ನವದೆಹಲಿ – ರಾಷ್ಟ್ರೀಯ ಮಕ್ಕಳ ಆಯೋಗವು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದೆ. ಇದರಲ್ಲಿ ‘ಬಾಲ್ಯವಿವಾಹವನ್ನು ಅನುಮತಿಸುವ ‘ಮುಸ್ಲಿಂ ವೈಯಕ್ತಿಕ ಕಾನೂನು’ ಬಾಲ್ಯವಿವಾಹ ನಿಷೇಧ ಕಾಯ್ದೆಯ ಉಲ್ಲಂಘನೆಯಾಗಿದೆ’ ಎಂದು ಹೇಳಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ, ಈ ಪ್ರಕರಣದಲ್ಲಿ ಆದಷ್ಟು ಬೇಗ ಇತ್ಯರ್ಥಗೊಳಿಸಬೇಕು; ಏಕೆಂದರೆ ಈ ವಿಷಯದಲ್ಲಿ ವಿವಿಧ ಉಚ್ಚನ್ಯಾಯಾಲಯಗಳು ವಿಭಿನ್ನ ತೀರ್ಪುಗಳನ್ನು ನೀಡುತ್ತಿವೆ ಎಂದು ಹೇಳಿದರು. ಮುಖ್ಯ ನ್ಯಾಯಮೂರ್ತಿ ಧನಂಜಯ್ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪರ್ಡಿವಾಲಾ ಅವರ ವಿಭಾಗೀಯ ಪೀಠವು ಈ ಪ್ರಕರಣವನ್ನು ಇತ್ಯರ್ಥಗೊಳಿಸಬೇಕಾಗಿದೆ, ಹಾಗಾಗಿ ಶೀಘ್ರದಲ್ಲೇ ವಿಚಾರಣೆ ಆರಂಭಿಸುತ್ತೇವೆ ಎಂದಿದ್ದಾರೆ.
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮುಸ್ಲಿಂ ಹುಡುಗಿಯರ ಮದುವೆ, ಇದು ಕಾನೂನಿನ ಉಲ್ಲಂಘನೆ ! – ರಾಷ್ಟ್ರೀಯ ಮಹಿಳಾ ಆಯೋಗ
ಇದಕ್ಕೂ ಮುನ್ನ ರಾಷ್ಟ್ರೀಯ ಮಹಿಳಾ ಆಯೋಗ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಇದರಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯಸ್ಸು, ಇತರ ಧರ್ಮದ ಹೆಣ್ಣುಮಕ್ಕಳ ಕನಿಷ್ಠ ವಯಸ್ಸಿನಂತೆಯೇ ಇರಬೇಕು. ಪ್ರಸ್ತುತ, ದೇಶದಲ್ಲಿ ಹುಡುಗಿಯರಿಗೆ ಮದುವೆಗೆ ಕನಿಷ್ಠ ವಯಸ್ಸು 18 ಮತ್ತು ಹುಡುಗರಿಗೆ 21 ಇದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮುಸ್ಲಿಂ ಹುಡುಗಿಯರಿಗೆ ಮದುವೆಯಾಗಲು ಅವಕಾಶ ನೀಡುವುದು ಅನಿಯಂತ್ರಿತ, ತರ್ಕಬದ್ಧವಲ್ಲದ, ತಾರತಮ್ಯ ಮತ್ತು ಕಾನೂನಿನ ಉಲ್ಲಂಘನೆ ಮಾಡುವುದಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.