ಭೋಲೆ ಬಾಬಾರ ಸ್ಪರ್ಶವಾದ ಮಣ್ಣನ್ನು ಸಂಗ್ರಹಿಸುವಾಗ ಕಾಲ್ತುಳಿತ !

  • ಹಾಥರಸ (ಉತ್ತರ ಪ್ರದೇಶ): ಕಾಲ್ತುಳಿತದಲ್ಲಿ 121 ಜನರ ಸಾವು

  • ಸತ್ಸಂಗಕ್ಕಾಗಿ ಎರಡೂವರೆ ಲಕ್ಷ ಭಕ್ತರು ಸೇರಿದ್ದರು

ಹಾಥರಸ (ಉತ್ತರ ಪ್ರದೇಶ) – ನಾರಾಯಣ ಸಾಕಾರ ವಿಶ್ವ ಹರಿ ಅಲಿಯಾಸ್ ಭೋಲೆ ಬಾಬಾ ಅವರ ಸತ್ಸಂಗದ ವೇಳೆ ನಡೆದ ಕಾಲ್ತುಳಿತದಲ್ಲಿ 121 ಜನರು ಮರಣ ಹೊಂದಿದರು. ಭೋಲೆ ಬಾಬಾರವರು ಸತ್ಸಂಗದ ಸ್ಥಳದಿಂದ ನಿರ್ಗಮಿಸಿದ ನಂತರ ಅವರ ಸ್ಪರ್ಶವಾಗಿರುವ ಮಣ್ಣನ್ನು ಸಂಗ್ರಹಿಸಲು ನೂಕು ನುಗ್ಗಲು ಶುರುವಾಯಿತು. ಈ ನೂಕು ನುಗ್ಗಲಿನಲ್ಲಿ ನೆರೆದ ಭಕ್ತರು ಹತ್ತಿರವೇ ಇದ್ದ ಚರಂಡಿಯಲ್ಲಿ ಬಿದ್ದರು, ಎಂದು ಉತ್ತರಪ್ರದೇಶದ ಸಚಿವ ಮನೋಜ ಕುಮಾರ್ ಸಿಂಹ ಅವರು ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿ ಪೊಲೀಸರು ಸತ್ಸಂಗದ ಮುಖ್ಯ ಸ್ವಯಂಸೇವಕ ದೇವಪ್ರಕಾಶ ಮಧುಕರ್ ಮತ್ತು ಇತರ ಅಜ್ಞಾತರು, ಆಯೋಜಕರ ವಿರುದ್ಧ ಅಪರಾಧವನ್ನು ದಾಖಲಿಸಿದ್ದಾರೆ. ಆಯೋಜಕರು 80 ಸಾವಿರ ಜನರ ಸತ್ಸಂಗಕ್ಕಾಗಿ ಅನುಮತಿಯನ್ನು ಕೋರಿದ್ದರು; ಆದರೆ ಈ ಸತ್ಸಂಗಕ್ಕೆ ಎರಡೂವರೆ ಲಕ್ಷಕ್ಕಿಂತ ಹೆಚ್ಚು ಭಕ್ತರು ಸೇರಿದ್ದರು.` ಭೋಲೆ ಬಾಬಾ ಅವರ ಮೇಲೆಯೂ ಕ್ರಮ ಕೈಕೊಳ್ಳಲಾಗುವುದು’, ಎಂದು ಮನೋಜ ಕುಮಾರ್ ಸಿಂಹ ಹೇಳಿದ್ದಾರೆ; ಆದರೆ ದಾಖಲಿಸಿರುವ ವರದಿಯಲ್ಲಿ ಅವರ ಹೆಸರಿಲ್ಲ. ಇದರಿಂದ ತನಿಖೆ ಪ್ರಕ್ರಿಯೆಯನ್ನು ಪ್ರಶ್ನಿಸಲಾಗುತ್ತಿದೆ.

ಯಾರು ಈ ಭೋಲೆ ಬಾಬಾ ?

ಭೋಲೆ ಬಾಬಾರ ನಿಜವಾದ ಹೆಸರು ಸೂರಜ್ ಪಾಲ ಸಿಂಗ್. ಸುಮಾರು 40 ವರ್ಷಗಳ ಹಿಂದೆ, ಅವರು ಉತ್ತರ ಪ್ರದೇಶದ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸಿದ್ದರು. 10 ವರ್ಷಗಳ ಕಾಲ ಪೊಲೀಸ್ ಆಗಿ ಕೆಲಸ ಮಾಡಿದ ಬಳಿಕ ಅವರು ತಮ್ಮ ಕೆಲಸ ಬಿಟ್ಟರು. 1990 ರ ದಶಕದಲ್ಲಿ, ಅವರು ಹಾಥರಸ್ ನ ತಮ್ಮ ಭೂಮಿಯಲ್ಲಿ ದೊಡ್ಡ ಆಶ್ರಮವನ್ನು ನಿರ್ಮಿಸಿದರು ಮತ್ತು ಅಲ್ಲಿ ಸತ್ಸಂಗಗಳನ್ನು ಆಯೋಜಿಸಲು ಪ್ರಾರಂಭಿಸಿದರು. ಅವರ ಆಶ್ರಮಕ್ಕೆ ಸುತ್ತಮುತ್ತಲಿನ ಗ್ರಾಮಗಳಿಂದ ಮತ್ತು ಇತರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲಾರಂಭಿಸಿದರು.

ಸಂಪಾದಕೀಯ ನಿಲುವು

ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಸೇರುವ ಬಗ್ಗೆ ಪೊಲೀಸರಿಗೆ ಮತ್ತು ಅಲ್ಲಿನ ಸರ್ಕಾರಕ್ಕೆ ಮಾಹಿತಿ ಹೇಗೆ ಸಿಗಲಿಲ್ಲ? ಮತ್ತು ಅವರು ಸರಿಯಾದ ನಿಯೋಜನೆಯನ್ನು ಮಾಡಲಿಲ್ಲವೇಕೆ? ಇದಕ್ಕೆ ಜವಾಬ್ದಾರರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು!