ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌ ಇವರ ಸಲಹೆ !

ತಮ್ಮ ಮಧುರ ದೈವೀ ಧ್ವನಿಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌ ಕಳೆದ ಕೆಲವು ದಿನಗಳಿಂದ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಳೆದ ತಿಂಗಳು ವಿಮಾನದಿಂದ ಹೊರಬಂದಾಗ ಅವರಿಗೆ ‘ತಮಗೆ ಏನೂ ಕೇಳಿಸುತ್ತಿಲ್ಲ’ ಎಂದು ಅನಿಸತೊಡಗಿತು. ವಿಷಾಣುವಿನ ಆಕ್ರಮಣದಿಂದಾಗಿ (ವೈರಲ್‌ ಅಟ್ಯಾಕ್) ‘ರೇರ್‌ ಸೆನ್ಸರಿ ನ್ಯೂರೋ ನರ್ವ್ ಹೀಯರಿಂಗ ಲಾಸ್’ ಅಂದರೆ ‘ಅಪರೂಪದ ಸಂವೇದನಾ ನರತಂತುಗಳಿಂದಾಗಿ ಶ್ರವಣಶಕ್ತಿಯನ್ನು ಕಳೆದುಕೊಳ್ಳುವುದು’, ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಪತ್ತೆ ಹಚ್ಚಿದರು. ಈ ರೋಗದಿಂದ ಪೀಡಿತರಾದ ಬಳಿಕ ಅವರು ಜನರಿಗೆ ‘ನಿರಂತರವಾಗಿ ಹೆಡ್‌ಫೋನ್‌ಗಳನ್ನು ಹಾಕಬೇಡಿ ಮತ್ತು ದೊಡ್ಡ ಧ್ವನಿಯಲ್ಲಿ ಸಂಗೀತವನ್ನು ಕೇಳಬೇಡಿ’ ಎಂದು ಸಲಹೆ ನೀಡಿದರು. ವೈದ್ಯರ ಪ್ರಕಾರ, ಈ ರೋಗ ಅಪರೂಪದ್ದಾಗಿದ್ದರೂ, ಇಂದಿನ ಪೀಳಿಗೆಯು ‘ಹೆಡ್‌ಫೋನ್’ ಮತ್ತು ‘ಇಯರ್‌ಫೋನ್‌’ಗಳ ಮೂಲಕ ನಿರಂತರವಾಗಿ ಹಾಡುಗಳನ್ನು ಕೇಳುತ್ತಿರುತ್ತದೆ ಅಥವಾ ಚಲನಚಿತ್ರವನ್ನು ನೋಡುತ್ತಿರುತ್ತದೆ. ಇದನ್ನು ನೋಡಿದರೆ ಭಾರತದಲ್ಲಿ ಈ ರೋಗ ಎಲ್ಲೆಡೆ ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಲ್ಕಾ ಯಾಗ್ನಿಕ್‌ ಅವರು ನೀಡಿರುವ ಸಲಹೆ ಮತ್ತು ವೈದ್ಯರ ಎಚ್ಚರಿಕೆಯ ಬಗ್ಗೆ ಇಂದಿನ ಪೀಳಿಗೆ ನಿಜವಾಗಿಯೂ ಯೋಚಿಸುವುದೇ ?

೧. ಇಯರ್‌ಫೋನ್‌ಗಳ ಶಾರೀರಿಕ ದುಷ್ಟಪರಿಣಾಮಗಳು !

