Samvidhan Hatya Divas : ಕೇಂದ್ರ ಸರಕಾರದಿಂದ ‘ಜೂನ್ 25’ ದಿನವನ್ನು ‘ಸಂವಿಧಾನ ಹತ್ಯೆ ದಿನ’ ಎಂದು ಘೋಷಣೆ

ಜೂನ್ 25, 1975 ರಂದು ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು !

ನವ ದೆಹಲಿ – ಕೇಂದ್ರ ಸರ್ಕಾರ ಜೂನ್ 25 ಅನ್ನು ‘ಸಂವಿಧಾನ ಹತ್ಯೆ ದಿನ’ ಎಂದು ಘೋಷಿಸಿದೆ. ಈ ಸಂಬಂಧ ಕೇಂದ್ರ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಮಾಹಿತಿಯನ್ನು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೂನ್ 25, 1975 ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು.

ಅಮಿತ ಶಾ ಇವರು ತಮ್ಮ ಪೋಸ್ಟನಲ್ಲಿ, 1975ರ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ನಿಷೆಧಾಜ್ಞೆ ಜಾರಿ ಮಾಡಿ ಸರ್ವಾಧಿಕಾರಿ ಮನಸ್ಥಿತಿ ಪ್ರದರ್ಶಿಸುವ ಮೂಲಕ ದೇಶದ ಪ್ರಜಾಪ್ರಭುತ್ವದ ಆತ್ಮದ ಕತ್ತು ಹಿಸುಕಿದ್ದರು. ಯಾವುದೇ ತಪ್ಪಿಲ್ಲದೆ ಲಕ್ಷಾಂತರ ಜನರನ್ನು ಜೈಲಿಗೆ ತಳ್ಳಲಾಯಿತು ಮತ್ತು ಮಾಧ್ಯಮದವರ ಬಾಯಿ ಮುಚ್ಚಲಾಯಿತು. 1975 ರಲ್ಲಿ ಅಮಾನವೀಯ ಸಂಕಟವನ್ನು ಅನುಭವಿಸಿದ ಎಲ್ಲರ ಮಹತ್ತರವಾದ ಕೊಡುಗೆಯನ್ನು ಸ್ಮರಿಸಲು ಭಾರತ ಸರ್ಕಾರವು ಪ್ರತಿ ವರ್ಷ ‘ಜೂನ್ 25’ ಅನ್ನು ‘ಸಂವಿಧಾನ ಹತ್ಯೆ ದಿನ’ ಎಂದು ಆಚರಿಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರದ ಹಿಂದೆ, ಹಳೇ ಸರ್ವಾಧಿಕಾರಿ ಸರ್ಕಾರದ ಅಸಂಖ್ಯಾತ ಚಿತ್ರಹಿಂಸೆ ಮತ್ತು ದಬ್ಬಾಳಿಕೆಗಳನ್ನು ಎದುರಿಸಿ ಮುಂದುವರೆಸಿದ ಲಕ್ಷಾಂತರ ಜನರ ಹೋರಾಟವನ್ನು ಗೌರವಿಸುವುದು ಉದ್ದೇಶವಾಗಿದೆ. ‘ಸಂವಿಧಾನ ಹತ್ಯೆ ದಿನ’ ಪ್ರತಿಯೊಬ್ಬ ಭಾರತೀಯನಲ್ಲೂ ವೈಯಕ್ತಿಕ ಸ್ವಾತಂತ್ರ್ಯದ ಅಮರ ಜ್ವಾಲೆಯನ್ನು ಉರಿಯುವಂತೆ ಮಾಡುತ್ತದೆ, ಇದರಿಂದ ಕಾಂಗ್ರೆಸ್‌ನಂತಹ ಸರ್ವಾಧಿಕಾರಿ ಮಾನಸಿಕತೆ ಭವಿಷ್ಯದಲ್ಲಿ ಅದನ್ನು ಪುನರಾವರ್ತಿಸುವುದಿಲ್ಲ.

ತುರ್ತು ಪರಿಸ್ಥಿತಿ ಎಂದರೇನು ?

