ಇರಾನ್ ರಾಷ್ಟ್ರಪತಿ ರೈಸಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತ್ಯು

ವಿದೇಶಾಂಗ ಸಚಿವರ ಸಹಿತ ಒಟ್ಟು ೯ ಜನರ ಮೃತ್ಯು

ತೆಹರನ್ (ಇರಾನ್) – ಇರಾನಿನ ರಾಷ್ಟ್ರಪತಿ ಇಬ್ರಾಹಿಂ ರೈಸಿ ಅವರು ಮೇ ೧೯ ರಂದು ಅಜರಬೈಜಾನ್ ದೇಶದ ಗಡಿಯಲ್ಲಿ ಹತ್ತಿರ ಹೆಲಿಕಾಪ್ಟರ್ ಪತನಗೊಂಡು ಸಾವನ್ನಪ್ಪಿದ್ದಾರೆ. ಅವರ ಜೊತೆಗೆ ವಿದೇಶಾಂಗ ಸಚಿವರ ಸಹಿತ ಒಟ್ಟು ೯ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರೈಸಿ ಅವರ ಜೊತೆ ೩ ಹೆಲಿಕಾಪ್ಟರ್ ಗಳು ಇದ್ದವು. ಅದರಲ್ಲಿನ ೨ ಹೆಲಿಕಾಪ್ಟರ್ ನಿಗದಿತ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿವೆ; ಆದರೆ ಒಂದು ಪತನಗೊಂಡಿದೆ. ರೈಸಿ ಅಜರಬೈಜಾನ್ ದ ರಾಷ್ಟ್ರಾಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರ ಜೊತೆಗೆ ಆಣೆಕಟ್ಟಿನ ಉದ್ಘಾಟನೆಗಾಗಿ ಅಜರಬೈಜಾನಿನ ಗಡಿಯ ಹತ್ತಿರದ ನಗರಕ್ಕೆ ಹೋಗಿದ್ದರು.

ಮೇ ೧೯ ರಂದು ಸಂಜೆ ಹೆಲಿಕಾಪ್ಟರ್ ಅನಿರೀಕ್ಷಿತವಾಗಿ ಕಣ್ಮರೆ ಆಗಿರುವುದರಿಂದ ಅದರ ಶೋಧ ನಡೆಸಲು ಡ್ರೋನ್ ಸಹಾಯ ಪಡೆಯಲಾಯಿತು. ಶೋಧದಲ್ಲಿ ಹೆಲಿಕಾಪ್ಟರ್ ಕಾಡಿನಲ್ಲಿ ಪತನಗೊಂಡಿರುವುದು ಕಂಡು ಬಂದಿದೆ. ಈ ದುರ್ಘಟನೆ ಬಳಿಕ ಸಹಾಯ ಕಾರ್ಯ ಆರಂಭಿಸಲಾಯಿತು. ತಜ್ಞರ ಅಭಿಪ್ರಾಯದ ಪ್ರಕಾರ, ರೈಸಿ ಅವರ ಹೆಲಿಕಾಪ್ಟರ್ ಅನಿರೀಕ್ಷಿತವಾಗಿ ಮಂಜಿನಲ್ಲಿ ಸಿಲುಕಿರುವುದರಿಂದ ಈ ಅಪಘಾತ ನಡೆದಿದೆ.

ಇರಾನಿನ ಉಪ ರಾಷ್ಟ್ರಪತಿ ಮಹಮ್ಮದ್ ಮೊಖಬರ್ ಅವರಿಗೆ ಹಂಗಾಮಿ ರಾಷ್ಟ್ರಪತಿ ಸ್ಥಾನ

ಉಪ ರಾಷ್ಟ್ರಪತಿ ಮಹಮ್ಮದ್ ಮೊಖಬರ್

ರೈಸಿ ಅವರು ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಇರಾನಿನ ಉಪರಾಷ್ಟ್ರಪತಿ ಮಹಮ್ಮದ್ ಮೋಖಬರ (ವಯಸ್ಸು ೬೮ ವರ್ಷ ) ಅವರಿಗೆ ಈಗ ಹಂಗಾಮಿ ರಾಷ್ಟ್ರಪತಿ ಸ್ಥಾನ ಒಪ್ಪಿಸಲಾಗುವುದು. ಹಂಗಾಮಿ ರಾಷ್ಟ್ರಪತಿ ಎಂದು ಮೋಖಬರ್ ಸದ್ಯ ೩ ಸದಸ್ಯರ ಸಮಿತಿಯಲ್ಲಿ ಸಮಾವೇಶಗೊಳ್ಳುವರು. ಸಂಸತ್ತಿನ ಅಧ್ಯಕ್ಷ ಮತ್ತು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿರುವ ಈ ಸಮಿತಿಯು ಮುಂದಿನ ೫೦ ದಿನದ ಒಳಗೆ ಹೊಸ ರಾಷ್ಟ್ರಪತಿ ಸ್ಥಾನಕ್ಕಾಗಿ ಚುನಾವಣೆ ಘೋಷಣೆ ಮಾಡುವರು.

