಿಯನ್ನು ಕಡಿಮೆ ಮಾಡಿದೆ. ಮಕ್ಕಳ ದೈಹಿಕ ಆಟಗಳಲ್ಲಿ ಆಸಕ್ತಿ ಮಾಯವಾಗಿದೆ. ಈಗ ಕೈಯಲ್ಲಿ ಗಡಿಯಾರ ಕಟ್ಟುವುದು, ಎಣಿಕೆ ಮಾಡುವ ಆವಶ್ಯಕತೆ ಉಳಿದಿಲ್ಲ.

ಜಗತ್ತಿನಲ್ಲಿರುವ ಎಲ್ಲ ಜ್ಞಾನವನ್ನು ನಮ್ಮ ಬೆರಳ ತುದಿಯಲ್ಲಿ ಇರಿಸುವ ಮೂಲಕ ಅಂತರ್ಜಾಲ (ಇಂಟರನೆಟ್) ಮತ್ತು ಮೊಬೈಲ್‌ ಎಲ್ಲರನ್ನೂ ಆವರಿಸಿ ಕೊಂಡು ಎಲ್ಲರ ಸಮಯವನ್ನು ಕಸಿದುಕೊಂಡಿವೆ. ಇದರಿಂದ ‘ಸ್ಮಾರ್ಟ್‌ಫೋನ್’ ಒಂದು ಬ್ರಹ್ಮರಾಕ್ಷಸವಾಗಿದೆ ಎಂದು ನಿಮ್ಮ ಗಮನಕ್ಕೆ ಬಂದಿರಬಹುದು. ಇದನ್ನು ನಿಯಂತ್ರಣಕ್ಕೆ ತರಲು ಶಿಕ್ಷಣತಜ್ಞರು ಗಮನಹರಿಸಬೇಕು. ಮಕ್ಕಳ ಜೀವನದಲ್ಲಿ ‘ಸ್ಮಾರ್ಟ್‌ಫೋನ್‌’ಗಳ ರೂಪದಲ್ಲಿ ಬಂದ ಈ ಬ್ರಹ್ಮರಾಕ್ಷಸನ ಬಳಕೆಯನ್ನು ಮಿತಿಗೊಳಿಸಲು ಮೊದಲು ಪಾಲಕರು, ಶಿಕ್ಷಕರು ಮತ್ತು ಸರಕಾರ ಇವರೆಲ್ಲರೂ ಸಂಘಟಿತರಾಗಿ ಪ್ರಯತ್ನಿಸಬೇಕು.

– ಶ್ರೀ. ಶ್ರೀರಾಮ ಖೆಡೆಕರ, ಫೋಂಡಾ, ಗೋವಾ.