ಕರ್ನಾಟಕ ದೇವಸ್ಥಾನ ಮಹಾಸಂಘದ ಅಭಿಯಾನಕ್ಕೆ ಮತ್ತಷ್ಟು ಬಲ !
ಶೃಂಗೇರಿ ಶಾರದಾ ಪೀಠದಲ್ಲಿ ಈಗ ವಸ್ತ್ರ ಸಂಹಿತೆ ಜಾರಿಯಾಗಿದೆ. ಹಾಗಾಗಿ ದೇವಸ್ಥಾನಕ್ಕೆ ಬರುವವರು ಇನ್ನು ತುಂಡುಡುಗೆ ತೊಟ್ಟು ಬರುವಂತಿಲ್ಲ. ಆಗಸ್ಟ್ 15 ರಿಂದ ಈ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದ್ದು, ಇದನ್ನು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಸ್ವಾಗತಿಸುತ್ತದೆ. ಮಹಾಸಂಘವು ಕಳೆದ 6 ತಿಂಗಳಿನಿಂದ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯ ಅಭಿಯಾವನ್ನು ಹಮ್ಮಿಕೊಂಡಿದ್ದು ಈಗಾಗಲೇ ರಾಜ್ಯದ 250 ದೇವಸ್ಥಾನಗಳು ಮತ್ತು ರಾಷ್ಟ್ರದ 700 ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದೆ.
ಈಗ ಶೃಂಗೇರಿ ಶಕ್ತಿ ಪೀಠದಲ್ಲಿ ವಸ್ತ್ರ ಸಂಹಿತೆ ಜಾರಿ ಆಗಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಇದನ್ನು ಎಲ್ಲ ಮಠ ಮತ್ತು ಮಂದಿರಗಳು ಪಾಲನೆಯನ್ನು ಮಾಡಬೇಕು. ದೇವಸ್ಥಾನಗಳು ದೇವತೆಗಳ ಚೈತನ್ಯದ ಸ್ರೋತವಾಗಿವೆ. ಇಲ್ಲಿಗೆ ಭಕ್ತಾದಿಗಳು ಈ ಚೈತನ್ಯವನ್ನು ಪಡೆಯಲು ಬರುತ್ತಾರೆ. ಆದರೆ ತುಂಡುಡುಗೆ ಧರಿಸಿ ತೀರ್ಥ ಕ್ಷೇತ್ರಗಳಿಗೆ ಪ್ರವೇಶಿಸಿದರೆ ದೇವಸ್ಥಾನದ ವಾತಾವರಣದ ಮೇಲೆ ಪರಿಣಾಮ ಆಗುವುದರೊಂದಿಗೆ ಇತರ ಭಕ್ತರ ಗಮನವೂ ವಿಚಲಿತವಾಗುತ್ತದೆ. ಈ ದಿಶೆಯಲ್ಲಿ ದೇವಸ್ಥಾನ ಮಹಾಸಂಘವು ಇಡೀ ರಾಜ್ಯದಾದ್ಯಂತ, ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ವಿವಿಧ ದೇವಸ್ಥಾನ ವಿಶ್ವಸ್ಥರನ್ನು ಭೇಟಿ ಮಾಡಿ ಮನವಿ ನೀಡುವುದು, ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಮಾನ್ಯ ಮುಜರಾಯಿ ಸಚಿವರಿಗೆ ಮನವಿ ನೀಡುವ ಪ್ರಯತ್ನಗಳನ್ನು ಮಹಾಸಂಘವು ನಿರಂತರ ಮಾಡುತ್ತಿದೆ.
ಶೃಂಗೇರಿ ಪೀಠದ ಈ ನಿರ್ಣಯಕ್ಕೆ ಮಹಸಂಘ ಆಭಾರಿಯಾಗಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಇತರ ದೇವಸ್ಥಾನಗಳ ವಿಶ್ವಸ್ಥರೂ ತಮ್ಮ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಅಳವಡಿಸಿ ಸನಾತನ ಧರ್ಮದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕೈಜೋಡಿಸಬೇಕೆಂದು ಮಹಾಸಂಘವು ಈ ಮೂಲಕ ಕರೆ ನೀಡುತ್ತದೆ.