ಕೇಂದ್ರ ಸರಕಾರದಿಂದ 156 ಔಷಧಿಗಳ ಮೇಲೆ ನಿಷೇಧ !

ನವದೆಹಲಿ – ಜ್ವರ, ಶೀತ, ಅಲರ್ಜಿ ಮತ್ತು ನೋವು ನಿವಾರಣೆಗೆ ಬಳಸುವ 156 ವಿವಿಧ ‘ಫಿಕ್ಸೆಡ್ ಡೋಸ್ ಕಾಂಬಿನೇಶನ್’ (ಎಫ್‌ಡಿಸಿ) ಔಷಧಿಗಳನ್ನು ಕೇಂದ್ರ ಸರಕಾರವು ನಿಷೇಧಿಸಿದೆ. ಈ ಔಷಧಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ. ಈ ಔಷಧಿಗಳು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

1. ಎಫ್‌ಡಿಸಿ ಔಷಧಿಗಳೆಂದರೆ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಔಷಧಿಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಪ್ರಸ್ತುತ, ಇಂತಹ ಔಷಧಿಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಅವುಗಳನ್ನು ‘ಕಾಕ್ಟೇಲ್ ‘ ಔಷಧಿಗಳೆಂದೂ ಕರೆಯುತ್ತಾರೆ.

2. ಪ್ಯಾರಸಿಟಮಾಲ್, ಟ್ರಮಾಡಾಲ್, ಟ್ಯಾರಿನ್ ಮತ್ತು ಕೆಫೀನ್ ಸಂಯೋಜನೆಯನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಟ್ರಾಮಾಡಾಲ್ ಇದು ನೋವು ನಿವಾರಕ ಔಷಧಿಯಾಗಿದೆ.

3. ಕೇಂದ್ರ ನೇಮಿಸಿದ್ದ ತಜ್ಞರ ಸಮಿತಿ ಈ ಬಗ್ಗೆ ತನಿಖೆ ನಡೆಸಿತ್ತು. ಔಷಧ ತಾಂತ್ರಿಕ ಸಲಹೆಗಾರ ಮಂಡಳಿಯೂ ಕೂಡ ‘ಎಫ್‌ಡಿಸಿ’ಯನ್ನು ಪರಿಶೀಲಿಸಿತು ಮತ್ತು ಅವುಗಳ ನಿಷೇಧಕ್ಕೆ ಶಿಫಾರಸು ಮಾಡಿತು.

4. ಕಳೆದ ವರ್ಷ ಜೂನ್‌ನಲ್ಲಿ 14 ಎಫ್‌ಡಿಸಿಗಳನ್ನು ಸಹ ನಿಷೇಧಿಸಲಾಗಿತ್ತು. 2016 ರಲ್ಲಿ, ಸರಕಾರವು 344 ಎಫ್‌ಡಿಸಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯ ಮೇಲೆ ನಿಷೇಧವನ್ನು ಘೋಷಿಸಿತ್ತು. ಈ ನಿರ್ಧಾರವನ್ನು ಔಷಧಿ ಸಂಸ್ಥೆಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.