Nambi Narayanan : ಪೊಲೀಸ್ ಅಧಿಕಾರಿಗಳು ಷಡ್ಯಂತ್ರ ರಚಿಸಿ, ಇಸ್ರೋ ವಿಜ್ಞಾನಿ ನಂಬಿ ಅವರನ್ನು ಬಂಧಿಸಿರುವುದು ಬಹಿರಂಗ

  • ನಂಬಿ ನಾರಾಯಣನ್ ಅವರ ವಿರುದ್ಧ ಸುಳ್ಳು ಗೂಢಚಾರಿಕೆ ಪ್ರಕರಣದಲ್ಲಿ ಸಿಬಿಐನಿಂದ ಆರೋಪಪತ್ರ(ಚಾರ್ಜ್ ಶೀಟ್) ಸಲ್ಲಿಕೆ

  • ಇಬ್ಬರು ಮಾಜಿ ಪೊಲೀಸ್ ಮಹಾನಿರ್ದೇಶಕರ ಬಂಧನ

ವಿಜ್ಞಾನಿ ನಂಬಿ ನಾರಾಯಣನ್

ತಿರುವನಂತಪುರಂ (ಕೇರಳ) – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಯಾದ ನಂಬಿ ನಾರಾಯಣನ್ ಅವರ ಪ್ರಕರಣ ಮತ್ತೊಮ್ಮೆ ಚರ್ಚೆಯಲ್ಲಿದೆ. ಗೂಢಚಾರಿಕೆಯ ಆರೋಪದ ಮೇಲೆ ಹಲವು ವರ್ಷಗಳ ಕಾಲ ಕಾರಾಗೃಹದಲ್ಲಿದ್ದ ನಂಬಿ ನಾರಾಯಣನ್ ಅವರು ಕೆಲ ದಿನಗಳ ಹಿಂದೆ ಖುಲಾಸೆಗೊಂಡಿದ್ದಾರೆ. ಕೇರಳ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿರುವ ಆರೋಪ ಪತ್ರದಲ್ಲಿ 1994ರ ಇಸ್ರೋ ದ ಗೂಢಚಾರಿಕೆಯ ಪ್ರಕರಣ ಸುಳ್ಳು ಎಂದು ಹೇಳಲಾಗಿದೆ. ಕೇರಳ ಪೊಲೀಸ್ ವಿಶೇಷ ವಿಭಾಗದ ಮಾಜಿ ಅಧಿಕಾರಿಯೊಬ್ಬರು ಈ ಷಡ್ಯಂತ್ರವನ್ನು ರಚಿಸಿದ್ದರು ಎಂದು ಸಿಬಿಐ ಹೇಳಿದೆ. ಇದರಲ್ಲಿ ಕೇರಳದ ಮಾಜಿ ಪೊಲೀಸ್ ಮಹಾನಿರ್ದೇಶಕ ಸಿ.ಬಿ.ಮ್ಯಾಥ್ಯೂಸ್ ಮತ್ತು ಗುಜರಾತ್‌ನ ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ. ಶ್ರೀಕುಮಾರ್ ಇವರನ್ನು ಸಿಬಿಐ ಬಂಧಿಸಿದೆ. ಇತರ ಮೂವರು ನಿವೃತ್ತ ಪೊಲೀಸ್ ಅಧಿಕಾರಿಗಳಾದ ಎಸ್. ವಿಜಯನ್, ಕೆ.ಕೆ. ಜೋಶುವಾ ಮತ್ತು ಪಿಎಸ್ ಜಯಪ್ರಕಾಶ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ತಿರುವನಂತಪುರಂನ ಮುಖ್ಯ ನ್ಯಾಯಾಧಿಕಾರಿಯವರ ನ್ಯಾಯಾಲಯದಲ್ಲಿ ಸಿಬಿಐ ಆರೋಪ ಪತ್ರ ಸಲ್ಲಿಸಿದೆ. ಇದರಲ್ಲಿ ಮಾಲ್ಡೀವ್ಸ್ ಮಹಿಳೆಯೊಬ್ಬರನ್ನು ಅಕ್ರಮವಾಗಿ ವಶಕ್ಕೆ ಪಡೆದಿರುವುದನ್ನು ಸಮರ್ಥಿಸಲು ಈ ಷಡ್ಯಂತ್ರವನ್ನು ರಚಿಸಲಾಗಿತ್ತು ಎಂದು ಹೇಳಲಾಗಿದೆ. 2021ರಲ್ಲಿ, ನಂಬಿ ನಾರಾಯಣನ್ ಅವರ ಮೇಲೆ ಕೇರಳ ಪೊಲೀಸ್ ಮತ್ತು ಹಿರಿಯ ಗುಪ್ತಚರ ಅಧಿಕಾರಿಗಳ ತಥಾಕಥಿತ ಪಾತ್ರವನ್ನು ತನಿಖೆ ಮಾಡಲು ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿತ್ತು. ಆ ನಂತರ ಪಾಕಿಸ್ತಾನದ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಮಾಲ್ಡೀವ್ಸ್ ನ ಇಬ್ಬರು ಮಹಿಳೆಯರಿಗೆ ನಂಬಿ ಅವರು ಗೌಪ್ಯ ಮಾಹಿತಿಯನ್ನು ಮಾರಾಟ ಮಾಡಿದ್ದಾರೆಂದು ಆರೋಪಿಸಲಾಗಿತ್ತು.

