21 ನಿವೃತ್ತ ನ್ಯಾಯಮೂರ್ತಿಗಳಿಂದ ನ್ಯಾಯಮೂರ್ತಿಗಳಿಗೆ ಪತ್ರ !
ನವ ದೆಹಲಿ – ದೇಶದ 21 ನಿವೃತ್ತ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರಿಗೆ ಪತ್ರ ಬರೆದು `ನ್ಯಾಯ ವ್ಯವಸ್ಥೆಯ ಮೇಲೆ ಒತ್ತಡ ನಿರ್ಮಾಣ ಮಾಡಿ, ಅದನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ. 21 ನ್ಯಾಯಮೂರ್ತಿಗಳ ಪೈಕಿ 4 ಮಂದಿ ಸರ್ವೋಚ್ಚ ನ್ಯಾಯಾಲಯದವರಿದ್ದು ಮತ್ತು 17 ಮಂದಿ ರಾಜ್ಯಗಳ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಗಳು ಅಥವಾ ನಿವೃತ್ತ ನ್ಯಾಯಮೂರ್ತಿಗಳಿದ್ದಾರೆ.
ನಿವೃತ್ತ ನ್ಯಾಯಮೂರ್ತಿಗಳು ಪತ್ರದಲ್ಲಿ ಮಂಡಿಸಿರುವ ಅಂಶಗಳು
1. ಕೆಲವರು ಒತ್ತಡವನ್ನು ನಿರ್ಮಾಣ ಮಾಡಿ, ತಪ್ಪು ಮಾಹಿತಿಯನ್ನು ಹರಡುವ ಮತ್ತು ಸಾರ್ವಜನಿಕವಾಗಿ ಅವರನ್ನು ಅವಮಾನಿಸುವ ಮೂಲಕ ನ್ಯಾಯ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಜನರು ಕ್ಷುಲ್ಲಕ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ವೈಯಕ್ತಿಕ ಲಾಭಕ್ಕಾಗಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಕಡಿಮೆ ಮಾಡುತ್ತಿದ್ದಾರೆ.
2. ನಾವು ಕಾನೂನಿನ ರಕ್ಷಕರಾಗಿದ್ದೇವೆ, ನಮ್ಮ ಪ್ರಾಮಾಣಿಕತೆಯ ಮೇಲೆ ಪ್ರಶ್ನೆಗಳು ಏಳುತ್ತಿವೆ. ಕೆಲವು ವಿಮರ್ಶಕರು ನ್ಯಾಯಾಲಯ ಮತ್ತು ನ್ಯಾಯಾಧೀಶರ ಅಖಂಡತೆಯನ್ನು ಪ್ರಶ್ನಿಸುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಲು ಮೋಸದ ಮಾರ್ಗವನ್ನು ಅವಲಂಬಿಸುತ್ತಿದ್ದಾರೆ.
3. ಇಂತಹ ಕ್ರಮಗಳಿಂದ ಕೇವಲ ನಮ್ಮ ನ್ಯಾಯಾಂಗ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಅಪಮಾನವಾಗುವುದಷ್ಟೇ ಅಲ್ಲದೇ, ಯಾವುದನ್ನು ಪಾಲಿಸುವ ಬಗ್ಗೆ ಪ್ರತಿಜ್ಞೆಯನ್ನು ನ್ಯಾಯಾಧೀಶರು ತೆಗೆದುಕೊಂಡಿದ್ದರೋ, ಆ ನ್ಯಾಯ ಮತ್ತು ನಿಷ್ಪಕ್ಷತೆಯ ತತ್ವಗಳಿಗೆ ನೇರ ಸವಾಲು ನಿರ್ಮಾಣವಾಗುತ್ತದೆ. ನ್ಯಾಯವ್ಯವಸ್ಥೆಯಲ್ಲಿನ ಜನರ ವಿಶ್ವಾಸ ಕಡಿಮೆ ಆಗಬಹುದು ಎಂದು ನಮಗೆ ಚಿಂತೆ ಆಗುತ್ತಿದೆ.
4. ತಪ್ಪು ಮಾಹಿತಿಯ ಮೂಲಕ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರ ಭಾವನೆಗಳನ್ನು ಕೆರಳಿಸುವ ತಂತ್ರದ ಬಗ್ಗೆ ನಾವು ವಿಶೇಷವಾಗಿ ಚಿಂತಿತರಾಗಿದ್ದೇವೆ. ಹೀಗೆ ಮಾಡುವುದು ಅನೈತಿಕ ಮಾತ್ರವಲ್ಲ, ನಮ್ಮ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಿಗೂ ಹಾನಿಕಾರಕವಾಗಿದೆ ಎಂದು ಹೇಳಿದ್ದಾರೆ.