ಹಿಂದೂ ಹಿತಕಾರಿ ಹೆಜ್ಜೆ !

ಜಗನ್ನಾಥ ಪುರಿ

ಒಡಿಶಾದಲ್ಲಿ ಹಿಂದೂಗಳಿಗೆ ಭರವಸೆಯ ದಿನಗಳು ಬರುವ ಲಕ್ಷಣಗಳಿವೆ. ಇತ್ತೀಚೆಗಷ್ಟೇ ಅಧಿಕಾರಕ್ಕೆ ಬಂದ ಭಾಜಪ ಸರಕಾರ ಹಿಂದೂಹಿತಕ್ಕಾಗಿ ಮೊದಲ ಹೆಜ್ಜೆ ಇಟ್ಟಿತು. ಜೂನ್ ೧೨ ರಂದು ಒಡಿಶಾ ಮುಖ್ಯಮಂತ್ರಿ ಮೋಹನ ಚರಣ ಮಾಝಿ ಅವರು ಜಗನ್ನಾಥ ಪುರಿಯಲ್ಲಿರುವ ರಾಜ್ಯದ ಅತಿದೊಡ್ಡ ದೇವತೆ ಎಂದು ಪರಿಗಣಿಸಲಾದ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ಬಾಗಿಲುಗಳನ್ನು ತೆರೆಯುವುದಾಗಿ ಘೋಷಿಸಿದರು, ಅದರಂತೆ ಈಗ ಈ ಬಾಗಿಲುಗಳನ್ನು ತೆರೆಯಲಾಗಿದೆ. ಈ ಹಿಂದೆ ಭಕ್ತರು ದೇವಸ್ಥಾನವನ್ನು ಒಂದು ಬಾಗಿಲಿನಿಂದ ಮಾತ್ರ ಪ್ರವೇಶಿಸಬಹುದಾಗಿತ್ತು. ಕೊರೊನಾ ಮಹಾಮಾರಿಯ ನಂತರ ಹಲವು ವರ್ಷಗಳ ನಂತರ ಮೊದಲ ಬಾರಿಗೆ ಭಕ್ತರಿಗೆ ಎಲ್ಲಾ ಬಾಗಿಲುಗಳನ್ನು ತೆರೆಯಲಾಗಿದೆ. ವಾಸ್ತವದಲ್ಲಿ, ಕೊರೊನಾದ ಪರಿಣಾಮವು ಮುಗಿದ ನಂತರ, ಭಕ್ತರು ಎಲ್ಲಾ ನಾಲ್ಕು ಬಾಗಿಲು ಗಳನ್ನು ತೆರೆಯಲು ಒತ್ತಾಯಿಸುತ್ತಿದ್ದರು; ಆದರೆ ಅಂದಿನ ಬಿಜು ಜನತಾ ದಳ ಪ್ರತಿ ಬಾರಿಯೂ ಕಾರಣ ನೀಡಿ ಈ ಬೇಡಿಕೆ ಯನ್ನು ಮುಂದೂಡಿತು. ಈ ಹಿಂದೆ ಒಂದು ಬಾಗಿಲು ಮಾತ್ರ ತೆರೆದಿದ್ದರಿಂದ ಭಕ್ತರು ೩-೪ ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಬೇಕಾಯಿತು. ಈಗ ಈ ಸಮಸ್ಯೆ ದೂರವಾಗಲಿದ್ದು, ಭಕ್ತರು ಕಡಿಮೆ ಸಮಯದಲ್ಲಿ ದೇವರ ದರ್ಶನ ಪಡೆಯಬಹುದಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಒಡಿಶಾದ ಹಿಂದೂಗಳಿಗೆ ಸರಕಾರದ ಹಿಂದೂಪರವಾದ ಕ್ರಮದಿಂದಾಗಿ ಸಮಾಧಾನ ಸಿಕ್ಕಿತು.

ಮಾಝಿ ಇವರು ದೇವಸ್ಥಾನದ ಎಲ್ಲಾ ಬಾಗಿಲುಗಳನ್ನು ತೆರೆಸಿದ್ದು ಮಾತ್ರವಲ್ಲ ಅವರು ರಾಜ್ಯ ಬಜೆಟ್‌ನಲ್ಲಿ ದೇವಸ್ಥಾನದ ನಿರ್ವಹಣೆಗೆ ೫೦೦ ಕೋಟಿ ರೂಪಾಯಿಗಳ ಕಾರ್ಪಸ್ ನಿಧಿ (ಬಂಡವಾಳ ನಿಧಿ) ನೀಡುತ್ತೇವೆ ಎಂದು ಘೋಷಿಸಿದರು. ಜುಲೈ ೭ ರಂದು ಜಗನ್ನಾಥನ ರಥಯಾತ್ರೆ ಇದೆ. ಅದಕ್ಕೆ ತಕ್ಕಂತೆಯೂ ಭಾಜಪ ಸರಕಾರ ಇನ್ನಷ್ಟು ಹಿಂದೂಹಿತಕಾರಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಹಿಂದೂಗಳ ಹಿತಾಸಕ್ತಿ ಸಾಧಿಸಲಿ ಎಂಬ ಅಶಾಭಾವನೆ ಇಡೋಣ

ದೇವಸ್ಥಾನಗಳ ಭೂಮಿಯ ಮೇಲೆ ಹಿಂದಿನ ಸರಕಾರದ ವಕ್ರದೃಷ್ಟಿ !

