Ranjit Singh Murder Case : ‘ಡೇರಾ ಸಚ್ಚಾ ಸೌದಾ’ ಸಂಪ್ರದಾಯದ ಹತ್ಯೆ ಪ್ರಕರಣದಲ್ಲಿ ಮುಖ್ಯಸ್ಥರು ನಿರ್ದೋಷಿ!

  • ಉಚ್ಚ ನ್ಯಾಯಾಲಯದಿಂದ ಸಿಬಿಐ ನ್ಯಾಯಾಲಯದ ತೀರ್ಪು ರದ್ದು.

  • ಮತ್ತೊಂದು ಕೊಲೆ ಪ್ರಕರಣದಲ್ಲಿ, ಮುಖ್ಯಸ್ಥ ಬಾಬಾ ಗುರ್ಮೀತ್ ರಾಮ್ ರಹೀಮ್ ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

‘ಡೇರಾ ಸಚ್ಚಾ ಸೌದಾ’ ಸಂಪ್ರದಾಯದ ಮುಖ್ಯಸ್ಥ ಬಾಬಾ ಗುರ್ಮೀತ್ ರಾಮ್ ರಹೀಮ್

ಚಂಡೀಗಢ್ (ಹರಿಯಾಣ) – ಹರಿಯಾಣಾದ ‘ಡೇರಾ ಸಚ್ಚಾ ಸೌದಾ’ ಸಂಪ್ರದಾಯದ ಮುಖ್ಯಸ್ಥ ಬಾಬಾ ಗುರ್ಮೀತ್ ರಾಮ್ ರಹೀಮ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯವು ಒಂದು ಕೊಲೆ ಪ್ರಕರಣದಲ್ಲಿ ದೋಷಮುಕ್ತಗೊಳಿಸಿದೆ. 22 ವರ್ಷಗಳ ಹಿಂದೆ ಸಂಪ್ರದಾಯದ ಮಾಜಿ ವ್ಯವಸ್ಥಾಪಕ ರಣಜೀತರ ಹತ್ಯೆಯ ಪ್ರಕರಣದಲ್ಲಿ ಒಟ್ಟು ಐವರನ್ನು ನಿರಪರಾಧಿಗಳೆಂದು ಉಚ್ಚನ್ಯಾಯಾಲಯವು ಘೋಷಿಸಿದೆ. ಇದರಿಂದ ಉಚ್ಚ ನ್ಯಾಯಾಲಯವು ಸಿಬಿಐ ನ್ಯಾಯಾಲಯದ ನಿರ್ಣಯವನ್ನು ರದ್ದುಗೊಳಿಸಿದೆ.

ಯಾವ ಪ್ರಕರಣ ?

ಜುಲೈ 10, 2002 ರಂದು, ಕುರುಕ್ಷೇತ್ರದ ನಿವಾಸಿ ರಣಜೀತ್ ಸಿಂಗನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹರಿಯಾಣದ ಸಿರಸಾದಲ್ಲಿ ಸಂಪ್ರದಾಯದ ಪ್ರಧಾನ ಕಚೇರಿಯಲ್ಲಿ ಬಾಬಾ ಗುರ್ಮೀತ್ ರಾಮ್ ರಹೀಮ್ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಮಾಹಿತಿಯುಳ್ಳ ಮಾನಹಾನಿಕರ ಪತ್ರಗಳನ್ನು ರಣಜಿತ್ ಸಿಂಗ್ ಎಲ್ಲೆಡೆ ಹಂಚುತ್ತಿದ್ದನು ಎಂದು ಸಂಪ್ರದಾಯದ ಆಡಳಿತಕ್ಕೆ ಅನುಮಾನವಿತ್ತು. ಅದಕ್ಕಾಗಿಯೇ ಅವನನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. 2003ರ ಜನವರಿಯಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಅಕ್ಟೋಬರ್‌ 2021 ರಲ್ಲಿ ಐದು ಜನರು ತಪ್ಪಿತಸ್ಥರೆಂದು ಸಾಬೀತಾಗಿತ್ತು. ಈಗ ಉಚ್ಚ ನ್ಯಾಯಾಲಯವು ಎಲ್ಲ 5 ಆರೋಪಿಗಳನ್ನು ನಿರಪರಾಧಿಗಳೆಂದು ಘೋಷಿಸಿದೆ.

ಈ ಪತ್ರವನ್ನು ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಕಳುಹಿಸಲಾಗಿತ್ತು. ಇದಾದ ನಂತರ ಸಿರಸಾ ಪತ್ರಕರ್ತ ರಾಮಚಂದ್ರ ಛತ್ರಪತಿಯವರು ತಮ್ಮ ಸುದ್ದಿಪತ್ರಿಕೆಯಲ್ಲಿ ಆ ಪತ್ರವನ್ನು ಪ್ರಕಟಿಸಿದರು. ಇದರಿಂದ ನವೆಂಬರ್ 21, 2002ರಂದು ಪತ್ರಕರ್ತ ಛತ್ರಪತಿಯವರನ್ನು ಹತ್ಯೆ ಮಾಡಲಾಗಿತ್ತು. ಛತ್ರಪತಿಯ ಹತ್ಯೆಯ ಪ್ರಕರಣದಲ್ಲಿ ರಾಮ್ ರಹೀಮ್ ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.