ಇಂಫಾಲ್ – ಮಣಿಪುರದ ಕಾಂಗಪೋಕಪಿ ಜಿಲ್ಲೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ಸಿಗೆ ಭಯೋತ್ಪಾದಕರು ಬೆಂಕಿ ಹಚ್ಚಿದ್ದಾರೆ. ಅಗ್ನಿಶಾಮಕ ತಂಡವು ತಕ್ಷಣವೇ ಬೆಂಕಿಯನ್ನು ಆರಿಸಿದರೆಂದು ಪೊಲೀಸರು ತಿಳಿಸಿದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಈ ಪ್ರಕರಣದಲ್ಲಿ ಕಾಂಗಪೊಕಪಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಭಯೋತ್ಪಾದಕರ ವಿರುದ್ಧ ಪ್ರಕರಣ ದಾಖಲಾಗಿದೆ. ಕುಕಿ ಭಯೋತ್ಪಾದಕರ ಪ್ರಾಬಲ್ಯವಿರುವ ಈ ಜಿಲ್ಲೆಯಲ್ಲಿ ಕೆಲವು ಶಂಕಿತರ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೈನಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ಸನ್ನು ಬಾಡಿಗೆಗೆ ಪಡೆಯಲಾಗಿತ್ತು. ಆ ಬಸ್ಸು ಮೈತೇಯಿ ಸಮುದಾಯದ ಓರ್ವ ವ್ಯಕ್ತಿಯ ಹೆಸರಿನಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವಾರ ವಿಷ್ಣುಪುರ ಜಿಲ್ಲೆಯಲ್ಲಿ ಎರಡು ಟ್ರಕ್ ಗಳಿಗೆ ಬೆಂಕಿ ಹಚ್ಚಲಾಗಿತ್ತು.
ಮಣಿಪೂರದಲ್ಲಿ ಹಿಂಸಾಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಲಾಗುವುದು ! – ಗೃಹಮಂತ್ರಿ ಅಮಿತ ಶಾ
ಮಣಿಪುರದಲ್ಲಿನ ಹಿಂಸಾಚಾರ ಮತ್ತು ಭದ್ರತಾ ವ್ಯವಸ್ಥೆಗಳ ಕುರಿತು ಗೃಹ ಸಚಿವ ಅಮಿತ್ ಶಾ ಜೂನ್ 17 ರಂದು ದೆಹಲಿಯಲ್ಲಿ ಸಭೆ ನಡೆಸಿದರು. ‘ಗೃಹ ಸಚಿವಾಲಯವು ಮೈತೇಯಿ ಮತ್ತು ಕುಕಿ ಈ ಎರಡೂ ಸಮುದಾಯಗಳೊಂದಿಗೆ ಚರ್ಚಿಸುವುದು’ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಗೃಹ ಸಚಿವ ಶಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ವಿನೀತ್ ಜೋಶಿ ಅವರಿಗೆ ಸ್ಥಳಾಂತರಗೊಂಡ ಜನರಿಗೆ ಸೂಕ್ತ ಆರೋಗ್ಯ, ಶಿಕ್ಷಣ ಇತ್ಯಾದಿ ಸೌಲಭ್ಯಗಳನ್ನು ಒದಗಿಸುವ ಮೂಲಕ ಪುನರ್ವಸತಿಯನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದರು. ಗೃಹ ಸಚಿವಾಲಯ ಪ್ರಸಾರ ಮಾಡಿರುವ ತನ್ನ ಮನವಿಯಲ್ಲಿ ಮಣಿಪುರದಲ್ಲಿ ಶಾಂತಿ ಮತ್ತು ಸೌಹಾರ್ದತೆ ಸ್ಥಾಪಿಸಲು ಸೇನೆಯನ್ನು ನಿಯೋಜಿಸಲಾಗುವುದು. ಹಾಗೆಯೇ ಮಣಿಪುರದಲ್ಲಿ ಹಿಂಸಾಚಾರ ಹರಡುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ರಾಜ್ಯಪಾಲರಾದ ಅನುಸುಯಿಯಾ ಉಕೆ ಅವರು ರು ಗೃಹ ಸಚಿವರನ್ನು ಭೇಟಿ ಮಾಡಿದ ಬಳಿಕ ಮಣಿಪುರದ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆಯನ್ನು ಆಯೋಜಿಸಲಾಯಿತು. ಈ ಸಭೆಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಗುಪ್ತಚರ ಇಲಾಖೆ ಮುಖ್ಯಸ್ಥ ತಪನ ಡೆಕಾ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಮಣಿಪುರ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್, ಮುಖ್ಯ ಕಾರ್ಯದರ್ಶಿ ವಿನೀತ್ ಜೋಶಿ, ಮಣಿಪುರ ಪೊಲೀಸ್ ಮಹಾನಿರ್ದೇಶಕ ರಾಜೀವ ಸಿಂಗ ಮತ್ತು ಅಸ್ಸಾಂ ರೈಫಲ್ಸ್ ಮಹಾನಿರ್ದೇಶಕ ಪ್ರದೀಪ ಚಂದ್ರನ ನಾಯರ ಉಪಸ್ಥಿತರಿದ್ದರು.