ಪುಸ್ತಕದಲ್ಲಿ ಹಿಂದೂಗಳನ್ನು ಅಪರಾಧಿಗಳು ಎಂದು ಪರಿಗಣಿಸಲಾಗಿತ್ತು
ಜಯಪುರ (ರಾಜಸ್ಥಾನ) – ರಾಜಸ್ಥಾನದಲ್ಲಿ ಹಿಂದಿನ ಕಾಂಗ್ರೆಸ ಸರಕಾರವು ಶಾಲಾ ಪಠ್ಯಕ್ರಮದಲ್ಲಿ `ಅದೃಶ್ಯ ಲೋಗ-ಉಮ್ಮೀದ ಔರ ಸಾಹಸ ಕಿ ಕಹಾನಿಯಾ’ ಎಂಬ ಹೆಸರಿನ ಪುಸ್ತಕವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಿತ್ತು. ಈಗಿನ ಭಾಜಪ ಸರಕಾರವು ಈ ಪುಸ್ತಕವನ್ನು ಶಾಲಾ ಪಠ್ಯಕ್ರಮದಿಂದ ತೆಗೆದುಹಾಕುವ ನಿರ್ಣಯ ತೆಗೆದುಕೊಂಡಿದೆ. ಸರಕಾರವು `ಈ ಪುಸ್ತಕದಲ್ಲಿ ಗೋಧ್ರಾ ಹತ್ಯಾಕಾಂಡದ ಬಗ್ಗೆ ತಪ್ಪು ಮಾಹಿತಿಯನ್ನು ನೀಡಲಾಗಿದ್ದರಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ’ ಎಂಬ ಹೇಳಿಕೆಯನ್ನು ನೀಡಿದೆ. 2002ರಲ್ಲಿ ಗುಜರಾತಿನ ಗೋಧ್ರಾ ರೈಲು ನಿಲ್ದಾಣದಲ್ಲಿ ನಿಂತಿದ್ದ ಸಾಬರಮತಿ ಎಕ್ಸಪ್ರೆಸ್ ನ ಎರಡು ಬೋಗಿಗಳನ್ನು ಮುಸ್ಲಿಮರು ಸುಟ್ಟಿದ್ದರು. ಇದರಲ್ಲಿ 59 ಕಾರಸೇವಕರ ಮರಣವಾಗಿತ್ತು.
1. ರಾಜಸ್ಥಾನದ ಶಿಕ್ಷಣ ಸಚಿವರಾದ ಮದನ ದಿಲಾವರರವರು ಮಾತನಾಡಿ, ಈ ಪುಸ್ತಕದಲ್ಲಿ ಗೋಧ್ರಾ ಹತ್ಯಾಕಾಂಡದ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಹಾಗೆಯೇ ಎರಡು ಸಮಾಜಗಳ ನಡುವೆ ಒಡಕು ಮೂಡಿಸುವ ಉದ್ದೇಶಪೂರ್ವಕ ಪ್ರಯತ್ನ ನಡೆದಿದೆ. ಈ ಪುಸ್ತಕದಲ್ಲಿ ಸಾಬರಮತಿ ಎಕ್ಸಪ್ರೆಸ್ಸಿನ ಬೋಗಿಗಳಿಗೆ ಯಾರು ಬೆಂಕಿ ಹಚ್ಚಿದರೋ, ಅವರು ಮಾಡಿರುವುದು ಸೂಕ್ತವಾಗಿತ್ತು ಎಂದೂ ಉಲ್ಲೇಖಿಸಲಾಗಿದೆ. ಹಿಂದೂಗಳನ್ನು ಅಪರಾಧಿಗಳಂತೆ ಬಿಂಬಿಸಲಾಗಿದೆ. ಗೋಧ್ರಾ ಪ್ರಕರಣ ನಡೆದಾಗ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಈ ಪುಸ್ತಕದಲ್ಲಿ ನರೇಂದ್ರ ಮೋದಿಯವರ ಅಪಮಾನ ಮಾಡಲಾಗಿದೆ. ಆದುದರಿಂದ, ನಾವು ಈ ಪುಸ್ತಕವನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದೇವೆ, ಎಂದು ಹೇಳಿದರು.
2. ಶಿಕ್ಷಣ ಸಚಿವ ಮದನ ದಿಲಾವರ ರವರು ಈ ಪುಸ್ತಕದ ಪ್ರಕರಣದಲ್ಲಿ ಮಾಜಿ ಶಿಕ್ಷಣ ಸಚಿವ ಮತ್ತು ಕಾಂಗ್ರೆಸ್ ನಾಯಕ ಗೋವಿಂದ ಸಿಂಗ ದೋಟಾಸರಾ ವಿರುದ್ಧ ಆರೋಪಿಸಿದ್ದಾರೆ. ಗೋವಿಂದ ಸಿಂಗರವರು ಉದ್ದೇಶಪೂರ್ವಕವಾಗಿ ಈ ಪುಸ್ತಕವನ್ನು ಮಕ್ಕಳ ಪಠ್ಯಕ್ರಮದಲ್ಲಿ ಸೇರಿಸಿದ್ದಾರೆ ಎಂದು ದಿಲಾವರರವರು ಹೇಳಿದರು.
3. ಗೋವಿಂದ ಸಿಂಗ ರವರು ಮಾತನಾಡಿ, ನಾನು ಯಾವುದೇ ಪುಸ್ತಕಕ್ಕೆ ಒಪ್ಪಿಗೆ ನೀಡಿಲ್ಲ. ಮದನ ದಿಲಾವರ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.