ತೆಲಂಗಾಣ: ಮಿಷನರಿ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಕೇಸರಿ ಬಟ್ಟೆ ಧರಿಸಿ ಬರದಂತೆ ತಡೆದಿದ್ದರಿಂದ, ಶಾಲೆಯ ಮೇಲೆ ಕಲ್ಲು ತೂರಾಟ!

ಮುಖ್ಯೋಪಾಧ್ಯಾಯರ ಮೇಲೆ ದೂರು ದಾಖಲು

ಭಾಗ್ಯನಗರ (ತೆಲಂಗಾಣ) – ತೆಲಂಗಾಣ ರಾಜ್ಯದ ಮಂಚಿರಿಯಾಲ ಜಿಲ್ಲೆಯ ಕನ್ನೆಪಲ್ಲಿ ಗ್ರಾಮದಲ್ಲಿರುವ ‘ಬ್ಲೆಸ್ಡ್ ಮದರ್ ತೆರೇಸಾ ಸ್ಕೂಲ್’ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಕೇಸರಿ ಬಟ್ಟೆ ಧರಿಸಿ ಬರದಂತೆ ತಡೆದಿದ್ದರು. ಈ ವಿದ್ಯಾರ್ಥಿಗಳ ಪೋಷಕರ ದೂರಿನ ಆಧಾರದ ಮೇಲೆ, ಶಾಲೆಯ ಮುಖ್ಯೋಪಾಧ್ಯಾಯ ಜೇಸನ್ ಜೋಸೆಫ್ ಮತ್ತು ಇಬ್ಬರು ಸಿಬ್ಬಂದಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ) (ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295 (ಎ) (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

(ಸೌಜನ್ಯ – The Indian Express)

ಶಾಲೆಯ ಆಡಳಿತ ಮಂಡಳಿ ಪ್ರಕಾರ, ಏಪ್ರಿಲ್ 16 ರಂದು ಕೆಲವು ವಿದ್ಯಾರ್ಥಿಗಳು ಸಮವಸ್ತ್ರದ ಬದಲಿಗೆ ಕೇಸರಿ ಬಟ್ಟೆಗಳನ್ನು ಧರಿಸಿ ಬಂದಿದ್ದರು. ಈ ಮಕ್ಕಳು ಕೇಸರಿ ಬಟ್ಟೆ ಹಾಕಿಕೊಂಡು ಬಂದಿದ್ದಕ್ಕೆ ಮುಖ್ಯೋಪಾಧ್ಯಾಯರು ಕಾರಣ ಕೇಳಿದರು. ಮಕ್ಕಳು ಹನುಮಾನ್ ದೀಕ್ಷೆ ತೆಗೆದುಕೊಂಡಿದ್ದರಿಂದ, ಅದನ್ನು 21 ದಿನಗಳವರೆಗೆ ಆಚರಿಸಬೇಕು ಎಂದರು. ಆನಂತರ ಮುಖ್ಯೋಪಾಧ್ಯಾಯರು ಪೋಷಕರನ್ನು ಶಾಲೆಗೆ ಕರೆದುಕೊಂಡು ಬರುವಂತೆ ಹೇಳಿದರು. ಈ ಘಟನೆಯ ಮಾಹಿತಿ ತಿಳಿದ ಕೂಡಲೇ ಗುಂಪೊಂದು ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ನೆರೆದ ಜನರು ಶಾಲಾ ಆಡಳಿತ ಮಂಡಳಿಯನ್ನು ಕ್ಷಮೆಯಾಚಿಸುವಂತೆ ಆಗ್ರಹಿಸಿದರು. ಉದ್ರಿಕ್ತ ಕೆಲ ಜನರು ಮುಖ್ಯೋಪಾಧ್ಯಾಯರನ್ನು ಥಳಿಸಿ ಅವರ ಹಣೆಗೆ ತಿಲಕ ಹಚ್ಚಿದರು ಎಂದೂ ಸಹ ಹೇಳಲಾಗಿದೆ.