ಬೆಂಗಳೂರು – ‘ಪೌರತ್ವ ತಿದ್ದುಪಡಿ ಕಾಯ್ದೆ’ (‘ಸಿಎಎ’) ಅಡಿಯಲ್ಲಿ ರಾಜ್ಯದಿಂದ ಒಟ್ಟು 145 ಜನರು ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ರಾಯಚೂರಿನಿಂದ 143 ಮತ್ತು ದಕ್ಷಿಣ ಕನ್ನಡದಿಂದ 2 ಅರ್ಜಿಗಳು ಬಂದಿವೆ. ಅವರಲ್ಲಿ ಹೆಚ್ಚಿನವರು ಪಾಕಿಸ್ತಾನದಿಂದ ಬಂದ ಹಿಂದೂಗಳಿದ್ದಾರೆ. ಡಿಸೆಂಬರ್ 31, 2014 ಕ್ಕಿಂತ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದಿರುವ ಹಿಂದೂಗಳು, ಸಿಖ್ಖರು, ಕ್ರೈಸ್ತರು, ಜೈನರು ಮತ್ತು ಪಾರ್ಸಿಗಳಿಗೆ ‘ಸಿಎಎ’ ಅಡಿಯಲ್ಲಿ ಭಾರತೀಯ ಪೌರತ್ವವನ್ನು ನೀಡಲಾಗುತ್ತಿದೆ.
ಭಾರತೀಯ ಪೌರತ್ವ ತಿದ್ದುಪಡಿ ಕಾಯ್ದೆ ಮಾರ್ಚ್11, 2024 ರಿಂದ ಜಾರಿಗೆ ಬಂದ ನಂತರ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಅಂಚೆ ಮತ್ತು ರೈಲ್ವೆ ಸಿಬ್ಬಂದಿಯವರಿಗೆ ಪ್ರಮಾಣಪತ್ರಗಳನ್ನು ಪರಿಶೀಲಿಸುವ ಮತ್ತು ವಿತರಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ‘ಸಿಎಎ’ ಕಾನೂನಿನ ಅಡಿಯಲ್ಲಿ ದೇಶದಾದ್ಯಂತ ಅಂದಾಜು 12 ಸಾವಿರ ಜನರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು ಇದುವರೆಗೆ 300 ಜನರಿಗೆ ಭಾರತೀಯ ಪೌರತ್ವ ನೀಡಲಾಗಿದೆ.