ಬೆಂಗಳೂರು – ಗೌರಿ ಲಂಕೇಶ್ ಹತ್ಯೆಯ ಪ್ರಕರಣದ ಶಂಕಿತ ಆರೋಪಿಗಳಾದ ವಾಸುದೇವ ಭಗವಂತ ಸೂರ್ಯವಂಶಿ ಮತ್ತು ಅಮಿತ ಬದ್ದಿ ಅವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಇವರಿಬ್ಬರ ಅರ್ಜಿಯನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಎಂ.ಜಿ. ಉಮಾ ಇವರ ಏಕಸದಸ್ಯ ಪೀಠವು ಜಾಮೀನು ಮಂಜೂರು ಮಾಡಿದ್ದಾರೆ.
1. ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಎಂ. ಅರುಣ ಶ್ಯಾಮ ಇವರು, ಕಲಬುರ್ಗಿಯವರ ಹತ್ಯೆಗಾಗಿ ಉಪಯೋಗಿಸಿದ ವಾಹನ ಕದ್ದಿದ್ದಾರೆ ಎಂಬ ಆರೋಪ ಅರ್ಜಿದಾರರ ಮೇಲಿದೆ. ಈ ಶಂಕಿತರು ಕಳೆದ 6 ವರ್ಷಗಳಿಂದ ಕಾರಾಗೃಹದಲ್ಲಿದ್ದಾರೆ. ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿಯೂ ಶಂಕಿತರ ಕೈವಾಡವಿದೆ. ಈ ಪ್ರಕರಣದ ತ್ವರಿತ ವಿಚಾರಣೆಗಾಗಿ ರಾಜ್ಯ ಸರಕಾರವು ವಿಶೇಷ ನ್ಯಾಯಾಲಯವನ್ನು ಪ್ರಾರಂಭಿಸುವುದಾಗಿ ಹೇಳಿತ್ತು; ಆದರೆ ಇದುವರೆಗೆ ಅದು ಕಾರ್ಯಗತವಾಗಿರುವುದಿಲ್ಲ. ಕಲಬುರ್ಗಿ ಹತ್ಯೆ ಪ್ರಕರಣದ 138 ಸಾಕ್ಷಿಗಳ ಪೈಕಿ 10 ಸಾಕ್ಷಿಗಳ ವಿಚಾರಣೆ ಮಾತ್ರ ಪೂರ್ಣಗೊಂಡಿದೆ. ಸಧ್ಯಕ್ಕೆ ಇನ್ನುಳಿದ ಸಾಕ್ಷಿದಾರರ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆಯಿಲ್ಲ. ಆದುದರಿಂದ ಶಂಕಿತರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಲಾಗಿತ್ತು.
2. ಮತ್ತೊಂದೆಡೆ ಸರಕಾರದ ಪರವಾಗಿ ಯುಕ್ತಿವಾದ ಮಂಡಿಸಿದ ಸರಕಾರಿ ನ್ಯಾಯವಾದಿಗಳು ಮಾತನಾಡಿ, ಆರೋಪಿಗಳ ವಿರುದ್ಧ ಗಂಭೀರ ಆರೋಪಗಳಿದ್ದು, ಅವರಿಗೆ ಜಾಮೀನು ಮಂಜೂರು ಮಾಡಿದರೆ ಪ್ರಕರಣದ ವಿಚಾರಣೆಗೆ ಅಡ್ಡಿ ಉಂಟಾಗಲಿದೆ. ಮೇಲ್ನೋಟಕ್ಕೆ ಆರೋಪಿಗಳ ವಿರುದ್ಧ ಸಾಕ್ಷ್ಯವಿದೆ. ಆದುದರಿಂದ ಜಾಮೀನು ಅರ್ಜಿಯನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.
ತ್ವರಿತಗತಿ ನ್ಯಾಯಾಲಯವನ್ನು ಸ್ಥಾಪಿಸಲು ಸರಕಾರ ನಿರ್ಲಕ್ಷ ತೋರಿದ್ದರಿಂದ ಉಚ್ಚನ್ಯಾಯಾಲಯದಿಂದ ಛೀಮಾರಿ !
ಇಬ್ಬರೂ ಶಂಕಿತರ ಜಾಮೀನು ಅರ್ಜಿಯನ್ನು ಮಂಜೂರು ಮಾಡುವ ಹಿಂದಿನ ದಿನ ನಡೆದ ವಿಚಾರಣೆಯ ಸಮಯದಲ್ಲಿ ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಛೀಮಾರಿ ಹಾಕಿತ್ತು. ‘ಪ್ರಾಧ್ಯಾಪಕ ಎಂ.ಎಂ. ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶರ ಹತ್ಯೆಯ ಪ್ರಕರಣದ ತನಿಖೆಗಾಗಿ ಶೀಘ್ರವಾಗಿ ವಿಶೇಷ ತ್ವರಿತ ನ್ಯಾಯಾಲಯವನ್ನು ಸ್ಥಾಪಿಸುವ ಸಂದರ್ಭದಲ್ಲಿ ವಿಳಂಬ ಮಾಡಿರುವುದರಿಂದ ರಾಜ್ಯ ಸರಕಾರಕ್ಕೆ ಛೀಮಾರಿ ಹಾಕಿದೆಯೆಂದು’, `ಬಾರ್ ಅಂಡ ಬೆಂಚ್’ ಈ ಸುದ್ದಿಜಾಲತಾಣದಲ್ಲಿ ತಿಳಿಸಿದೆ.
ವಿಶೇಷ ಸರಕಾರಿ ನ್ಯಾಯವಾದಿ ಅಶೋಕ ನಾಯಕ ಮಾತನಾಡಿ, `ಉಚ್ಚ ನ್ಯಾಯಾಲಯಕ್ಕೆ ಸಂಬಂಧಿಸಿದ ಅಡ್ವೊಕೇಟ ಜನರಲ್ ಅವರೊಂದಿಗೆ ಈ ವಿಷಯದ ಕುರಿತು ಚರ್ಚಿಸಿದ್ದಾರೆ. ಮುಂದಿನ ವಿಚಾರಣೆ ವೇಳೆಗೆ ಈ ವಿಷಯದ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದು ಹೇಳಿದರು. ಇದಕ್ಕೆ ಉಚ್ಚ ನ್ಯಾಯಾಲಯವು, ‘ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿ, ನ್ಯಾಯಾಧೀಶರನ್ನು ನಿಯೋಜಿಸಿ ಅಧಿಸೂಚನೆಯನ್ನು ಜಾರಿಗೊಳಿಸಬೇಕು. ಸರಕಾರ ಈ ಕೆಲಸವನ್ನು ಹೇಗೆ ಕೆಲಸ ಮಾಡುತ್ತದೆಯೆಂದು ನಮಗೆ ತಿಳಿದಿದೆ’ ಎಂದು ಛೀಮಾರಿ ಹಾಕಿತು.