ಜೂನ್ ತಿಂಗಳಲ್ಲಿ ಬಂಗಾಲದಲ್ಲಿ ಸಂಭವಿಸಿದ ರೈಲ್ವೇ ಅಪಘಾತವು ಅತ್ಯಂತ ಭೀಕರವಾಗಿತ್ತು. ‘ಕಾಂಚನಜುಂಗಾ ಎಕ್ಸ್‌ಪ್ರೆಸ್’ಗೆ ಹಿಂದಿನಿಂದ ಗೂಡ್ಸ್ ರೈಲು ಡಿಕ್ಕಿ ಹೊಡೆಯಿತು. ಸಹಾಯ ಕಾರ್ಯ ಕೂಡಲೇ ಪ್ರಾರಂಭವಾಯಿತು. ಈ ಘಟನೆಯಲ್ಲಿ ೯ ಜನರು ಸಾವನ್ನಪ್ಪಿದರು. ಈ ಅಪಘಾತ ಹೇಗಾಯಿತು ? ಮಾನವನಿಂದ ತಪ್ಪಾಯಿತೇ ಅಥವಾ ತಾಂತ್ರಿಕವಾಗಿತ್ತೇ ? ಎಂಬುದು ವಿಚಾರಣೆ ಪೂರ್ಣಗೊಂಡ ನಂತರ ತಿಳಿಯುವುದು.
ಮನುಷ್ಯನ ಜೀವದ ತುಲನೆ ಅಥವಾ ಪರಿಹಾರವನ್ನು ಇತರ ಯಾವುದರಿಂದಲೂ ಮಾಡಲು ಸಾಧ್ಯವಿಲ್ಲ. ೧೪೦ ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಮುಷ್ಟಿಯಷ್ಟು ಜನರು ಮಾತ್ರ ತಮಗಾಗಿ ‘ಅಪಘಾತ ವಿಮಾ ಸಂರಕ್ಷಣೆ’ ಪಡೆಯುತ್ತಾರೆ. ನಮ್ಮಲ್ಲಿ ಆರ್ಥಿಕ ಅಸಮಾನತೆ ಎಷ್ಟಿದೆಯೆಂದರೆ, ವಿಮೆಯಂತಹ ಆವಶ್ಯಕ ವಿಷಯಕ್ಕೂ ಹಣ ತುಂಬಿಸಲು ಅನೇಕರಿಗೆ ಸಾಧ್ಯವಾಗುವುದಿಲ್ಲ, ಕೆಲವು ಸುಶಿಕ್ಷಿತ ಹಾಗೂ ಸಕ್ಷಮವಾಗಿರುವವರ ಉದಾಸೀನತೆಯಿಂದಲೂ ಈ ಮಹತ್ವದ ವಿಷಯವನ್ನು ದುರ್ಲಕ್ಷಿಸಲಾಗುತ್ತದೆ; ಆದರೆ ಮನೆಯಲ್ಲಿ ಸಂಪಾದಿಸುವ ವ್ಯಕ್ತಿ ಅಪಘಾತದಿಂದ ಅನಿರೀಕ್ಷಿತವಾಗಿ ತೀರಿ ಹೋದರೆ ಅಥವಾ ವಿಕಲಾಂಗನಾಗಿ ಮನೆಯಲ್ಲಿ ಕುಳಿತುಕೊಂಡರೆ ಆ ಮನೆಯ ಆರ್ಥಿಕ ಸ್ಥಿತಿ ಗಂಭೀರವಾಗುವುದು. ಯಾವುದೇ ವಿಮೆ ಇಲ್ಲದಿದ್ದರೆ, ಇಂತಹ ವ್ಯಕ್ತಿಯ ವೈದ್ಯಕೀಯ ಹಾಗೂ ಮನೆಯ ಪ್ರತಿದಿನದ ಖರ್ಚನ್ನು ನಿರ್ವಹಿಸಲು ಕಠಿಣವಾಗುತ್ತದೆ.
