ಚಿಕ್ಕಮಗಳೂರು – ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣನ ಆರ್ಭಟವಿದ್ದೂ ಇಂದು (ಜುಲೈ 21) ಸ್ವಲ್ಪ ವಿರಾಮ ನೀಡಿದೆ. ಮಳೆನಿಂತರೂ ತೊಂದರೆಗಳೇನೂ ಕಡಿಮೆಯಾಗಿಲ್ಲ, ಜನರು ಮಳೆಯಿಂದಾಗಿ ಕಂಗೆಟ್ಟು ಹೋಗಿದ್ದಾರೆ. ಚಂದ್ರದ್ರೋಣ ಪರ್ವತದಲ್ಲಿ ಮತ್ತೆ ಗುಡ್ಡ ಕುಸಿತವಾಗಿದ್ದರಿಂದ ಪ್ರವಾಸಿಗರನ್ನು ದತ್ತಪೀಠಕ್ಕೆ ತೆರಳಲು ನಿರ್ಬಂಧಿಸಲಾಗಿದೆ.
ಚಿಕ್ಕಮಗಳೂರು ನಗರದಿಂದ ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿ ಕವಿಕಲ್ ಗಂಡಿ ಬಳಿ ಗುಡ್ಡ ಕುಸಿದಿದೆ. ರಸ್ತೆ ಮೇಲೆ ಮಣ್ಣುಗಳ ರಾಶೀ ಮತ್ತು ಕಲ್ಲುಗಳ ರಾಶಿ ಬಿದ್ದಿವೆ. ಹಾಗಾಗಿ ದತ್ತಪೀಠಕ್ಕೆ ಹೋಗಲು ಪ್ರವಾಸಿಗರನ್ನು ತಡೆಯಲಾಗಿದೆ.
ರಕ್ಷಣಾ ಕಾರ್ಯಾಚರಣೆ
ಧಾರಾಕಾರ ಮಳೆಯಿಂದಾಗಿ ಬಸ್ ನಿಲ್ದಾಣ ಮತ್ತು ನಗರದ ಅಂಗಡಿಗಳ ಮುಂದೆ ಸಿಲುಕಿದ್ದ 15 ಜನ ನಿರಾಶ್ರಿತರನ್ನು ರಕ್ಷಿಸಲಾಗಿದೆ.
ಮಳೆಯಿಂದ ಮನೆಗೆ ಹಾನಿ
ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ ಮನೆ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಹಿಂಭಾಗದ ಗೋಡೆ, ಮೇಲ್ಚಾವಣಿ ಕುಸಿದು ಬಿದ್ದಿದ್ದರಿಂದ ಮನೆಯಲ್ಲಿದ್ದ ವಸ್ತುಗಳು ಹಾನಿಯಾಗಿವೆ.