ಎಚ್.ಡಿ . ರೇವಣ್ಣ ಅವರ ಬಂಧನ ಹಾಗೂ ಪ್ರಜ್ವಲ್ ಅವರ ಬಂಧನ ಪೂರ್ವ ಜಾಮೀನಿನ ಅರ್ಜಿ ವಜಾ

  • ಶಾಸಕ ಎಚ್.ಡಿ. ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ಅವರ ಲೈಂಗಿಕ ಶೋಷಣೆಯ ಪ್ರಕರಣ !

  • ಅಪಹೃತ ಮಹಿಳೆ ಪತ್ತೆ !

ಬೆಂಗಳೂರು (ಕರ್ನಾಟಕ) – ರಾಜ್ಯದ ಅಸಂಖ್ಯ ಮಹಿಳೆಯರ ಲೈಂಗಿಕ ಶೋಷಣೆ ಮಾಡಿರುವ ಆರೋಪಿ ಮತ್ತು ಜನತಾದಳ (ಸಂಯುಕ್ತ)ದ ನಾಯಕ ಶಾಸಕ ಎಚ್ ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ರೇವಣ್ಣ ಅವರನ್ನು ಅವರ ತಂದೆ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮನೆಯಿಂದ ಬಂಧಿಸಲಾಯಿತು. ಎಚ್ ಡಿ ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ ರೇವಣ್ಣ ಅವರ ವಿರುದ್ಧ ಅಸಂಖ್ಯ ಮಹಿಳೆಯರ ಜೊತೆ ಲೈಂಗಿಕ ಸಂಬಂಧ ಹೊಂದಿರುವ ಮತ್ತು ಅದರ ವಿಡಿಯೋ ತಯಾರಿಸಿರುವುದರ ಆರೋಪವಿದೆ. ಪ್ರಜ್ವಲ್ ಅವರು ಬೆಂಗಳೂರಿನ ನ್ಯಾಯಾಲಯದಲ್ಲಿ ದಾಖಲಿಸಿರುವ ಬಂಧನ ಪೂರ್ವ ಜಾಮೀನಿನ ಅರ್ಜಿಯನ್ನು ತಳ್ಳಿ ಹಾಕಲಾಗಿದೆ. ಅವರು ಪ್ರಸ್ತುತ ಜರ್ಮನಿಯಲ್ಲಿ ಇರುವುದಾಗಿ ಹೇಳಲಾಗುತ್ತಿದೆ.

ಎಚ್ ಡಿ ರೇವಣ್ಣ ಅವರು ಹಾಸನದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ೬ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಪ್ರಜ್ವಲ್ ಅವರು ೨೦೧೯ ರಲ್ಲಿ ಹಾಸನದಿಂದ ಸಂಸದರಾಗಿ ಆಯ್ಕೆ ಆಗಿದ್ದು ಈ ಬಾರಿಯೂ ಕೂಡ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಅವರ ಸಹೋದರ ಎಚ್ ಡಿ. ರೇವಣ್ಣ ಕೂಡ ಸಚಿವರಾಗಿದ್ದರು.

ಇನ್ನೊಂದೆಡೆ ಈ ಪ್ರಕರಣದಲ್ಲಿ ಒಂದು ವಾರದ ಹಿಂದೆ ಅಪಹೃತಗೊಂಡ ಸಂತ್ರಸ್ತೆಯನ್ನು ಹುಣಸೂರು ತಾಲೂಕಿನ ಕಲ್ಲೇನಹಳ್ಳಿಯಿಂದ ಬಿಡುಗಡೆಗೊಳಿಸಲಾಗಿದೆ. ಸಂತ್ರಸ್ತೆಯನ್ನು ರಾಜಶೇಖರ್ ಎಂಬ ವ್ಯಕ್ತಿಯ ಫಾರಂ ಹೌಸಿನಲ್ಲಿ ಬಂಧಿಸಿಡಲಾಗಿತ್ತು. ರಾಜಶೇಖರ್ ಎಂಬವನು ರೇವಣ್ಣ ಕುಟುಂಬದ ಆತ್ಮೀಯನೆಂದು ಹೇಳಲಾಗುತ್ತದೆ.

ಸಂಪಾದಕೀಯ ನಿಲುವು

ಇಂತಹ ಪಿತಾ-ಪುತ್ರ ರಾಜಕಾರಣಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಜನರು ಆಗ್ರಹಿಸಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ.