ಋಷಿಪಂಚಮಿ

ಶ್ರೀ ಗಣೇಶಚತುರ್ಥಿಯ ನಂತರ ಕೂಡಲೇ ಋಷಿಪಂಚಮಿ (೮.೯.೨೦೨೪) ಬರುತ್ತದೆ. ಇದು ಋಷಿಗಳ ಸ್ಮರಣೆಯನ್ನು ಮಾಡಿ ಈ ದಿನ ಅವರಂತೆ ಆಹಾರವನ್ನು ಸೇವಿಸುವ ದಿನವಾಗಿದೆ. ಅಂದು ಎತ್ತುಗಳ ಪರಿಶ್ರಮದಿಂದಾದ ಆಹಾರವನ್ನು ತಿನ್ನಬಾರದು. ಋಷಿಗಳು ಸಮಾಜಕ್ಕಾಗಿ ಯಾವ ಮಹಾನ ಕಾರ್ಯವನ್ನು ಮಾಡಿದ್ದಾರೆಯೋ, ಅದಕ್ಕಾಗಿ ಇದು ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ ! ಈ ದಿನ ಋಷಿಗಳ ಸ್ಮರಣೆಯನ್ನು ಮಾಡಿ ಸಮಾಜದಲ್ಲಿನ ಋಷಿತುಲ್ಯ ಜೀವನವನ್ನು ಜೀವಿಸುವ ವ್ಯಕ್ತಿಗಳ ಸತ್ಕಾರ ಮಾಡಬೇಕು. ಸಮಾಜದ ನೈತಿಕ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ಪ್ರಯತ್ನಿಸಬೇಕು.

೧. ಋಷಿಪಂಚಮಿಯ ವ್ರತದ ಆಹಾರ

ಆಹಾರ ಸಾಧ್ಯವಾದಷ್ಟು ಹಸಿ ತರಕಾರಿಗಳದ್ದಾಗಿರಬೇಕು. ಅದರಲ್ಲಿ ಉಪ್ಪು ಹಾಕಬಾರದು. ನೈಸರ್ಗಿಕ ಮತ್ತು ಶುದ್ಧ ಸಾತ್ತ್ವಿಕ ಆಹಾರವನ್ನು ಸೇವಿಸಬೇಕು. ನಿಸರ್ಗದಲ್ಲಿ ಬೆಳೆದ  ಗಡ್ಡೆಗೆಣಸುಗಳನ್ನು ಸೇವಿಸಬೇಕು. ಕಪ್ಪು ಉಪ್ಪು; ಆದರೆ ಅದರ ಮೇಲೆ ಯಾವುದೇ ಪ್ರಕ್ರಿಯೆ ಮಾಡದಿರುವುದು, ಈ ರೀತಿ ಪದ್ಧತಿಯಿದೆ. ಕೀಟಕ ಮತ್ತು ಶಿಲೀಂಧ್ರನಾಶಕಗಳನ್ನು ಬಳಸಿದ ‘ಹೈಬ್ರಿಡ್’ ತರಕಾರಿ ಮತ್ತು ಹಣ್ಣುಗಳು ಬೇಡ.

೨. ವ್ರತವನ್ನು ಹೇಗೆ ಮಾಡಬೇಕು ?