ಭಾರತದ ಸಂವಿಧಾನದ 352 ನೇ ವಿಧಿಯು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲು ರಾಷ್ಟ್ರಪತಿಗಳಿಗೆ ಅಧಿಕಾರ ನೀಡುತ್ತದೆ. ಪ್ರಧಾನ ಮಂತ್ರಿ ನೇತೃತ್ವದ ಸಂಪುಟದ ಲಿಖಿತ ಶಿಫಾರಸಿನ ಮೇರೆಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗುತ್ತದೆ. ಇದರ ಅಡಿಯಲ್ಲಿ ನಾಗರಿಕರ ಎಲ್ಲಾ ಮೂಲಭೂತ ಹಕ್ಕುಗಳನ್ನು ರದ್ದುಗೊಳಿಸಲಾಗುತ್ತದೆ. ಇಡೀ ದೇಶದಲ್ಲಿ ಅಥವಾ ಯಾವುದೇ ರಾಜ್ಯದಲ್ಲಿ ಬರ, ವಿದೇಶಿ ಆಕ್ರಮಣ, ಆಂತರಿಕ ಆಡಳಿತ ಅವ್ಯವಸ್ಥೆ ಅಥವಾ ಅಸ್ಥಿರತೆ ಇತ್ಯಾದಿ ಪರಿಸ್ಥಿತಿಗಳು ಉಂಟಾದಾಗ, ಆ ಪ್ರದೇಶದ ಎಲ್ಲಾ ರಾಜಕೀಯ ಮತ್ತು ಆಡಳಿತಾತ್ಮಕ ಅಧಿಕಾರಗಳು ರಾಷ್ಟ್ರಪತಿಗಳ ಕೈಗೆ ಹೋಗುತ್ತವೆ. ಇದುವರೆಗೆ ಭಾರತದಲ್ಲಿ 3 ಬಾರಿ ತುರ್ತುಪರಿಸ್ಥಿತಿ ಹೇರಲಾಗಿದೆ. ಇದು 1962, 1971 ಮತ್ತು 1975 ರಲ್ಲಿ ಆರ್ಟಿಕಲ್ 352 ರ ಅಡಿಯಲ್ಲಿ ರಾಷ್ಟ್ರೀಯ ತುರ್ತುಪರಿಸ್ಥಿತಿ ಹೇರಿಕೆಯನ್ನು ಒಳಗೊಂಡಿತ್ತು.

1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಏಕೆ ಘೋಷಿಸಲಾಯಿತು ?

ಅಲಹಾಬಾದ್ ಹೈಕೋರ್ಟ್ ತೀರ್ಪಿನ ನಂತರ 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಇಂದಿರಾ ಗಾಂಧಿಯವರ ರಾಯ್ ಬರೇಲಿಯಲ್ಲಿ ಚುನಾವಣಾ ಗೆಲುವನ್ನು ಪ್ರಶ್ನಿಸುವ ಅರ್ಜಿಯ ಮೇಲೆ ಜೂನ್ 12, 1975 ರಂದು ಹೈಕೋರ್ಟ್ ತೀರ್ಪು ನೀಡಿತ್ತು ಮತ್ತು ಹೈಕೋರ್ಟ್ ಚುನಾವಣೆಯನ್ನು ರದ್ದುಗೊಳಿಸಿತ್ತು ಮತ್ತು ಮುಂದಿನ 6 ವರ್ಷಗಳವರೆಗೆ ಅವರು ಸ್ಪರ್ಧಿಸದಂತೆ ನಿರ್ಬಂಧಿಸಲಾಗಿತ್ತು. ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ಇದಾದ ನಂತರ ಇಂದಿರಾಗಾಂಧಿಯವರ ರಾಜೀನಾಮೆಗೆ ಆಗ್ರಹಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಇದರ ನಂತರ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯನ್ನು ಘೋಷಿಸಿದರು. ಇಂದಿರಾ ಗಾಂಧಿ ಸರ್ಕಾರದ ಈ ನಿರ್ಧಾರವನ್ನು ವಿವಿಧ ಸಂಘಟನೆಗಳು ವಿರೋಧಿಸಿದ್ದು, ಇದನ್ನು ಸರ್ವಾಧಿಕಾರಿ ಎಂದು ಕರೆದರು ಮತ್ತು ಬೃಹತ್ ಪ್ರತಿಭಟನೆಗಳು ಪ್ರಾರಂಭವಾದವು.