ಶ್ರೀ. ಜಗನ ಘಾಣೇಕರ

ಪ್ರಸ್ತುತ, ‘ಇಯರ್‌ಫೋನ್‌ಗಳು’, ‘ಹೆಡ್‌ಫೋನ್‌ಗಳು’, ‘ಬ್ಲೂಟೂತ್’ ಮತ್ತು ‘ಇಯರ್‌ಬಡ್ಸ್‌’ ಈ ಇಲೆಕ್ಟ್ರಾನಿಕ ಉಪಕರಣಗಳು ಬಹಳ ಜನಪ್ರಿಯವಾಗಿವೆ. ನಿರಂತರವಾಗಿ ‘ಇಯರ್‌ಫೋನ್’ ಅಥವಾ ‘ಹೆಡ್‌ಫೋನ್‌’ಗಳನ್ನು ಹಾಕುವುದರಿಂದ ಕಿವಿಯ ಮೇಲಷ್ಟ ಅಲ್ಲದೇ ದೇಹದ ಇತರ ಸೂಕ್ಷ್ಮ ಅಂಗಗಳ ಮೇಲೆಯೂ ದುಷ್ಪರಿಣಾಮವಾಗುತ್ತದೆ. ಪ್ರತಿಯೊಬ್ಬರ ಕಿವಿಯ ಆಲಿಸುವ ಕ್ಷಮತೆಯು ಸಾಮಾನ್ಯವಾಗಿ ೯೦ ಡೆಸಿಬಲ್‌ಗಳಷ್ಟು ಇರುತ್ತದೆ. ‘ಇಯರ್‌ಫೋನ್‌’ಗಳ ಅತಿಯಾದ ಬಳಕೆಯಿಂದ ಅದು ೪೦ ರಿಂದ ೫೦ ಡೆಸಿಬಲ್‌ಗಳು ಅಥವಾ ಅದಕ್ಕಿಂತ ಕಡಿಮೆಯಾಗಬಹುದು. ಇಯರ್‌ಫೋನ್‌ ಅಥವಾ ಹೆಡ್‌ಫೋನ್‌ ಬಳಸಿ ಗಂಟೆಗಟ್ಟಲೆ ಸಂಗೀತ ಕೇಳುವುದು ಕಿವಿ ಮತ್ತು ಹೃದಯಕ್ಕೆ ಅತ್ಯಂತ ಅಪಾಯಕಾರಿಯಾಗಿರುತ್ತದೆ. ಇಯರ್‌ಫೋನ್‌ಗಳ ಮೂಲಕ ಪ್ರಕ್ಷೇಪಿಸಲ್ಪಡುವ ವಿದ್ಯುತ್ಕಾಂತೀಯ ತರಂಗವು ಮೆದುಳಿನ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ತೀವ್ರ ತಲೆನೋವು ಮತ್ತು ಮೈಗ್ರೇನ್‌ನಂತಹ ಸಮಸ್ಯೆಗಳು ಉದ್ಭವಿಸಬಹುದು. ‘ಇಯರ್‌ಫೋನ್ಸ್‌’ ಅಥವಾ ‘ಇಯರ್‌ಬಡ್ಸ್‌’ಗಳನ್ನು ಕಿವಿಯ ಪರದೆಗೆ ಅಂಟುವಂತೆ ಹಾಕುತ್ತಾರೆ. ಬಹಳಷ್ಟು ಸಮಯದ ವರೆಗೆ ಅದನ್ನು ಹಾಕಿಕೊಂಡಿದ್ದರೆ ಕಿವಿಯ ಪರದೆಯ ವರೆಗೆ ಗಾಳಿ ತಲುಪುವುದಿಲ್ಲ. ಇದರಿಂದ ಆ ಸ್ಥಳ ತೇವಾಂಶ ಭರಿತವಾಗಿ ಶಿಲೀಂಧ್ರ ಅಥವಾ ವೈರಲ್‌ ರೋಗಗಳು ಸಂಭವಿಸಬಹುದು. ಮೂಗು, ಕಿವಿ ಮತ್ತು ಗಂಟಲು ತಜ್ಞರ ಅಭಿಪ್ರಾಯದಂತೆ ಅನಾವಶ್ಯಕವಿರುವ ಧ್ವನಿಯು ಕಿವಿಯ ಪರದೆಗೆ ಅಪ್ಪಳಿಸಿದ ನಂತರ ಅಲ್ಲಿಂದ ಮರಳಿ ಕಳುಹಿಸುವ ಸಾಮರ್ಥ್ಯ ನಮ್ಮ ಕಿವಿಯಲ್ಲಿರುತ್ತದೆ; ಆದರೆ ನಾವು ‘ಇಯರ್‌ಫೋನ್‌’ಗಳನ್ನು ಹಾಕಿದಾಗ ‘ಮಲ್ಟಿಪಲ್‌ ಫ್ರೀಕ್ವೆನ್ಸಿ’ ಧ್ವನಿ ಕಿವಿಯ ಪರದೆಯನ್ನು ಅಪ್ಪಳಿಸುತ್ತಲೇ ಇರುತ್ತದೆ. ಇದರ ಪರಿಣಾಮವಾಗಿ, ಈ ಶಬ್ದವು ಕಿವಿಯಲ್ಲಿನ ರಕ್ತನಾಳಗಳನ್ನು ದುರ್ಬಲಗೊಳಿಸುತ್ತದೆ.

೨. ‘ಇಯರ್‌ ಫೋನ್‌’ಗಳ ಸಾಮಾಜಿಕ ಮತ್ತು ಮಾನಸಿಕ ದುಷ್ಟುರಿಣಾಮಗಳು !