ಸಿಬಿಐ ಆರೋಪಪಟ್ಟಿಯಲ್ಲಿ ಹೇಳಿದ್ದೇನು ?

ಈ ಪ್ರಕರಣವು ಮೊದಲಿನಿಂದಲೂ ಕಾನೂನು ಮತ್ತು ಅಧಿಕಾರದ ಉಲ್ಲಂಘನೆಯ ಉದಾಹರಣೆಯಾಗಿದೆ ಎಂದು ಸಿಬಿಐ ಸ್ಪಷ್ಟಪಡಿಸಿದೆ. ಮಾಲ್ಡೀವ್ಸ್ ಮಹಿಳೆಯರಾದ, ಮರಿಯಮ್ ರಶೀದಾ ಮತ್ತು ಫೌಜಿಯಾ ಹಸನ್ ಈ ಇಬ್ಬರು ಆರೋಪಿಗಳು ಇಸ್ರೋ ವಿಜ್ಞಾನಿಗಳಾದ ಡಿ. ಶಶಿಕುಮಾರನ್ ಮತ್ತು ನಂಬಿ ನಾರಾಯಣನ್, ಚಂದ್ರಶೇಖರ್ ಮತ್ತು ಎಸ್.ಕೆ. ಶರ್ಮಾ ಇವರನ್ನು ಗೂಢಚಾರಿಕೆಯ ಪ್ರಕರಣದಲ್ಲಿ ಸಿಲುಕಿಸಿದರು.

ರಶೀದಾ ಜೊತೆ ಶಾರೀರಿಕ ಸಂಬಂಧ ಹೊಂದಲು ಬಯಸಿದ್ದ ಮಾಜಿ ಪೊಲೀಸ್ ಅಧಿಕಾರಿ !

ಸಿಬಿಐ ಆರೋಪ ಪತ್ರದ ಪ್ರಕಾರ, ಮಾಲ್ಡೀವ್ಸ್ ಮಹಿಳೆಯಾದ ಮರಿಯಮ್ ರಶೀದಾ ತಿರುವನಂತಪುರಂನ ಹೋಟೆಲೊಂದರಲ್ಲಿ ತಂಗಿದ್ದರು. ಆಗ ಅದೇ ಸಮಯದಲ್ಲಿ ಇಲಾಖಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ವಿಜಯನ್ ಅದೇ ಹೋಟೆಲ್ ಗೆ ತಲುಪಿದರು. ಅವರು ಮರಿಯಮ್ ರಶೀದಾಳ ಕೊಠಡಿಗೆ ನುಗ್ಗಿ, ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಲು ಪ್ರಯತ್ನಿಸಿದರು. ಅದಕ್ಕೆ ಮೇರಿಯಮ್ ವಿರೋಧಿಸಿದಾಗ, ವಿಜಯನ್ ಮರಿಯಮ್ ಳಿಗೆ ಪಾಠ ಕಲಿಸಲು ಅವಳನ್ನು ಬಂಧಿಸಿದರು. ಬಳಿಕ ರಶೀದಾಳ ಹೆಸರನ್ನು ಇಸ್ರೋ ವಿಜ್ಞಾನಿ ಡಿ. ಶಶಿಕುಮಾರನ್ ಅವರೊಂದಿಗೆ ಜೋಡಿಸಿದರು ಮತ್ತು ತದನಂತರ ಸಂಪೂರ್ಣ ಪ್ರಕರಣವನ್ನು ಹೆಣೆದರು.

ನಂಬಿ ನಾರಾಯಣನ್ ಅವರನ್ನು ಸಿಲುಕಿಸಿದ್ದು ಹೀಗೆ :