ಅಂದಿನ ಬಿಜು ಜನತಾ ದಳ ಸರಕಾರ ದೇವಸ್ಥಾನದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪಾರದರ್ಶಕವಾಗಿರಲಿಲ್ಲ. ಜಗತ್ಪ್ರಸಿದ್ದ ಜಗನ್ನಾಥನ ರಥಯಾತ್ರೆಯನ್ನು ನಿಲ್ಲಿಸಲು ಈ ಸರಕಾರವು ಸಂಚು ರೂಪಿಸಿತ್ತು. ಅಲ್ಲಿರುವ ಅನೇಕ ಮಠಗಳು ನಾಶವಾದವು; ಆದರೆ ಯಾರೂ ಇದರ ವಿರುದ್ಧ ಧ್ವನಿ ಎತ್ತಲಿಲ್ಲ. ಹಾಗಾಗಿ ಪ್ರತಿ ಬಾರಿಯೂ ಧರ್ಮನಿಷ್ಠ ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲಾಯಿತು. ಜಗನ್ನಾಥ ದೇಗುಲದ ಸ್ಥಳದ ಭೂಮಿ ಪವಿತ್ರವಾಗಿದ್ದರೂ, ಧಾರ್ಮಿಕ ಕ್ಷೇತ್ರವನ್ನು ವಾಣಿಜ್ಯೀಕರಣಗೊಳಿಸುವ ಬೃಹತ್ ಪ್ರಯತ್ನ ನಡೆದಿದೆ. ಅಂದಿನ ಸರಕಾರವು ೨೦೨೧ ರಲ್ಲಿ, ಒಡಿಶಾ ಮತ್ತು ಇತರ ೬ ರಾಜ್ಯಗಳಲ್ಲಿರುವ ಶ್ರೀ ಜಗನ್ನಾಥ ದೇವಾಲಯದ ಒಟ್ಟು ೩೫,೨೭೨ ಎಕರೆ ಭೂಮಿಯನ್ನು ಮಾರಾಟ ಮಾಡುವ ಧರ್ಮದ್ರೋಹಿ ನಿರ್ಧಾರ ವನ್ನು ತೆಗೆದುಕೊಂಡಿತು. ಇದೀಗ ಹಿಂದೂಹಿತ ಬಯಸುವ ಸರಕಾರ ಅಧಿಕಾರಕ್ಕೆ ಬಂದಿದ್ದು, ಜಗನ್ನಾಥ ಪುರಿ ದೇಗುಲಕ್ಕೆ ಸಂಬಂಧಿಸಿದಂತೆ ಸರಕಾರ ಮೊದಲ ನಿರ್ಧಾರ ಕೈಗೊಂಡಿದೆ. ಇದರಿಂದ ಹಿಂದೂಗಳಿಗೆ ‘ದೇವಸ್ಥಾನಕ್ಕೆ ಸಂಬಂಧಿಸಿದಂತೆ ಇದುವರೆಗೆ ನಡೆದಿರುವ ಅಶುಭ ಘಟನೆಗಳು ಮರುಕಳಿಸುವುದಿಲ್ಲ’ ಎಂದು ಅನಿಸುತ್ತದೆ. ಈಗಿರುವ ಸರಕಾರವೂ ದೇವಸ್ಥಾನದ ಮೂಲಕ ಅಧರ್ಮ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕು.

ಪ್ರತಿಬಾರಿ ಹಿಂದೂ ದೇವಾಲಯದ ವಿಷಯಗಳಿಗೆ ಸಂಬಂಧಿಸಿ ದಂತೆ ಇಂತಹ ಹಸ್ತಕ್ಷೇಪ ನಡೆಯುತ್ತದೆ. ಯಾವುದೇ ಸರ್ಕಾರವು ಇತರ ಧರ್ಮಗಳ ಧಾರ್ಮಿಕ ಸ್ಥಳಗಳ ಭೂಮಿಯಲ್ಲೂ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ. ಇದಕ್ಕೆ ಕಾರಣ ಹಿಂದೂಗಳ ಅತಿಯಾದ ಸಹಿಷ್ಣು ನಿಲುವು ಮತ್ತು ಅಸಂಘಟಿತತೆ ! ಯಾವುದೇ ಸರಕಾರವು ದೇವಾಲಯಗಳ ಭೂಮಿಯನ್ನು ಮಾರುವ ಆಲೋಚನೆ ಮಾಡಬಾರದು ಎಂಬಂತಹ ಭಯವನ್ನು ಹಿಂದೂಗಳು ಹುಟ್ಟುಹಾಕಬೇಕು. ಅಂದಾಗ ಮಾತ್ರ ಎಲ್ಲಾ ದೇವಾಲಯಗಳು ಉಳಿಯುತ್ತವೆ.