ಬಿಹಾರ: ಶೇಕಡಾ 65ರಷ್ಟು ಮೀಸಲಾತಿಯ ನಿರ್ಧಾರವನ್ನು ರದ್ದುಗೊಳಿಸಿದ ಪಾಟ್ನಾ ಉಚ್ಚ ನ್ಯಾಯಾಲಯ

ಪಾಟಲೀಪುತ್ರ (ಬಿಹಾರ) – ಮೀಸಲಾತಿ ಮಿತಿಯನ್ನು ಹೆಚ್ಚಿಸುವ ಬಿಹಾರ ಸರ್ಕಾರದ ನಿರ್ಧಾರವನ್ನು ಪಾಟ್ನಾ ಉಚ್ಚನ್ಯಾಯಾಲಯವು ರದ್ದುಗೊಳಿಸಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನು ಶೇ.50 ರಿಂದ ಶೇ.65ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿತ್ತು. ಇದನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮಾರ್ಚ್ 11ರಂದು ತೀರ್ಪನ್ನು ಕಾಯ್ದಿರಿಸಿತ್ತು.

ಬಿಹಾರ ಸರ್ಕಾರವು 9 ನವೆಂಬರ್ 2023 ರಂದು ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸುವ ಮೂಲಕ ಮೀಸಲಾತಿಯನ್ನು ಶೇಕಡಾವಾರು ಹೆಚ್ಚಿಸಿತ್ತು. ಇದನ್ನು ವಿರೋಧಿಸಿ ಅರ್ಜಿದಾರರು ಮಂಡಿಸಿದ ಯುಕ್ತಿವಾದವೆಂದರೆ, ಬಿಹಾರ ಸರ್ಕಾರದ ನಿರ್ಧಾರವು ಸಂವಿಧಾನದ 16 (1) ಮತ್ತು 15 (1) ನೇ ವಿಧಿಯ ಉಲ್ಲಂಘನೆಯಾಗಿದೆ. ಜನಸಂಖ್ಯೆಗಿಂತ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಆಧರಿಸಿ ಮೀಸಲಾತಿ ಇರಬೇಕು ಎಂಬ ಬೇಡಿಕೆಯನ್ನು ಈ ವಾದದಲ್ಲಿ ಮಂಡಿಸಲಾಗಿತ್ತು.