ಆರೋಪ ಪತ್ರದ ಪ್ರಕಾರ, ಪೊಲೀಸ್ ಅಧಿಕಾರಿ ವಿಜಯನ್ ಕೂಡಲೇ ಹೋಟೆಲ್ ಕೊಠಡಿಯನ್ನು ಬಿಟ್ಟರು ಮತ್ತು ಮರಿಯಮ್ ರಶಿದಾ ಮತ್ತು ಫೌಜಿಯಾ ಹಸನ್ ಇವರ ಮಾಹಿತಿ ಸಂಗ್ರಹಿಸಿದರು. ಹೋಟೆಲ್ ನೊಂದಣಿಯಿಂದ ರಶಿದಾ ಇಸ್ರೋನಲ್ಲಿ ಕೆಲಸ ಮಾಡುವ ಡಿ.ಶಶಿಕುಮಾರನ್ ಇವರೊಂದಿಗೆ ದೂರವಾಣಿ ಮುಖಾಂತರ ಸಂಪರ್ಕದಲ್ಲಿದ್ದರು. ವಿಜಯನ್ ಅವರು ಮಹಿಳೆಯರಿಬ್ಬರ ಪಾಸಪೋರ್ಟ್ ಮತ್ತು ಮಾಲೆಗೆ ಹೋಗುವ ವಿಮಾನದ ಟಿಕೀಟ್ ಅನ್ನು ಜಪ್ತಿ ಮಾಡಿದ್ದರು. ಭಾರತದಲ್ಲಿರುವ ವಿಸಾ ಮುಗಿದ ಬಳಿಕವೂ ರಶಿದಾ ಭಾರತದಿಂದ ಹೋಗುವುದನ್ನು ಅವರು ತಡೆದರು. ಸುಳ್ಳು ತನಿಖೆಯ ವರದಿ ಸಿದ್ಧಪಡಿಸಲಾಯಿತು ಮತ್ತು ಅದರ ಆಧಾರದಲ್ಲಿ ಇತರೆ ಜನರನ್ನು ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ ಅವರಿಂದ ತಪ್ಪೊಪ್ಪಿಗೆಯನ್ನು ಪಡೆಯಲು ಅವರಿಗೆ ಶಾರೀರಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಯಿತು.

ನಂಬಿ ನಾರಾಯಣನ್ ಅವರಿಗೆ 50 ದಿನಗಳ ಕಾಲ ಕಿರುಕುಳ ನೀಡಲಾಯಿತು.

ಭಾರತದ ಅನೇಕ ರಾಕೆಟ್ ನಲ್ಲಿ ಉಪಯೋಗಿಸಲಾಗಿರುವ ‘ವಿಕಾಸ್ ಇಂಜಿನ್’ ತಯಾರಿಸುವಲ್ಲಿ ವಿಜ್ಞಾನಿ ನಂಬಿ ನಾರಾಯಣನ್ ಅವರ ಅಮೂಲ್ಯ ಕೊಡುಗೆಯಿತ್ತು. ಗೂಢಚಾರಿಕೆಯ ಆರೋಪದ ಬಳಿಕ ಅವರನ್ನು ಬಂಧಿಸಲಾಯಿತು. ಅವರಿಗೆ ವಿಪರೀತವಾಗಿ ಶಾರೀರಿಕ ಮತ್ತು ಮಾನಸಿಕ ಹಿಂಸೆ ನೀಡಲಾಯಿತು. ಈ ಹಿಂಸೆ 50 ದಿನಗಳವರೆಗೆ ನಡೆಯಿತು. ಇದರಿಂದ ಅವರ ಗೌರವ ಮತ್ತು ಅವರ ಉದ್ಯೋಗಕ್ಕೆ ದೊಡ್ಡ ಹಾನಿಯಾಯಿತು. ನಾರಾಯಣನ್ ಅವರು ಈ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಒಯ್ದರು ಮತ್ತು ಅವರನ್ನು ತಪ್ಪು ರೀತಿಯಲ್ಲಿ ಬಂಧಿಸಿದ್ದಾರೆ ಮತ್ತು ಹಿಂಸಿಸಿದ್ದಾರೆಂದು ನ್ಯಾಯದೇವತೆಗೆ ಮನವಿ ಮಾಡಿದರು.

ಈ ಬಗ್ಗೆ ನಂಬಿ ನಾರಾಯಣನ್ ಹೇಳಿದ್ದೇನು?

ಈ ಸತ್ಯವನ್ನು ಹೊರ ತರಲು 20 ವರ್ಷಗಳ ಕಾಲ ಹೋರಾಡಿದ ನಂಬಿ ನಾರಾಯಣನ್ ಅವರು ಈ ಆರೋಪ ಪತ್ರದ ಬಳಿಕ ಪ್ರತಿಕ್ರಿಯೆ ನೀಡುತ್ತಾ, ಒಬ್ಬ ವ್ಯಕ್ತಿಯಾಗಿ ನನಗೆ ಅಪರಾಧಿಗಳಿಗೆ ಶಿಕ್ಷೆಯಾಯಿತೋ- ಇಲ್ಲವೋ ಇದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ ಅವರು ತಪ್ಪು ಮಾಡಿದ್ದರು ಎಂದು ಒಪ್ಪಿಕೊಂಡರೆ ನನಗೆ ಅಷ್ಟೇ ಸಾಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಸ್ರೋ ವಿಜ್ಞಾನಿಗಳನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಿ ಅವರನ್ನು ಕಿರುಕುಳ ನೀಡುವುದರೊಂದಿಗೆ ದೇಶಕ್ಕೆ ಅಪಾರವಾದ ಹಾನಿ ಉಂಟು ಮಾಡುತ್ತಿರುವ ಇಂತಹ ಪೊಲೀಸ್ ಅಧಿಕಾರಿಗಳಿಗೆ ಗಲ್ಲು ಶಿಕ್ಷೆಯಾಗಲು ಕೇಂದ್ರ ಸರ್ಕಾರ ಪ್ರಯತ್ನಿಸಬೇಕು.