ಇನ್ನು ಕೈಗೆಟಗುವ ದರದಲ್ಲಿ ಕ್ಯಾನ್ಸರ್ ಔಷಧಿ ಲಭ್ಯವಾಗಲಿದೆ

ಜಿಎಸ್​ಟಿ ಸಭೆಯಲ್ಲಿ ಘೋಷಣೆ

ನವದೆಹಲಿ – ಇನ್ನು ಮುಂದೆ ಕ್ಯಾನ್ಸರ್ ರೋಗದ ಔಷಧಿಗಳ ಮೇಲೆ ಶೇಕಡಾ ೧೨% ಬದಲು ಶೇಖಡಾ ೫% ರಷ್ಟು ಜಿಎಸ್​ಟಿ ವಿಧಿಸಲಾಗುವುದು. ಗ್ರಾಹಕರಿಗೆ ಈಗ ಕಡಿಮೆ ಬೆಲೆಯಲ್ಲಿ ಈ ಔಷಧಿಗಳು ಲಭ್ಯವಾಗಲಿವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಸಪ್ಟೆಂಬರ್ ೯ರಂದು ವಸ್ತು ಮತ್ತು ಸೇವಾ ತೆರಿಗೆಯ(ಜಿಎಸ್​ಟಿ) ಪರಿಷತ್ತಿನ ೫೪ನೇ ಸಭೆ ನಡೆಯಿತು. ಈ ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

ಧಾರ್ಮಿಕ ಯಾತ್ರೆ ಮಾಡುವವರಿಗೆ ನಿರಾಳ

ಈ ಸಭೆಯಲ್ಲಿ ಧಾರ್ಮಿಕ ಯಾತ್ರೆ ಮಾಡುವವರೆಗೂ ಕೂಡ ಆಶ್ವಾಸನೆ ನೀಡಲಾಗಿದೆ. ಧಾರ್ಮಿಕ ಯಾತ್ರೆಗಳಿಗಾಗಿ ಹೆಲಿಕಾಪ್ಟರ್ ಸೇವೆ ಉಪಯೋಗಿಸಿದರೆ ಈಗ ಶೇಕಡಾ ೧೮%ರ ಬದಲು ಶೇಕಡಾ ೫% ರಷ್ಟು ಜಿಎಸ್​ಟಿ ನೀಡಬೇಕಾಗುವುದು. ಉತ್ತರಾಖಂಡದ ಹಣಕಾಸು ಸಚಿವ ಪ್ರೇಮಚಂದ ಅಗ್ರವಾಲ್ ಅವರು ಮಾಧ್ಯಮಗಳಿಗೆ ಈ ಮಾಹಿತಿ ನೀಡಿದರು. ಜಿಎಸ್​ಟಿ ಸಭೆಯಲ್ಲಿ ನಮ್ಮ ಮನವಿಯನ್ನು ಸ್ವೀಕರಿಸಲಾಗಿದೆ. ಈ ಸೌಲಭ್ಯ ಶೇರಿಂಗ್ ಹೆಲಿಕಾಪ್ಟರ್ ಸೇವೆ (ಅನೇಕ ಪ್ರವಾಸಿಗಳು ಬಳಸುವ ಹೆಲಿಕಾಪ್ಟರ್) ಪಡೆಯುವವರಿಗೆ ಮಾತ್ರ ದೊರೆಯುವುದು. ಚಾರ್ಟರ್ಡ್ ಹೆಲಿಕಾಪ್ಟರ್ ಸೇವೆಯ (ವಿಶೇಷ ಹೆಲಿಕಾಪ್ಟರ್) ಲಾಭ ಪಡೆಯುವವರಿಗೆ ಶೇಕಡಾ ೧೮% ರಷ್ಟು ಜಿಎಸ್​ಟಿ ನೀಡಬೇಕಾಗುವುದು ಎಂದವರು ತಿಳಿಸಿದರು.

ಆರೋಗ್ಯ- ಜೀವ ವಿಮಾ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ವಸ್ತು ಮತ್ತು ಸೇವಾ ತೆರಿಗೆ ಪರಿಷತ್ತಿನ ಸಭೆಯಲ್ಲಿ ಆರೋಗ್ಯ ವಿಮಾ ಮತ್ತು ಜೀವ ವಿಮಾ ಇವುಗಳ ಕಂತುಗಳಿಗಾಗಿ ನೀಡುವ ತೆರಿಗೆ ಕಡಿಮೆ ಮಾಡುವ ಬಗ್ಗೆ ಚರ್ಚೆ ನಡೆಯಿತು; ಆದರೆ ಆ ಬಗ್ಗೆ ಸದ್ಯ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಈ ಕುರಿತು ಹೆಚ್ಚಿನ ಅಧ್ಯಯನ ನಡೆಸುವಂತೆ ಕೇಂದ್ರ ಸಚಿವ ಸಂಪುಟಕ್ಕೆ ತಿಳಿಸಲಾಗಿದೆ. ಅಕ್ಟೋಬರ್ ೨೦೨೪ ರಂದು ನಡೆಯುವ ವಸ್ತು ಮತ್ತು ಸೇವಾ ತೆರಿಗೆಯ ಪರಿಷತ್ತಿನ ಸಭೆಯಲ್ಲಿ ಮತ್ತೊಮ್ಮೆ ಚರ್ಚೆ ನಡೆಯಲಿದೆ.

ಜಿಎಸ್​ಟಿ ಪರಿಷತ್ತು ಪ್ರಸ್ತುತ ಶೈಕ್ಷಣಿಕ ಸಂಸ್ಥೆಗಳ ಸಂಶೋಧನೆಗಾಗಿ ದೊರೆಯುವ ಅನುದಾನದ ಮೇಲಿನ ತೆರಿಗೆಯ ಅಂಶಗಳನ್ನು ಕೂಡ ಫಿಟಮೆಂಟ್ ಸಮಿತಿಗೆ ಕಳುಹಿಸಿದೆ. ಸಮಿತಿಯ ವರದಿ ಬಂದ ನಂತರ ಪರಿಷತ್ತು ಈ ಕುರಿತು ನಿರ್ಣಯ ತೆಗೆದುಕೊಳ್ಳಲಿದೆ. ಆನ್ಲೈನ್ ಪೇಮೆಂಟ್ ಮೇಲೆ ಜಿಎಸ್​ಟಿ ಪಾವತಿಸುವ ವಿಷಯವನ್ನು ಕೂಡ ಇದೇ ಸಮಿತಿಗೆ ಕಳುಹಿಸಲಾಗಿದೆ. ಈ ಸಮಿತಿಯಲ್ಲಿ ಕೇಂದ್ರ ಹಣಕಾಸು ಸಚಿವರ ಜೊತೆಗೆ ಎಲ್ಲ ರಾಜ್ಯಗಳ ಹಣಕಾಸು ಸಚಿವರು ಕೂಡ ಇದ್ದಾರೆ.