ಮುಂಬಯಿ, ಜೂನ್ 10 (ಸುದ್ದಿ.) – ಸೈಬರ್ ಅಪರಾಧಗಳನ್ನು ತಡೆಯುವುದಕ್ಕಾಗಿ ಮಹಾರಾಷ್ಟ್ರದಲ್ಲಿ 837 ಕೋಟಿ 86 ಲಕ್ಷ ರೂಪಾಯಿಗಳ ಮಹತ್ವಾಕಾಂಕ್ಷೆಯ ‘ಸೈಬರ್ ಸುರಕ್ಷಾ’ ಯೋಜನೆ ಕಾರ್ಯಗತ ಆಗಲಿದೆ. ಇದರಲ್ಲಿ ಸಾಮಗ್ರಿಗಳ ಖರೀದಿಗೆ ‘ಎಲ್ ಅಂಡ್ ಟಿ ಟೆಕ್ನಾಲಜಿ ಸರ್ವೀಸ್ ಪ್ರೈವೇಟ್ ಲಿಮಿಟೆಡ್’ ಮತ್ತು ‘ಕೆಪಿಎಂಜಿ ಇಂಡಿಯಾ ಎಲ್. ಎಲ್. ಪಿ.’ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ 24 ಕೋಟಿ 53 ಲಕ್ಷ 20 ರೂಪಾಯಿಗಳ ಮೊತ್ತವನ್ನು ನೀಡಲಾಗಿದೆ.
ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆ ಅಪರಾಧಗಳ ವಿರುದ್ಧ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಗೃಹ ಇಲಾಖೆಯ ವಿವಿಧ ತಂತ್ರಜ್ಞಾನ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಈ ಸೈಬರ್ ಭದ್ರತಾ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಈ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರು ಈ ಹಿಂದೆ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದರು. ಈ ಯೋಜನೆಯ ಅಂದಾಜು ವೆಚ್ಚ 5 ವರ್ಷ 5 ತಿಂಗಳಿಗೆ 837 ಕೋಟಿ 86 ಲಕ್ಷಗಳಿದ್ದು, ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಮುಂಬಯಿನ ವಿಶೇಷ ಪೊಲೀಸ್ ಮಹಾನಿರೀಕ್ಷಕರು ಈ ಯೋಜನೆಯನ್ನು ಕಾರ್ಯಗತಗೊಳಿಸಲಿದ್ದಾರೆ.