ಮಂಗಳೂರು : ಹಿಂದೂಗಳಿಗೆ ಕಾಮಧೇನು ಆಗಿರುವ ಹಾಗೂ ಮಾತೆಯ ಸ್ಥಾನವನ್ನು ನೀಡಿದ ಗೋವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ಬಳಿ ನಡೆದಿದೆ. ಕರ್ಣ ಎಂಬುವವರಿಗೆ ಸೇರಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಪರಾರಿಯಾಗಿದ್ದಾರೆ. ಈ ಘಟನೆ ರವಿವಾರ ಮುಂಜಾನೆ (ಜ.12) ಬೆಳಕಿಗೆ ಬಂದಿದೆ. ಸದ್ಯ ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಕ್ಷೇಮವಾಗಿದೆ. ಗಾಯ ಮಾಸಲು ಇನ್ನೂ ಎರಡು ವಾರ ಬೇಕು ಎಂದು ಹೇಳಲಾಗಿದೆ. ಈ ಬಗ್ಗೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ
ಮೂಕ ಪ್ರಾಣಿಗಳ ಕೆಚ್ಚಲು ಕೊಯ್ದ ಘಟನೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ 20ಕ್ಕೂ ಹೆಚ್ಚು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ರಮೇಶ ಸ್ಥಳಕ್ಕೆ ಆಗಮಿಸಿದ್ದಾರೆ.
ಗೋವಿನ ಮೇಲೆ ಕ್ರೌರ್ಯ; ‘ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ’ – ಮುಖ್ಯಮಂತ್ರಿ ಸಿದ್ದರಾಮಯ್ಯ
ಚಾಮರಾಜನಗರದಲ್ಲಿ ಗೋವುಗಳ ಮೇಲಿನ ಕ್ರೌರ್ಯಕ್ಕೆ ಕಾರಣರಾದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ. ”ಅಪರಾಧಿಗಳ ಬಗ್ಗೆ ನಮಗೆ ಮಾಹಿತಿ ಇಲ್ಲ”, ಅಪರಾಧಿಗಳನ್ನು “ಜಿಹಾದಿಗಳು” ಎಂದು ಭಾಜಪದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳುವ ಮೂಲಕ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವ ಮತ್ತು ಸಮುದಾಯಗಳನ್ನು ಧ್ರುವೀಕರಿಸುವ ಪ್ರಯತ್ನ ಮಾಡುತ್ತಿದ್ದಾರೆ. ತಪ್ಪಿತಸ್ಥರನ್ನು ಗುರುತಿಸಲು ಮತ್ತು ಬಂಧಿಸಲು ಮತ್ತು ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ವರದಿ ಬಂದ ಬಳಿಕ ಕ್ರಮ: ಗೃಹ ಸಚಿವ ಜಿ. ಪರಮೇಶ್ವರ
ಈ ನಡುವೆ ಗೃಹ ಸಚಿವ ಜಿ.ಪರಮೇಶ್ವರ್ ಇವರು ಪ್ರತಿಕ್ರಿಯೆ ನೀಡಿ ಆರೋಪಿಗಳ ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಪೊಲೀಸರಿಂದ ವರದಿ ಕೇಳಲಾಗಿದ್ದು ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಿಡಿಗೇಡಿಗಳ ಬಂಧಿಸುವರೆಗೆ ಹೋರಾಟ ನಿಲ್ಲಲ್ಲ ! – ಸಂಸದ ಪಿ.ಸಿ. ಮೋಹನ್
ಸಂಸದ ಪಿ.ಸಿ. ಮೋಹನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಇದೊಂದು ಅಮಾನವೀಯ ಕೃತ್ಯವಾಗಿದೆ. ಗೋವುಗಳನ್ನು ದೇವರು ಎಂದು ಪೂಜೆ ಮಾಡುತ್ತೇವೆ. ಆದರೆ, ಕಿಡಿಗೇಡಿಗಳು ಗೋವುಗಳ ಕೆಚ್ಚಲು ಕೊಯ್ದು ದುಷ್ಕೃತ್ಯ ಎಸಗಿದ್ದಾರೆ. ಕೂಡಲೇ ಕಿಡಿಗೇಡಿಗಳ ಬಂಧನವಾಗಬೇಕು. ಹಾಗೂ ಕಾಂಗ್ರೆಸ್ ಸರಕಾರ ಬಂದ ಮೇಲೆ ಇಂತಹ ಕೃತ್ಯಗಳು ಹೆಚ್ಚು ಆಗುತ್ತಿದೆ. ಕಿಡಿಗೇಡಿಗಳ ಬಂಧನವಾಗುವವರೆಗೆ ಹೋರಾಟ ನಿಲುವುದಿಲ್ಲ ಎಂದು ಹೇಳಿದ್ದಾರೆ.
ಹಸುಗಳ ಕೆಚ್ಚಲು ಕೊಯ್ದ ಪ್ರಕರಣ; ಆರೋಪಿ ಅರೆಸ್ಟ್, ಜನವರಿ 24 ರವರೆಗೆ ನ್ಯಾಯಾಂಗ ಬಂಧನ
ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಓರ್ವ ಆರೋಪಿಯನ್ನು ಕಾಟನ್ ಪೇಟೆ ಪೊಲೀಸರು ಬಂಧನ ಮಾಡಿ, ಸ್ಥಳ ಮಹಜರು ಮಾಡಿರುವ ಕುರಿತು ವರದಿಯಾಗಿದೆ. ಪೊಲೀಸರು ಆರೋಪಿಯ ಹೆಸರನ್ನು ಬಹಿರಂಗ ಪಡಿಸಿಲ್ಲ. ಪೊಲೀಸರು ಭಾನುವಾರ ರಾತ್ರಿ ಓರ್ವ ಆರೋಪಿಯನ್ನು ಬಂಧನ ಮಾಡಿ ವಿಚಾರಣೆ ಮಾಡಿದ್ದು, ಚಿಕ್ಕಪೇಟೆ ಉಪವಿಭಾಗದ ಎಸಿಪಿ ರಮೇಶ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಹಸುವಿನ ಕೆಚ್ಚಲು ಕೊಯ್ದ ದಾರೂಳರನ್ನು ಬಂಧಿಸದಿದ್ದರೇ ಜಮೀರ್ ವಿರುದ್ಧ ಹೋರಾಟ: ಮುತಾಲಿಕ್ ಎಚ್ಚರಿಕೆ
ಚಾಮರಾಜಪೇಟೆಯಲ್ಲಿ ಇದ್ದ 3 ಹಸುವಿನ ಕೆಚ್ಚಲು ಕೊಯ್ದಿದ್ದಾರೆ. ಇದು ನೀಚ ಕೃತ. ಇಸ್ಲಾಮಿಕ್ ಶಕ್ತಿಯ ಪ್ರದರ್ಶನ ಆಗುತ್ತಿದೆ, ರಾಕ್ಷಸ ಕೃತ್ಯಕ್ಕೆ ಇದು ಉದಾಹರಣೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ್ ಅವರು, ಜಮೀರ್ ಅಹ್ಮದ್ ಇದು ನಿಮ್ಮ ಕ್ಷೇತ್ರದಲ್ಲಿ ಆಗಿದೆ. ಇದನ್ನು ತಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಹಸು ಹಿಂದೂಗಳಿಗೆ ಅತ್ಯಂತ ಪೂಜ್ಯ ಪ್ರಾಣಿಯಾಗಿದೆ. ಅದು ನಮಗೆ ಅನ್ನ ಹಾಕುತ್ತೆ, ಗೊಬ್ಬರ ಕೊಡುತ್ತೆ, ಔಷಧಿ ಕೊಡುತ್ತದೆ. ರೈತರ ಬೆನ್ನೆಲುಬು ಅದು. ಅದರ ಕೆಚ್ಚಲು ಕೊಯ್ದ ನೀಚರನ್ನು ಒದ್ದು ಒಳಗಡೆ ಹಾಕದಿದ್ದರೆ ಶ್ರೀರಾಮ ಸೇನೆಯಿಂದ ಜಮೀರ್ ವಿರುದ್ಧ ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ, ಇದು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ದ್ವೇಷ ಇರಲಿ, ಹೀಗೆ ಪ್ರಾಣಿಗಳ ಮೇಲೆ ದೌರ್ಜನ್ಯ ಮಾಡುವುದು ಅಕ್ಷಮ್ಯ ಅಪರಾಧ ! – ಸಚಿವ ಜಮೀರ್ ಅಹಮದ್
ರಸ್ತೆಯಲ್ಲಿ ಮಲಗಿದ್ದಂತಹ ಮೂರು ಹಸುಗಳ ಕೆಚ್ಚಲುಗಳನ್ನು ಕಿಡಿಗೇಡಿಗಳು ಕೊಯ್ದಿರುವ ಹೀನ ಕೃತ್ಯವಾಗಿದೆ. ಸಚಿವರಾದ ಜಮೀರ್ ಅಹಮದ್ ಅವರು ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಯಾವುದೇ ದ್ವೇಷ ಇರಲಿ, ಹೀಗೆ ಪ್ರಾಣಿಗಳ ಮೇಲೆ ದೌರ್ಜನ್ಯ ಮಾಡುವುದು ಅಕ್ಷಮ್ಯ ಅಪರಾಧ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಸೂಚಿಸಿದ್ದೇನೆ. ಇನ್ನು ನೊಂದ ಕುಟುಂಬದೊಂದಿಗೆ ನಾನಿರಲಿದ್ದು, ಮೂರು ಹೊಸ ಹಸುಗಳನ್ನು ನಾನೇ ಕೊಡಿಸುವೆ ಎಂದು ಇದೇ ವೇಳೆ ಭರವಸೆ ನೀಡಿದರು.