೧. ಅಪಘಾತ ವಿಮಾ ಸಂರಕ್ಷಣೆಯಲ್ಲಿ ವಿಮೆಯ ಕಂಪನಿಗಳಿಂದ ಸಿಗುವ ಪರ್ಯಾಯಗಳು
ರೈಲ್ವೆ ಪ್ರವಾಸಿಗರಿಗೆ ಅಪಘಾತ ವಿಮಾ ಸಂರಕ್ಷಣೆ ಸಿಗಬೇಕೆಂದು, ಭಾರತೀಯ ರೈಲ್ವೆಯು ಪ್ರವಾಸಿಗರಿಗಾಗಿ ಅತ್ಯಲ್ಪ ದರದಲ್ಲಿ ಒಂದು ಒಳ್ಳೆಯ ವಿಮಾ ಯೋಜನೆಯನ್ನು ಉಪಲಬ್ಧಗೊಳಿಸಿದೆ. ರೈಲ್ವೇ ಪ್ರವಾಸದ ಆನ್‌ಲೈನ್ ಟಿಕೇಟ್ ಖರೀದಿಸುವಾಗ ‘ಅಪಘಾತ ವಿಮಾ ಸಂರಕ್ಷಣೆ’ಯ ಆಯ್ಕೆಯ ಪರ್ಯಾಯವಿರುತ್ತದೆ. ಬಹಳಷ್ಟು ಪ್ರವಾಸಿಗಳು ಈ ಪರ್ಯಾಯವನ್ನು ದುರ್ಲಕ್ಷಿಸುತ್ತಾರೆ. ಪ್ರತಿಯೊಬ್ಬರೂ ಈ ವಿಮೆಗಾಗಿ ಕೇವಲ ೪೫ ಪೈಸೆಯನ್ನು ಪಾವತಿಸಬೇಕಾಗುತ್ತದೆ, ಅದರ ಬದಲಿಗೆ ಪ್ರವಾಸದ ಸಮಯದಲ್ಲಿ ಅಪಘಾತವಾದರೆ, ವಿಮಾ ಕಂಪನಿಯಿಂದ ಈ ಮುಂದಿನ ಸಂರಕ್ಷಣೆಯನ್ನು ನೀಡಲಾಗುತ್ತದೆ –
ಅ. ಅಪಘಾತದಲ್ಲಿ ಸಾವನ್ನಪ್ಪಿದರೆ : ೧೦ ಲಕ್ಷ ರೂಪಾಯಿ
ಆ. ಶಾಶ್ವತವಾಗಿ ಸಂಪೂರ್ಣ ಅಂಗವಿಕಲರಾದರೆ : ೧೦ ಲಕ್ಷ ರೂಪಾಯಿ
ಇ. ಶಾಶ್ವತವಾಗಿ ಅಂಶಾತ್ಮಕ ಅಂಗವಿಕಲರಾದರೆ : ೭ ಲಕ್ಷ ೫೦ ಸಾವಿರದ ವರೆಗೆ
ಈ. ಗಾಯಗೊಂಡ ವ್ಯಕ್ತಿಗೆ ವೈದ್ಯಕೀಯ ಖರ್ಚಿಗಾಗಿ : ೨ ಲಕ್ಷ ರೂಪಾಯಿಗಳ ವರೆಗೆ
ಉ. ಮೃತ ದೇಹವನ್ನು ಮನೆಗೆ ತೆಗೆದುಕೊಂಡು ಹೋಗುವ ಖರ್ಚು : ೧೦ ಸಾವಿರ ರೂಪಾಯಿಗಳ ವರೆಗೆ
೨. ‘ಅಪಘಾತ ವಿಮಾ ಸಂರಕ್ಷಣೆ’ಯ ವಿಮೆ ತೆಗೆದುಕೊಂಡ ನಂತರ ನಾಮಿನಿಯ (ನಾಮನಿರ್ದೇಶಿತ ವ್ಯಕ್ತಿ) ಮಾಹಿತಿ ನೀಡುವುದು ಮಹತ್ವದ್ದಾಗಿದೆ !