ಮಾಸಿಕ ಸರದಿಯಲ್ಲಿ ಸ್ಪರ್ಶಿಸಿದ ದೋಷಗಳನ್ನು ದೂರ ಗೊಳಿಸಲು ಭಾದ್ರಪದ ಶುಕ್ಲ ಪಂಚಮಿಯ ದಿನದಂದು ಮತ್ತು ಈ ‘ನೈವಸ್ತನ ಮನ್ವಂತರ’ದ ಸಪ್ತರ್ಷಿ ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ ಮತ್ತು ಅವರ ಪತ್ನಿ ಅರುಂಧತಿ ಈ ೮ ಜನರ ಪೂಜೆಯನ್ನು ಇಂದು ಮಾಡಲಾಗುತ್ತದೆ. ‘ಈ ವ್ರತವನ್ನು ಕೇವಲ ಸ್ತ್ರೀಯರೇ ಮಾಡಬೇಕು’, ಎಂಬುದು ಒಂದು ತಪ್ಪುಕಲ್ಪನೆಯಾಗಿದೆ. ಈ ವ್ರತವನ್ನು ಎಲ್ಲರೂ ಮಾಡಬೇಕು, ‘ಋಷಿಮುನಿಗಳು ಯಾವ ಕೆಲವು ನಿಯಮಗಳನ್ನು ಹಾಕಿದ್ದಾರೆಯೋ, ಅವು ನಮ್ಮ ಕಲ್ಯಾಣಕ್ಕಾಗಿಯೇ ಇವೆ’, ಎಂಬುದನ್ನು ಗಮನದಲ್ಲಿಡಬೇಕು. ಋಷಿಗಳನ್ನು ಅಂತಃಕರಣದಿಂದ ಸ್ಮರಿಸಬೇಕು ಮತ್ತು ಮುಂದಿನ ಶ್ಲೋಕವನ್ನು ಹೇಳಬೇಕು.

ನಮೋಽಸ್ತು ಋಷಿವೃನ್ದೇಭ್ಯೋ ದೇವರ್ಷಿಭ್ಯೋ ನಮೋ ನಮಃ |

ಸರ್ವಪಾಪಹರೇಭ್ಯೋ ಹಿ ವೇದವಿದ್ಭ್ಯೋ ನಮೋ ನಮಃ ||

ಅರ್ಥ : ಎಲ್ಲ ಪಾಪಗಳನ್ನು ಹರಣ ಮಾಡುವ ಮತ್ತು ವೇದವಿದ್ಯೆ ಯನ್ನು ಅರಿತಿರುವ ಎಲ್ಲ ಋಷಿಗಳು ಮತ್ತು ದೇವರ್ಷಿಗಳಿಗೆ ನಮಸ್ಕಾರಗಳಿರಲಿ.

ಕಶ್ಯಪೋಽತ್ರಿರ್ಭರದ್ವಾಜೋ ವಿಶ್ವಾಮಿತ್ರಸ್ತು ಗೌತಮಃ | ಜಮದಗ್ನಿರ್ವಸಿಷ್ಠಶ್ಚ ಸಪ್ತೈತೇ ಋಷಯಃ ಸ್ಮೃತಾಃ ||

ಅರ್ಥ : ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಸಿಷ್ಠ ಇವರನ್ನು ಸಪ್ತರ್ಷಿಗಳೆಂದು ನಂಬಲಾಗುತ್ತದೆ.

ಈ ವ್ರತದಂದು ಆಯುರ್ವೇದದ ದಂತಮಂಜನವನ್ನು ಬಳಸಬೇಕು. ಸಾದಾ ತಣ್ಣೀರಿನಿಂದ ಸ್ನಾನ ಮಾಡಬೇಕು. ಒಂದು ಮಣಿಯ ಮೇಲೆ ೯ ಅಡಕೆಗಳನ್ನಿಟ್ಟು ಪೂಜೆ ಮಾಡಬೇಕು. ನಮ್ಮ ಗೋತ್ರದ ಪ್ರತೀಕವಾಗಿರುವ ಋಷಿಗಳ ಛಾಯಾಚಿತ್ರ, ಅಥವಾ ಶ್ರೀ ಗುರುದೇವ ದತ್ತಾತ್ರೆಯರ ಚಿತ್ರದ ಪೂಜೆಯನ್ನು ಮಾಡಬೇಕು. ಉಳುಮೆ ಮಾಡದಿರುವ ಭೂಮಿಯಲ್ಲಿ ಬೆಳೆಸಿದ ಧಾನ್ಯಗಳು, ಗಡ್ಡೆಗೆಣಸುಗಳು ಮತ್ತು ಹಣ್ಣುಗಳನ್ನು ಸೇವಿಸಬೇಕು.

