ಮೆಕ್ಕಾ (ಸೌದಿ ಅರೇಬಿಯಾ)ದಲ್ಲಿ ಬಿಸಿಗಾಳಿಗೆ 550 ಹಜ್ ಯಾತ್ರಿಕರ ಸಾವು

2 ಸಾವಿರ ಯಾತ್ರಿಕರು ಆಸ್ಪತ್ರೆಗೆ ದಾಖಲು

ರಿಯಾದ (ಸೌದಿ ಅರೇಬಿಯಾ) – ಗಲ್ಫ್ ರಾಷ್ಟ್ರಗಳು ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಬಿಸಿಗಾಳಿ ಹರಡಿದ್ದು, ಇದರ ಪರಿಣಾಮ ಸೌದಿ ಅರೇಬಿಯಾದ ಮೆಕ್ಕಾ ಹಜ್ ಯಾತ್ರೆಯ ಮೇಲೆಯೂ ಬೀರಿದೆ. ಇಲ್ಲಿ ಒಟ್ಟು 550 ಹಜ್ ಯಾತ್ರಿಕರು ಬಿಸಿಗಾಳಿಗೆ ಬಲಿಯಾಗಿದ್ದರೆ, 2 ಸಾವಿರಕ್ಕೂ ಹೆಚ್ಚು ಯಾತ್ರಿಕರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಮರಣ ಹೊಂದಿದ 550 ಜನರಲ್ಲಿ 323 ಈಜಿಪ್ಟ್ ನಾಗರಿಕರು ಸೇರಿದ್ದಾರೆ.

1. ಸೌದಿ ಅರೇಬಿಯಾದ ಹವಾಮಾನ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಹವಾಮಾನ ಬದಲಾವಣೆಯು ಅಲ್ಲಿನ ಪರಿಸರದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ. ಅಲ್ಲಿ ಸರಾಸರಿ ತಾಪಮಾನವು 0.4 ಡಿಗ್ರಿಗಳಷ್ಟು ಹೆಚ್ಚಾಗುತ್ತಿದೆ. ಜೂನ್ 17 ರಂದು, ಮೆಕ್ಕಾದ ಗ್ರ್ಯಾಂಡ್ ಮಸೀದಿಯ ಪ್ರದೇಶದಲ್ಲಿ 51.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

2. ಯಾತ್ರಿಕರಿಗೆ ಬಿಸಿಲಿನ ತಾಪದ ತೊಂದರೆ ಕಡಿಮೆಯಾಗಬೇಕೆಂದು ಅಲ್ಲಿನ ಸ್ವಯಂಸೇವಕರು ಜನರಿಗೆ ನೀರು, ತಂಪು ಪಾನೀಯಗಳು, ಐಸ್ ಕ್ರೀಮ್ ಇತ್ಯಾದಿಗಳನ್ನು ವಿತರಿಸಿದರು. ಹಜ್ ಆಡಳಿತ ಸಮಿತಿಯು ಯಾತ್ರಾರ್ಥಿಗಳಿಗೆ ಕೊಡೆಗಳನ್ನು ಬಳಸುವಂತೆ ಸೂಚನೆ ನೀಡಿದೆ, ಹಾಗೆಯೇ `ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಿರಿ, ಮಧ್ಯಾಹ್ನದ ಸಮಯದಲ್ಲಿ ಹೊರಗೆ ಹೋಗಬೇಡಿ’ ಎಂಬ ಸೂಚನೆಯನ್ನು ಕೂಡ ನೀಡಿದೆ.