ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶದನಂತರ, ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮದ ಮೇಲೆ 150 ಪೋಲೀಸರಿಂದ ಪರಿಶೀಲನೆ !

ಕೊಯಮತ್ತೂರು (ತಮಿಳುನಾಡು) – ತಮಿಳುನಾಡಿನ ತೊಂಡಾಮುಥೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ‘ಇಶಾ ಫೌಂಡೇಶನ್’ ಆಶ್ರಮದ ಮೇಲೆ ಸಹಾಯಕ ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಯವರ ನೇತೃತ್ವದಲ್ಲಿ 150 ಪೊಲೀಸರ ತಂಡ ದಾಳಿ ನಡೆಸಿದೆ. ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶದಂತೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದರು. ಫೌಂಡೆಶನ್ ವಿರುದ್ಧ ದಾಖಲಾಗಿರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳ ಬಗ್ಗೆ ನ್ಯಾಯಾಲಯವು ಪೊಲೀಸರಿಂದ ವರದಿ ಕೇಳಿದೆ. ಅದಕ್ಕಾಗಿ ಈ ಶೋಧ ನಡೆಸಲಾಗಿದೆ. ಆಶ್ರಮದಲ್ಲಿ ತಂಗಿರುವವರ ವಿವರವಾದ ಪರಿಶೀಲನೆ ನಡೆಸುವುದು ಮತ್ತು ಅಲ್ಲಿ ಇರುವ ಎಲ್ಲಾ ಕೊಠಡಿಗಳನ್ನು ಶೋಧಿಸುವುದು ಕಾರ್ಯಾಚರಣೆಯ ಉದ್ದೇಶವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

2 ಹೆಣ್ಣು ಮಕ್ಕಳನ್ನು ಬಂದಿಯಾಗಿ ಇಟ್ಟು ಕೊಂಡಿದ್ದ ದೂರಿನ ಬಳಿಕ ಪರಿಶೀಲನೆ !

ನಿವೃತ್ತ ಪ್ರಾಧ್ಯಾಪಕ ಡಾ.ಎಸ್. ಕಾಮರಾಜ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿತ್ತು. ಕಾಮರಾಜ ಅವರು, ತಮ್ಮ 2 ಹೆಣ್ಣು ಮಕ್ಕಳನ್ನು ಫೌಂಡೇಶನ್‌ನಲ್ಲಿ ಬಂಧಿಸಿಡಲಾಗಿದೆ ಎಂದು ದಾವೆ ಮಾಡಿದ್ದಾರೆ. ಅವರು, ‘ಈಶಾ ಫೌಂಡೇಶನ್’ ಜನರ ಬ್ರೈನ್ ವಾಶ್ ಮಾಡಿ ಅವರನ್ನು ಸನ್ಯಾಸಿಗಳನ್ನಾಗಿ ಮಾಡುತ್ತಿದೆ ಮತ್ತು ಅವರಿಗೆ ಅವರ ಕುಟುಂಬದವರೊಂದಿಗೆ ಸಂಪರ್ಕಿಸಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.