ಕೇವಲ ಪ್ರವಾಸದಲ್ಲಿ ಮಾತ್ರವಲ್ಲ, ಕೆಲವರು ಮನೆಯಲ್ಲಿಯೂ ಇಯರ್‌ಫೋನ್‌ ಅಥವಾ ಬ್ಲೂಟೂತ್‌ನಲ್ಲಿ ಹಾಡುಗಳನ್ನು ಕೇಳುತ್ತಾ ಬಹಳ ಸಮಯವನ್ನು ಕಳೆಯುತ್ತಾರೆ. ನಿರಂತರವಾಗಿ ಹಾಡುಗಳನ್ನು ಕೇಳುವುದರಲ್ಲಿ ಏಕಾಗ್ರವಾಗಿರುವುದರಿಂದ ಇವರ ಜ್ಞಾನ ಕಕ್ಷೆ ಕುಂಠಿತಗೊಳ್ಳುತ್ತದೆ, ಮಾನಸಿಕ ಅಸ್ವಸ್ಥತೆ ಬಾಧಿಸುತ್ತದೆ. ಕಿವಿಗೆ ನಿರಂತರವಾಗಿ ಇಯರ್‌ಫೋನ್‌ ಬಳಸುವವರ ಸ್ವಭಾವ ಕೂಡ ಸಮಾಜದಲ್ಲಿ ಬೆರೆಯದೆ ಒಬ್ಬಂಟಿಯಾಗಿರುತ್ತದೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ ವಾಹನ ಚಾಲನೆ ಮಾಡುವಾಗ, ಮೊಬೈಲ್‌ಫೋನ್‌ನಲ್ಲಿ ಅಥವಾ ಇಯರ್‌ಫೋನ್‌ ಬಳಸುವುದು ಶಿಕ್ಷಾರ್ಹ ಅಪರಾಧವಾಗಿದೆ. ವಾಹನ ಚಾಲನೆ ಮಾಡುವಾಗ ಮೊಬೈಲನಲ್ಲಿ ಮಾತನಾಡುವಾಗ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ರಸ್ತೆ ಮೇಲೆ ನಡೆಯುವಾಗ, ರೈಲ್ವೆ ಹಳಿಯನ್ನು ದಾಟುವಾಗ, ಪ್ರತಿ ವರ್ಷ ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ ಕಿವಿಗೆ ಇಯರ್‌ಫೋನ್‌ ಹಾಕಿಕೊಂಡು ರಸ್ತೆ ಅಥವಾ ಹಳಿ ದಾಟುವವರ ಸಂಖ್ಯೆಯೇ ಅತ್ಯಧಿಕವಾಗಿರುತ್ತದೆ.

‘ಇಯರ್‌ಫೋನ್‌ಗಳು’, ‘ಹೆಡ್‌ಫೋನ್‌ಗಳು’, ‘ಬ್ಲೂಟೂತ್’ ಮತ್ತು ‘ಇಯರ್‌ಬಡ್‌ಗಳು’ ಇವುಗಳಂತಹ ಆಧುನಿಕ ಸಾಧನಗಳೂ ಮಾನವನ ಅನುಕೂಲಕ್ಕಾಗಿ ತಯಾರಿಸಲಾಗಿದೆ; ಆದರೆ ಈಗ ಮಾನವನು ಸಾಧನಗಳ ಮೇಲೆ ಎಷ್ಟು ಅವಲಂಬಿತನಾಗಿದ್ದಾನೆ ಎಂದರೆ ಈ ಸಾಧನೆಗಳೇ ಮಾನವನ ಆರೋಗ್ಯವನ್ನು ಹಾಳು ಮಾಡುವ ಕಾರ್ಯವನ್ನು ಮಾಡುತ್ತಿವೆ. ಇದರ ಮೇಲೆ ಯಾವ ರೀತಿಯಿಂದಲಾದರೂ ನಿಯಂತ್ರಣವನ್ನು ತರಬೇಕಾಗಿದೆ. ಈ ಸಾಧನಗಳ ಉಪಯೋಗದ ಮೇಲೆ ನಿಯಂತ್ರಣವನ್ನು ತರಲು ಯುವಕರ ಪೋಷಕರು ಮತ್ತು ಶಾಲೆ, ಕಾಲೇಜುಗಳ ಶಿಕ್ಷಕರು ಮುಂದಾಗಬೇಕಾಗಿದೆ.

– ಶ್ರೀ. ಜಗನ ಘಾಣೇಕರ, ಘಾಟಕೋಪರ, ಮುಂಬಯಿ