ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೇ ದಿನ (ಜೂನ್ 28)
ದೇವಸ್ಥಾನ ಸಂಸ್ಕೃತಿಯ ರಕ್ಷಣೆಯ ಪ್ರಯತ್ನಗಳು
ವಿದ್ಯಾಧಿರಾಜ ಸಭಾಂಗಣ – ಮಠಗಳು ಮತ್ತು ದೇವಸ್ಥಾನಗಳು ಸನಾತನ ಹಿಂದೂ ಧರ್ಮದ ಆಧಾರಸ್ತಂಭಗಳಾಗಿವೆ. ಜನರಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸಿದರೆ ಅವರ ವಿಚಾರಗಳಲ್ಲಿ ಬದಲಾವಣೆ ಆಗುತ್ತದೆ. ಇದರಿಂದ ಸಮಾಜದಲ್ಲಿ ಅಪರಾಧಗಳು ನಿಲ್ಲುತ್ತದೆ ಮತ್ತು ಇದು ಮಠ-ದೇವಾಲಯಗಳ ಮೂಲಕ ಸಾಧ್ಯವಿದೆ ಎಂದು ರಾಯಪುರದ ‘ಮಿಷನ್ ಸನಾತನ’ ಸಂಸ್ಥಾಪಕ ಮದನ ಮೋಹನ ಉಪಾಧ್ಯಾಯ ಅವರು ಹೇಳಿದರು.
ಮದನ್ ಮೋಹನ್ ಉಪಾಧ್ಯಾಯರು ಮಾತು ಮುಂದುವರೆಸಿ, “ಹಿಂದಿನ ಕಾಲದಲ್ಲಿ ದೇವಾಲಯಗಳಲ್ಲಿ ಪೂಜಾರಿಗಳು ಭಕ್ತರ ಆರೋಗ್ಯವನ್ನು ಗಮನಿಸಿ ಔಷಧಿಯುಕ್ತ ಪ್ರಸಾದವನ್ನು ನೀಡುತ್ತಿದ್ದರು. ದೇವಾಲಯಗಳ ಗೋಶಾಲೆ, ಸಂಗೀತ ಶಾಲೆ, ಮಲ್ಲಶಾಲೆಗಳು ಇತ್ತು. ಆ ಅಖಾಡಗಳಿಂದ ತಯಾರಾದ ಯುವಕರು ಸಮಾಜದ ರಕ್ಷಣೆಯನ್ನು ಮಾಡುತ್ತಿದ್ದರು. ಇತ್ತೀಚೆಗೆ ಕೋಟ್ಯಂತ ರೂಪಾಯಿಗಳ ವೆಚ್ಚದಲ್ಲಿ ದೇವಸ್ಥಾನಗಳನ್ನು ನಿರ್ಮಿಸಲಾಗುತ್ತಿದೆ; ಆದರೆ ದೇವತೆಯ ಪೂಜೆಗೆ ಕಡಿಮೆ ಸಂಬಳದಲ್ಲಿ ಪೂಜಾರಿಗಳನ್ನು ನೇಮಿಸಲಾಗುತ್ತಿದೆ ಮತ್ತು ಅವರಿಂದ ಹೆಚ್ಚಿನ ಕಾರ್ಯಗಳನ್ನು ನಿರೀಕ್ಷಿಸಲಾಗುತ್ತಿದೆ. ಆದ್ದರಿಂದ ದೇವಾಲಯಗಳು ಸೂಕ್ತ ಪೂಜಾರಿಗಳನ್ನು ನೇಮಿಸಬೇಕು, ಹಾಗೆಯೇ ಅವರ ಜೀವನೋಪಾಯಕ್ಕಾಗಿ ದೇವಾಲಯದ ಟ್ರಸ್ಟ್‌ಗಳು ಪ್ರಯತ್ನಿಸಬೇಕು. ಇದರೊಂದಿಗೆ ಶ್ರೀಮಂತ ದೇವಾಲಯಗಳು ಆರ್ಥಿಕವಾಗಿ ದುರ್ಬಲ ದೇವಾಲಯಗಳನ್ನು ದತ್ತಕ ತೆಗೆದುಕೊಳ್ಳಬೇಕು. ‘ಮಿಷನ್ ಸನಾತನ’ ಸಂಸ್ಥೆಯು 3 ಗುರುಕುಲಗಳನ್ನು ಉಚಿತವಾಗಿ ನಡೆಸುತ್ತಿದೆ, ಇದರಲ್ಲಿ 1 ಸಾವಿರದ 800 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಮುಂದಿನ 5 ವರ್ಷಗಳಲ್ಲಿ 20 ಸಾವಿರ ಮಕ್ಕಳಿಗೆ ಗುರುಕುಲದಲ್ಲಿ ಶಿಕ್ಷಣ ನೀಡಲು ಯೋಜನೆ ಇದೆ.” ಎಂದು ಹೇಳಿದರು.