ಕೋಲಕಾತಾ – ಬಂಗಾಳ ವಿಧಾನಸಭೆ ‘ಅಪರಾಜಿತಾ’ ಬಲಾತ್ಕಾರ ವಿರೋಧಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ವಿರೋಧ ಪಕ್ಷದವರೂ ಈ ಮಸೂದೆಗೆ ಸಂಪೂರ್ಣ ಬೆಂಬಲ ನೀಡಿದರು. ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಳೆದ ತಿಂಗಳು ಓರ್ವ ಮಹಿಳಾ ವೈದ್ಯೆಯ ಮೇಲೆ ಬಲಾತ್ಕಾರ ಮಾಡಿ ಹತ್ಯೆ ಮಾಡಿರುವ ಘಟನೆಯ ಬಳಿಕ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ರಾಜ್ಯ ಕಾನೂನು ಸಚಿವ ಮಲಯ ಘಟಕ್ ಅವರು ಮಸೂದೆಯನ್ನು ಮಂಡಿಸಿದರು. ಈ ಮಸೂದೆಯಲ್ಲಿ ಬಲಾತ್ಕಾರದ ಪ್ರಕರಣದಲ್ಲಿ ಸಂತ್ರಸ್ತೆ ಮರಣ ಹೊಂದಿದರೆ ಅಥವಾ ಅವಳು ಕೋಮಾಕ್ಕೆ ಹೋದರೆ, ಅಪರಾಧಿಗೆ ಗಲ್ಲು ಶಿಕ್ಷೆ ನೀಡುವ ನಿಬಂಧನೆ ಮಾಡಲಾಗಿದೆ.
ಬಲಾತ್ಕಾರ ಮತ್ತು ಹತ್ಯೆ ಮಾಡುವ ಅಪರಾಧಿಗಳಿಗೆ ಮರಣದಂಡನೆ !
ಈ ಮಸೂದೆಯ ಪ್ರಕಾರ, ಬಲಾತ್ಕಾರ ಮತ್ತು ಹತ್ಯೆ ಮಾಡುವ ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ಅವಕಾಶವಿದೆ. ಅಂತಹ ಪ್ರಕರಣಗಳಲ್ಲಿ ಪೊಲೀಸರು 21 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಮಸೂದೆಯಲ್ಲಿ ಆರೋಪಿಗಳ ವಿರುದ್ಧ ಆರೋಪಪತ್ರ ಸಲ್ಲಿಸಿದ ನಂತರ 36 ದಿನಗಳಲ್ಲಿ ಮರಣದಂಡನೆ ವಿಧಿಸಲು ನಿಬಂಧನೆಗಳಿವೆ. ಈ ಮಸೂದೆಯಲ್ಲಿ ಅಪರಾಧಿಗೆ ಸಹಾಯ ಮಾಡಿದರೆ ಆತನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.