‘ಪಾಕಿಸ್ತಾನದಲ್ಲಿ ಅರಾಜಕತೆ ಸೃಷ್ಟಿಸುವವರ ವಿರುದ್ಧ ಹೋರಾಡಿ ಗೆಲ್ಲೋಣ!’ – ಪಾಕ್ ಸೇನಾ ಮುಖ್ಯಸ್ಥ ಮುನೀರ್

ಪಾಕಿಸ್ತಾನದ ಪರಿಸ್ಥಿತಿಯನ್ನು ಬಾಂಗ್ಲಾದೇಶದ ಪರಿಸ್ಥಿತಿಯೊಂದಿಗೆ ಹೋಲಿಸಿ ಹೇಳಿಕೆ ನೀಡಿದ ಪಾಕ್ ಸೇನಾ ಮುಖ್ಯಸ್ಥ ಮುನೀರ್ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಯಾರಾದರೂ ಅರಾಜಕತೆಯನ್ನು ಹರಡಲು ಯತ್ನಿಸಿದರೆ, ನಾನು ಅಲ್ಲಾನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಅಂತವರ ವಿರುದ್ಧ ನಾವು ಹೋರಾಡುತ್ತೇವೆ. ಅಲ್ಲಾಹನ ಕೃಪೆಯಿಂದ ಅಶಾಂತಿ ಮತ್ತು ಅವ್ಯವಸ್ಥೆಯನ್ನು ಹೋಗಲಾಡಿಸುವಲ್ಲಿ ಪಾಕಿಸ್ತಾನ ಸೇನೆ ಯಶಸ್ವಿಯಾಗಲಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಹೇಳಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಉಲೇಮಾ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಪಾಕಿಸ್ತಾನದ ಪರಿಸ್ಥಿತಿಯನ್ನು ಬಾಂಗ್ಲಾದೇಶದ ಪರಿಸ್ಥಿತಿಗೆ ಹೋಲಿಸಲಾಗುತ್ತಿದೆ. ಈ ಹೋಲಿಕೆಯನ್ನು ಆಧರಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ಜನರಲ್ ಮುನೀರ್ ಮಾತು ಮುಂದುವರೆಸಿ,

1. ದೇಶ ಎಂಬುದು ಎಷ್ಟು ಮಹತ್ವದ್ದಾಗಿರುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾದರೆ, ಇರಾಕ್, ಸಿರಿಯಾ ಮತ್ತು ಲಿಬಿಯಾವನ್ನು ನೋಡಿ. ಪಾಕಿಸ್ತಾನ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತದೆ; ಏಕೆಂದರೆ ಅದನ್ನು ಉಳಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಲಕ್ಷಾಂತರ ನಾಯಕರು ಮತ್ತು ಲಕ್ಷಾಂತರ ವಿದ್ವಾಂಸರು ಪಾಕಿಸ್ತಾನಕ್ಕಾಗಿ ತ್ಯಾಗ ಮಾಡಿದ್ದಾರೆ; ಏಕೆಂದರೆ ಅವರಿಗೆ ಸ್ವಾರ್ಥಕ್ಕಿಂತ ನಮ್ಮ ದೇಶ ಮುಖ್ಯವಾಗಿತ್ತು.

2. ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪಾಕ್ ಸೇನೆಯನ್ನು ಟೀಕಿಸಲಾಗುತ್ತಿದೆ. ಇದರಿಂದ ದೇಶದ ರಾಜಕೀಯ ಮತ್ತು ಸಾಮಾಜಿಕ ರಚನೆ ಹದಗೆಡುತ್ತಿದೆ. ಇಂತಹ ಪ್ರಯತ್ನ ಮಾಡುವವರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ.

3. ಅಲ್ಲಾಹನ ಆದೇಶದಂತೆ, ಪಾಕಿಸ್ತಾನದ ಸೇನೆಯು ದೇಶದಿಂದ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಅವಿರತವಾಗಿ ಶ್ರಮಿಸುತ್ತಿದೆ. ಶರಿಯಾ ಮತ್ತು ಸಂವಿಧಾನವನ್ನು ಅನುಸರಿಸದವರನ್ನು ನಾನು ಪಾಕಿಸ್ತಾನಿಗಳೆಂದು ಪರಿಗಣಿಸುವುದಿಲ್ಲ ಎಂದವರು ಖಡಕ್ ಆಗಿ ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನ ಸ್ಥಾಪನೆಯಾದಾಗಿನಿಂದ ಅಲ್ಲಿ ಅರಾಜಕತೆ ನೆಲೆಸಿದೆ. ಈ ಅರಾಜಕತೆಯು ಈಗ ತನ್ನ ಶಿಖರಕ್ಕೆ ತಲುಪಿದ್ದು ಭವಿಷ್ಯದಲ್ಲಿ ಪಾಕಿಸ್ತಾನವು ನಾಲ್ಕು ಭಾಗಗಳಾಗಿ ವಿಭಜನೆಯಾಗಲಿದೆ ಎಂಬ ಸತ್ಯವನ್ನು ಮುನೀರ್ ಒಪ್ಪಿಕೊಳ್ಳುವುದಿಲ್ಲ ಎಂಬುದು ವಸ್ತುಸ್ತಿತಿಯಾಗಿದೆ !