‘ಭವಿಷ್ಯ ಪುರಾಣ’ದಲ್ಲಿ ಋಷಿಪಂಚಮಿಯ ಕುರಿತಾದ ಸಾಂಕೇತಿಕ ಕಥೆಯಿದೆ. ಒಂದು ಕುಟುಂಬದಲ್ಲಿ ಮನೆಯಲ್ಲಿ ಮೈಲಿಗೆಯಾಗಿರುವುದರಿಂದ ಪತ್ನಿಗೆ ಶ್ವಾನದ (ನಾಯಿ) ಮತ್ತು ಪತಿಗೆ (ಎತ್ತು) ವೃಷಭದ ಜನ್ಮವು ಪ್ರಾಪ್ತವಾಯಿತು. ಅವರ ಮಕ್ಕಳು ಈ ಪಾಪದ ಪರಿಹಾರಕ್ಕಾಗಿ ಋಷಿಪಂಚಮಿಯ ವ್ರತವನ್ನು ಮಾಡಿರುವುದರಿಂದ ಅವರಿಗೆ ಸದ್ಗತಿ ಪ್ರಾಪ್ತವಾಗುತ್ತದೆ. ಈ ದಿನದಂದು ದಿನವಿಡಿ ಉಪವಾಸವನ್ನು ಮಾಡಬೇಕು. ಪರಮೇಶ್ವರ ಮತ್ತು ಋಷಿಗಳ ಚಿಂತನೆಯಲ್ಲಿ ಸಮಯವನ್ನು ಕಳೆಯಬೇಕು. ಈ ರೀತಿ ಒಂದೇ ಸಮನೆ ೭ ವರ್ಷಗಳವರೆಗೆ ವ್ರತವನ್ನು ಮಾಡಿ ೮ ನೇ ವರ್ಷದಲ್ಲಿ ಉದ್ಯಾಪನೆ ಮಾಡಬೇಕು. ಋಷಿಪಂಚಮಿಯ ಉಪವಾಸವು ಗಡ್ಡೆಗೆಣಸು, ಹಾಲು, ಬಳ್ಳಿಯ ಮೇಲಿನ ಕುಂಬಳಕಾಯಿ, ಸೌತೇಕಾಯಿ, ಕೊಸಂಬರಿ, ವರೆದಕ್ಕಿ (ಉಪವಾಸಕ್ಕೆ ಮಾಡುವ ಅಕ್ಕಿ) ಮತ್ತು ರಾಗಿಯೂ ನಡೆಯುತ್ತದೆ.

ಯಾವ ಸ್ತ್ರೀಯರ ಮಾಸಿಕ ಸರದಿ (ಋತುಸ್ರಾವ) ನಿಂತಿಲ್ಲವೋ, ಅಂತವರೂ ಮೇಲಿನಂತೆ ಕೇವಲ ಉಪವಾಸ ಮಾಡಬಹುದು, ಅಂದರೆ ವರ್ಷವಿಡಿ ಮನೆಯಲ್ಲಿ ತಪ್ಪಿ ಮೈಲಿಗೆ ಆಗಿದ್ದರೆ, ಆ ಪಾಪದ ಪರಿಹಾರವಾಗುತ್ತದೆ.

– ಜ್ಯೋತಿಷಿ ಬ.ವಿ. ತಥಾ ಚಿಂತಾಮಣಿ ದೇಶಪಾಂಡೆ (ಗುರುಜಿ), ವಾರಜೆ, ಪುಣೆ.

(ಆಧಾರ : ಮಾಸಿಕ ‘ಲಲನಾ’, ಆಗಸ್ಟ್ ೨೦೧೭)