ಕರ್ನಾಟಕ ಉಚ್ಚನ್ಯಾಯಾಲಯದ ಧಾರವಾಡ ವಿಭಾಗೀಯ ಪೀಠದಲ್ಲಿ ನಡೆದ ಘಟನೆ
ಕೊಪ್ಪಳ – ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಹೋಗಿದ್ದ ದಂಪತಿಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಖಂಡಪೀಠದ ನ್ಯಾಯಮೂರ್ತಿ ಶ್ರೀಕೃಷ್ಣ ದೀಕ್ಷಿತರು ಗವಿಸಿದ್ದೇಶ್ವರ ಸ್ವಾಮೀಜಿಯವರ ಮಧ್ಯಸ್ಥಿಕೆಯಿಂದ ಸಮಸ್ಯೆಯನ್ನು ಬಗೆಹರಿಸಿ ಒಟ್ಟಿಗೆ ಬಾಳುವಂತೆ ಸಲಹೆ ನೀಡಿದರು.
1. ಗದಗನ ದಂಪತಿಗಳು ನಾಲ್ಕು ವರ್ಷಗಳ ಹಿಂದೆ ಧಾರವಾಡ ಉಚ್ಚನ್ಯಾಯಾಲಯಕ್ಕೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ 17 ರಂದು ಅದರ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿ ಶ್ರೀ ಕೃಷ್ಣ ದೀಕ್ಷಿತ ಅವರು, ಪತಿ-ಪತ್ನಿಯ ನಡುವೆ ಸಮಸ್ಯೆಗಳು ಸಹಜವಾಗಿವೆ. ಈ ಆಧಾರದಲ್ಲಿ ಪ್ರತ್ಯೇಕಗೊಳ್ಳುವುದು ಸೂಕ್ತವಲ್ಲ. ಒಂದು ವೇಳೆ ಮಾನಸಿಕ ಸಮಸ್ಯೆಗಳಿದ್ದರೆ ಮನೋವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಿರಿ ಎಂದು ಹೇಳಿದರು.
2. ಅದಕ್ಕೆ ದಂಪತಿಗಳು ‘ಈ ಮೊದಲೇ ಮನೋವೈದ್ಯರ ಬಳಿಗೆ ಹೋಗಿದ್ದೆವು’, ಎಂದು ಹೇಳಿದರು. ಆಗ ನ್ಯಾಯಮೂರ್ತಿಗಳು, ಹಾಗಿದ್ದರೆ ಮಠಾಧೀಶರ ಕಡೆಗೆ ಹೋಗಿರಿ ಎಂದು ಹೇಳಿದರು.
3. ಗಂಡ ಗದಗಿನ ತೋಂಟದಾರ್ಯ ಮಠದ ಸ್ವಾಮೀಜಿಗಳ ಬಳಿಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದನು; ಆದರೆ ಪತ್ನಿಯು ಇದಕ್ಕೆ ಒಪ್ಪಲಿಲ್ಲ. ನ್ಯಾಯಮೂರ್ತಿಯವರು, ‘ಹಾಗಿದ್ದರೆ ಯಾವ ಸ್ವಾಮೀಜಿಯವರ ಕಡೆಗೆ ಹೋಗುತ್ತೀರಿ? ನೀವೇ ಹೇಳಿರಿ’ ಎಂದು ಕೇಳಿದಾಗ, `ನಾವು ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಗಳ ಬಳಿಗೆ ಹೋಗುತ್ತೇವೆ’ ಎಂದು ಹೇಳಿದಳು. ಅದಕ್ಕೆ ನ್ಯಾಯಮೂರ್ತಿಗಳು `ಬಹಳ ಒಳ್ಳೆಯದು, ಗವಿಸಿದ್ದೇಶ್ವರ ಸ್ವಾಮೀಜಿಗಳು ವಿವೇಕಾನಂದರಂತೆ ಇದ್ದಾರೆ. ನಾನು ಅವರ ಪ್ರವಚನವನ್ನು ಕೇಳಿದ್ದೇನೆ. ನೀವು ಅವರ ಬಳಿಯೇ ಹೋಗಿರಿ’. ಎಂದು ಹೇಳಿದರು.
4. ನ್ಯಾಯಮೂರ್ತಿಗಳ ಆದೇಶದಂತೆ ಪತಿ-ಪತ್ನಿ ಇಬ್ಬರೂ ಸೆಪ್ಟೆಂಬರ್ ಅಂತ್ಯದವರೆಗೆ ಕೊಪ್ಪಳದ ಗವಿಸಿದ್ಧೇಶ್ವರ ಮಠಕ್ಕೆ ಹೋಗುವವರಿದ್ದಾರೆ. ಗವಿಮಠದ ಪರಂಪರೆಯಲ್ಲಿ ಇದು ಮೊದಲ ಇಂತಹ ವಿಶೇಷ ಪ್ರಕರಣವಾಗಿದೆ.