ನವ ದೆಹಲಿ – ಬಾಕಿ ಉಳಿದಿರುವ ಪ್ರಕರಣಗಳು ಮತ್ತು ಬ್ಯಾಕ್‌ಲಾಗ್ ಇದು ನ್ಯಾಯಾಂಗ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ. ಬಲಾತ್ಕಾರದಂತಹ ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪು ಒಂದು ಪೀಳಿಗೆ ಕಳೆದು ಹೋದ ಬಳಿಕ ಬರುತ್ತದೆ. ಇದರಿಂದ ‘ನ್ಯಾಯಪ್ರಕ್ರಿಯೆಯಲ್ಲಿ ಸೂಕ್ಷ್ಮತೆ ಉಳಿದಿಲ್ಲ’, ಎಂದು ಸಾಮಾನ್ಯ ಜನರಿಗೆ ಅನಿಸುತ್ತದೆ. ನ್ಯಾಯಾಲಯದಲ್ಲಿ ಶೀಘ್ರ ನ್ಯಾಯ ದೊರಕಿಸಲು ಪ್ರಕರಣದ ವಿಚಾರಣೆಯನ್ನು ಮುಂದೂಡುವ ಪದ್ಧತಿಯನ್ನು ಕೊನೆಗೊಳಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಇಲ್ಲಿ ಉದ್ಗರಿಸಿದರು. ಅವರು ನವದೆಹಲಿಯ ಭಾರತ ಮಂಡಪಂನಲ್ಲಿ ನಡೆದ ಜಿಲ್ಲಾ ನ್ಯಾಯಾಂಗ ಮಂಡಳಿಯ ರಾಷ್ಟ್ರೀಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ರಾಜ್ಯ ಸಚಿವ (ಸ್ವತಂತ್ರ ಪ್ರಭಾರ) ಅರ್ಜುನ ರಾಮ ಮೇಘವಾಲ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳ ಹಸ್ತದಿಂದ ಸರ್ವೋಚ್ಚ ನ್ಯಾಯಾಲಯದ ಧ್ವಜ ಮತ್ತು ಚಿಹ್ನೆಯನ್ನು ಪ್ರಕಾಶನಗೊಳಿಸಲಾಯಿತು.
ಕ್ರಿಮಿನಲ್‌ಗಳು ಮುಕ್ತವಾಗಿ ತಿರುಗಾಡುತ್ತಿರುವುದು ಮತ್ತು ಸಂತ್ರಸ್ತರು ಭಯದ ನೆರಳಿನಲ್ಲಿ ಜೀವಿಸುವುದು ಖೇದಕರ !
ರಾಷ್ಟ್ರಪತಿ ಮುರ್ಮು ತಮ್ಮ ಮಾತನ್ನು ಮುಂದುವರಿಸಿ, ನ್ಯಾಯವನ್ನು ರಕ್ಷಿಸುವುದು ಎಲ್ಲ ನ್ಯಾಯಾಧೀಶರ ಜವಾಬ್ದಾರಿಯಾಗಿದೆ ಸಾಮಾನ್ಯ ಮನುಷ್ಯನು ನ್ಯಾಯಾಲಯಕ್ಕೆ ಬರುತ್ತಲೇ ಅವನ ಒತ್ತಡವು ಹೆಚ್ಚಾಗುತ್ತದೆ. ನ್ಯಾಯ ಸಿಗುವವರೆಗೆ ಅವರ ಮುಖದಲ್ಲಿನ ನಗು ಕಳೆದುಹೋಗಿರುತ್ತದೆ. ಮತ್ತು ಅನೇಕ ಸಂದರ್ಭಗಳಲ್ಲಿ ಅವರ ಆಯುಷ್ಯವೂ ಮುಗಿದಿರುತ್ತದೆ. ಇದನ್ನು ಆಳವಾಗಿ ವಿಚಾರ ಮಾಡುವುದು ಆವಶ್ಯಕವಿದೆ. ಅನೇಕ ಘಟನೆಗಳಲ್ಲಿ, ಅನೇಕ ಜನರು ಅಪರಾಧಗಳನ್ನು ಮಾಡಿಯೂ ಮುಕ್ತವಾಗಿ ತಿರುಗಾಡುತ್ತಿರುತ್ತಾರೆ. ಆದರೆ ಸಂತ್ರಸ್ತರು ಭಯದಿಂದ ಬದುಕುತ್ತಿರುತ್ತಾರೆ, ಇದು ನಮ್ಮ ಸಾಮಾಜಿಕ ಜೀವನದಲ್ಲಿನ ಒಂದು ಖೇದಕರ ವಿಷಯವಾಗಿದೆ ಎಂದು ಅವರು ಹೇಳಿದರು.