ಮಂಗಳೂರು – ಬಾಂಗ್ಲಾದೇಶದ ಪ್ರಧಾನಿಗೆ ಆದಂತಹ ಪರಿಸ್ಥಿತಿ ರಾಜ್ಯದ ರಾಜ್ಯಪಾಲರಿಗೂ ಆಗಬಹುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ವಿರುದ್ಧದ ಮಹಾಭಿಯೋಗಕ್ಕೆ ರಾಜ್ಯಪಾಲರು ಅನುಮೋದನೆ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕ್ರತರು ಮಂಗಳೂರಿನ ಲಾಲ್‌ಬಾಗ್ ಚೌಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಒಡೆದರು. ಮಂಗಳೂರು ಮಹಾನಗರ ಪಾಲಿಕೆ ಎದುರು ನಡೆದ ಪ್ರತಿಭಟನೆಯಲ್ಲಿ ರಸ್ತೆ ತಡೆ ನಡೆಸಿದರು.
ಕೇಂದ್ರ ಸರಕಾರ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಐವನ್ ಡಿಸೋಜಾ ಎಚ್ಚರಿಸಿದ್ದಾರೆ. ರಾಜ್ಯಪಾಲರನ್ನು ಪದಚ್ಯುತಗೊಳಿಸಲು ಬಾಂಗ್ಲಾದೇಶದಂತಹ ಪರಿಸ್ಥಿತಿ ಎದುರಾಗಬಹುದು ಎಂದು ಅವರು ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ.