Modi Kanyakumari Meditation : ಧ್ಯಾನಕ್ಕಾಗಿ ಕನ್ಯಾಕುಮಾರಿಗೆ ತೆರಳಲಿರುವ ಪ್ರಧಾನಿ ಮೋದಿ !

ನವ ದೆಹಲಿ : ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನದ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಕನ್ಯಾಕುಮಾರಿಗೆ ಭೇಟಿ ನೀಡಲಿದ್ದಾರೆ. ಅವರು ಅಲ್ಲಿನ ‘ವಿವೇಕಾನಂದ ರಾಕ್ ಸ್ಮಾರಕ’ದಲ್ಲಿ 2 ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ. ಇದೇ ಸ್ಥಳದಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ್ದರು.

ಲೋಕಸಭೆ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದಲ್ಲಿ ಜೂನ್ 1 ರಂದು 57 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಸ್ಥಾನಗಳಲ್ಲಿ ಚುನಾವಣಾ ಪ್ರಚಾರವು ಮೇ 30ರಂದು ಸಾಯಂಕಾಲ 5 ಗಂಟೆಗೆ ಮುಕ್ತಾಯವಾಗಲಿದೆ. ಮೋದಿಯವರು ಮೇ 30 ರಂದು ಸಾಯಂಕಾಲ ಕನ್ಯಾಕುಮಾರಿಗೆ ತಲುಪಲಿದ್ದಾರೆ. ಅವರು ‘ವಿವೇಕಾನಂದ ರಾಕ್ ಮೆಮೋರಿಯಲ್’ನಲ್ಲಿ ಮಾರ್ಚ್ 30 ರ ರಾತ್ರಿಯಿಂದ ಜೂನ್ 1 ರ ಸಂಜೆಯವರೆಗೆ ಧ್ಯಾನ ಮಾಡಲಿದ್ದಾರೆ.

1. ‘ವಿವೇಕಾನಂದ ರಾಕ’ ಇದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಸಮುದ್ರ ತೀರದ ಸ್ಮಾರಕವಾಗಿದೆ. ಇದೊಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಸಮುದ್ರ ತೀರದಿಂದ ಸರಿಸುಮಾರು 500 ಮೀಟರ್ ದೂರದಲ್ಲಿ ಸಮುದ್ರದಲ್ಲಿ ಎರಡು ಕಲ್ಲುಬಂಡೆಗಳ ಮೇಲೆ ಈ ಸ್ಮಾರಕವನ್ನು ಕಟ್ಟಲಾಗಿದೆ.

2. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಏಕನಾಥ ರಾನಡೆ ಅವರು ಬಂಡೆಯ ಮೇಲೆ ವಿವೇಕಾನಂದ ಸ್ಮಾರಕ ಮಂದಿರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

3. ಈ ಸ್ಮಾರಕವನ್ನು 2 ಸೆಪ್ಟೆಂಬರ್ 1970 ರಂದು ಅಂದಿನ ಭಾರತದ ರಾಷ್ಟ್ರಪತಿ ಡಾ. ವಿ.ವಿ.ಗಿರಿ ಉದ್ಘಾಟಿಸಿದ್ದರು.

4. ಏಪ್ರಿಲ್‌ನಲ್ಲಿ ಬರುವ ಚೈತ್ರ ಪೂರ್ಣಿಮೆಗೆ ಇಲ್ಲಿ ಚಂದ್ರ ಮತ್ತು ಸೂರ್ಯ ಇಬ್ಬರೂ ಒಂದೇ ದಿಗಂತದಲ್ಲಿ ಎದುರುಬದುರು ಕಾಣಿಸುತ್ತದೆ.

5. 1893 ರಲ್ಲಿ ಜಾಗತಿಕ ಧರ್ಮ ಪರಿಷತ್ತಿನಲ್ಲಿ ಪಾಲ್ಗೊಳ್ಳುವ ಮೊದಲು, ಸ್ವಾಮಿ ವಿವೇಕಾನಂದರು ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡಿದ್ದರು. ಅಲ್ಲಿ ಸಮುದ್ರದಿಂದ 500 ಮೀಟರ್ ದೂರದಲ್ಲಿ ನೀರಿನ ಮಧ್ಯದಲ್ಲಿ ಒಂದು ದೊಡ್ಡ ಬಂಡೆಯನ್ನು ಕಂಡು, ಅಲ್ಲಿಗೆ ಈಜುತ್ತಾ ಹೋದರು ಮತ್ತು ಅಲ್ಲಿ ಆ ಬಂಡೆಯ ಮೇಲೆ ಕುಳಿತು ಅವರು ಧ್ಯಾನ ಮಾಡಿದ್ದರು.

2019ನೇ ವರ್ಷದಲ್ಲಿಯೂ ಕೇದಾರನಾಥಕ್ಕೆ ಹೋಗಿ ಧ್ಯಾನ ಮಾಡಿದ್ದರು !

2019ರ ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನಕ್ಕೂ ಮುನ್ನ ಪ್ರಧಾನಿ ಮೋದಿ ಕೇದಾರನಾಥಕ್ಕೆ ತೆರಳಿದ್ದರು. ಅಲ್ಲಿ ಅವರು 17 ಗಂಟೆಗಳ ಕಾಲ ರುದ್ರ ಗುಹೆಯಲ್ಲಿ ಧ್ಯಾನ ಮಾಡಿದ್ದರು.