ಆನ್‌ಲೈನ್ ಟಿಕೇಟ್ ತೆಗೆಯುವಾಗ ವಿಮೆಯ ಪರ್ಯಾಯ ಆಯ್ಕೆ ಮಾಡಿದ್ದರೆ, ಪ್ರತಿಯೊಬ್ಬ ಪ್ರವಾಸಿಯ ಪ್ರವಾಸ ಶುಲ್ಕದ ಜೊತೆಗೆ ೪೫ ಪೈಸೆ ಜೋಡಿಸಲಾಗುತ್ತದೆ ಹಾಗೂ ಟಿಕೇಟ್ ತೆಗೆದ ತಕ್ಷಣ ನೀವು ನೀಡಿರುವ ವಿ-ಅಂಚೆ (ಇ-ಮೇಲ್) ವಿಳಾಸಕ್ಕೆ ವಿಮಾ ಕಂಪನಿಯಿಂದ ವಿ-ಅಂಚೆ ಸಂದೇಶ ಬರುತ್ತದೆ. ಅದರಲ್ಲಿ ತನ್ನ ಸಂಬಂಧಿಕರನ್ನು ನಾಮಿನಿ ಎಂದು ನೋಂದಣಿ ಮಾಡುವ ಪರ್ಯಾಯವಿರುತ್ತದೆ. ಈ ನಾಮಿನಿಯನ್ನು ದಾಖಲಿಸುವುದು ತುಂಬಾ ಮಹತ್ವದ್ದಾಗಿದೆ. ಏಕೆಂದರೆ ವಿಮಾ ಕಂಪನಿಯಿಂದ ದಾವೆ ಹೂಡುವ ಪ್ರಸಂಗ ಬಂದರೆ ನಾಮಿನಿ ಇದ್ದರೆ ವಿಮಾ ಕಂಪನಿಗೆ ದಾವೆಯ ಪ್ರಕ್ರಿಯೆ ಮಾಡಲು ಸುಲಭವಾಗುತ್ತದೆ. ನಾಮಿನಿ ಮಾಡುವಾಗ ನಮ್ಮ ಆ ಸಂಬಂಧಿಕರ ಹೆಸರು, ಸಂಪರ್ಕ ಕ್ರಮಾಂಕ, ವಿ-ಅಂಚೆ ವಿಳಾಸ ಮತ್ತು ಆ ವ್ಯಕ್ತಿಯೊಂದಿಗೆ ತಮಗಿರುವ ಸಂಬಂಧ ಈ ಮಾಹಿತಿಯನ್ನು ನೀಡಬೇಕಾಗುತ್ತದೆ. ಅದರ ಜೊತೆಗೆ ಈ ವಿ-ಅಂಚೆಯಲ್ಲಿ ‘ಅಪಘಾತ ವಿಮಾ ಸಂರಕ್ಷಣ’ ವಿಮೆಯ ಮಾಹಿತಿ, ಈ ಯೋಜನೆಯಲ್ಲಿ ಏನೇನು ಸಮಾವೇಶವಿದೆ ? ಏನೇನು ಸಮಾವೇಶವಿಲ್ಲ ? ಎಂಬ ವಿಷಯದ ಎಲ್ಲ ಮಾಹಿತಿ ಇರುತ್ತದೆ. ಪ್ರವಾಸ ಆರಂಭಿಸುವ ಮೊದಲು ಈ ಮಾಹಿತಿಯನ್ನು ತಮ್ಮ ನಾಮಿನಿಗೆ ನೀಡುವುದು, ಇದು ತನ್ನ ಪ್ರವಾಸದ ನಿಯೋಜನೆಯಲ್ಲಿನ ಮಹತ್ವದ ವಿಷಯವಾಗಿದೆ.
೩. ಸರಕಾರ ನೀಡಿರುವ ‘ಅಪಘಾತ ವಿಮಾ ಸಂರಕ್ಷಣೆ’ಯ ಲಾಭವನ್ನು ಪಡೆಯುವುದು ಆವಶ್ಯಕ !
ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಲ್ಲಿಯೂ ‘ಅಪಘಾತ ವಿಮಾ ಸಂರಕ್ಷಣೆ’ ಮತ್ತು ವೈದ್ಯಕೀಯ ಖರ್ಚಿಗಾಗಿ ‘ಆರೋಗ್ಯ ವಿಮೆ’ ಇರುವುದು ಆವಶ್ಯಕವಾಗಿದೆ. ಆದರೆ ಯಾರಿಗೆ ‘ಆರೋಗ್ಯ ವಿಮೆ’ ಖರೀದಿಸಲು ಸಾಧ್ಯವಿಲ್ಲವೊ, ಅವರು ಈ ರೈಲ್ವೇ ಪ್ರವಾಸದ ಸಮಯದಲ್ಲಿ ಸರಕಾರ ನೀಡುವ ಈ ಅಪಘಾತ ವಿಮಾ ಯೋಜನೆಯ ಲಾಭವನ್ನಾದರೂ ಪಡೆಯಬೇಕು. ಎಲ್ಲ ಅಪಘಾತಗಳನ್ನು ಸಂಪೂರ್ಣ ತಪ್ಪಿಸಲು ಸಾಧ್ಯವಿಲ್ಲ, ಇಂತಹ ಸಂದರ್ಭದಲ್ಲಿ ಅದರಲ್ಲಿನ ಅನಾಹುತಗಳ ತೀವ್ರತೆಯನ್ನು ಕಡಿಮೆ ಗೊಳಿಸಲು ವ್ಯವಸ್ಥೆ ಮಾಡಿ ಉಪಲಬ್ಧವಿರುವ ಪರ್ಯಾಯವನ್ನು ಉಪಯೋಗಿಸುವುದು ಆವಶ್ಯಕವಾಗಿದೆ.’
– ಶ್ರೀ. ಅನಿಕೇತ ವಿಲಾಸ ಶೇಟೆ, ಅಧಿಕೃತ ಆರ್ಥಿಕ ಸಲಹೆಗಾರ, ಚಿಂಚವಡ, ಪುಣೆ.