ಷಡ್ಯಂತ್ರದ ಅನುಮಾನ

ಹೆಲಿಕಾಪ್ಟರ್ ನ ಅಪಘಾತದ ಹಿಂದೆ ಷಡ್ಯಂತ್ರದ ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ಇಸ್ರೇಲ್ ಮತ್ತು ಅಮೇರಿಕ ಇವರ ಜೊತೆಗಿನ ಇರಾನಿನ ಶತ್ರುತ್ವದಿಂದ ಈ ಎರಡು ದೇಶಗಳು ರೈಸಿ ಅವರನ್ನು ತಮ್ಮ ದಾರಿಯಿಂದ ತೆಗೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಅಪಘಾತವು ಷಡ್ಯಂತ್ರವೆಂದು ಇನ್ನೂ ಸ್ಪಷ್ಟವಾಗಿಲ್ಲ. ಇಸ್ರೇಲ್ ಕೂಡ ಅದರ ಗುಪ್ತಚರ ಸಂಸ್ಥೆ ಮೊಸಾದ್ ದ ಕೈವಾಡದ ಕುರಿತಾದ ದಾವೆಯನ್ನು ತಳ್ಳಿ ಹಾಕಿದೆ.

ಮಹಸಾ ಆಮಿನಿ ಆಕೆಯ ನಗರದಲ್ಲಿ ಪಟಾಕಿ ಸಿಡಿಸಿ ಸಂಭ್ರಮ !

ರಾಷ್ಟ್ರಪತಿ ಇಬ್ರಾಹಿಂ ರೈಸಿ ಅವರ ಮೃತ್ಯುವಿನ ನಂತರ ಎಲ್ಲಕ್ಕಿಂತ ಹೆಚ್ಚು ಇರಾನಿನ ಕುರ್ದಿಸ್ತಾನ ಪ್ರದೇಶದಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಅಲ್ಲಿನ ಸಾಕೆಜ ನಗರದಲ್ಲಿ ಜನರು ಪಟಾಕಿ ಸಿಡಿಸಿ ರೈಸಿ ಮೃತ್ಯುವಿನ ಆನಂದ ವ್ಯಕ್ತಪಡಿಸಿದರು. ಇರಾನಿನಲ್ಲಿ ಹಿಜಾಬ ವಿರುದ್ಧ ಪ್ರತಿಭಟನೆಗೆ ನೇತೃತ್ವ ವಹಿಸಿರುವ ಮಹಸಾ ಅಮೀನಿ ಎಂಬ ಮಹಿಳೆಯ ಮೂಲ ಗ್ರಾಮ ಸಾಕೆಜ ಆಗಿದೆ. ಮಹಸಾ ಅಮೀನಿ ಈಕೆ ಇರಾನಿನಲ್ಲಿ ಹಿಜಾಬದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಳು. ಹಿಜಾಬ ಧರಿಸದೆ ಹೊರಗಡೆ ಬಂದಿದ್ದಕ್ಕೆ ಪೊಲೀಸರು ಆಕೆಯನ್ನು ಬಂಧಿಸಿ ಹಿಗ್ಗಾಮುಗ್ಗ ಥಳಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಆಕೆ ಸಾವನ್ನಪ್ಪಿದ್ದಳು. ಆಕೆಯ ಸಾವಿನ ನಂತರ ಅಮೀನಿಯನ್ನು ಇರಾನಿನಲ್ಲಿ ಮಹಿಳೆಯರ ಅಧಿಕಾರಕ್ಕಾಗಿ ಹೋರಾಡುವವಳು ಎಂದು ಗುರುತಿಸುತ್ತಾರೆ. ಆಕೆಯ ಸಮರ್ಥನೆಯಲ್ಲಿ ದೇಶಾದ್ಯಂತ ಮಹಿಳೆಯರು ರಸ್ತೆಗೆ ಬಂದರು. ಕೆಲವೇ ಸಮಯದಲ್ಲಿ ಆಕೆಯ ಹೆಸರು ಜಗತ್ತಿನಾದ್ಯಂತ ಪ್ರಸಿದ್ಧವಾಯಿತು. ರೈಸಿ ವಿರುದ್ಧ ಸಾಕೆಜ ನಗರದಲ್ಲಿನ ಜನರಲ್ಲಿ ಬಹಳಷ್ಟು ಆಕ್ರೋಶವಿದ್ದು ಅವರ ಸಾವಿನ ಬಳಿಕ ಈ ರೀತಿ ವ್ಯಕ್ತವಾಯಿತು.