ಪಾಕಿಸ್ತಾನ: ಅಪರಿಚಿತರಿಂದ ಸರಬಜೀತ ಸಿಂಗ ಹತ್ಯೆ ಮಾಡಿದವನ ಕೊಲೆ!

ಸರಬಜಿತ ಸಿಂಗ್ (ಬಲಗಡೆ) ಈ ಭಾರತೀಯ ನಾಗರಿಕನ ಹತ್ಯೆ ಮಾಡಿದ ಸರ್ಫರಾಜ(ಎಡಗಡೆ)

ಲಾಹೋರ (ಪಾಕಿಸ್ತಾನ) – ಪಾಕಿಸ್ತಾನದ ಕಾರಾಗೃಹದಲ್ಲಿ ಕಥಿತ ಗೂಢಚಾರಿಕೆಯ ಪ್ರಕರಣದಲ್ಲಿ ಬಂಧನದಲ್ಲಿದ್ದ ಭಾರತೀಯ ನಾಗರಿಕ ಸರಬಜೀತ ಸಿಂಗನನ್ನು ಕಾರಾಗೃಹದಲ್ಲಿ ಹತ್ಯೆ ಮಾಡಿದ ಗೂಂಡಾ ಸರಫರಾಜನನ್ನು ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಕೋಟ ಲಖಪತ ಕಾರಾಗೃಹದಲ್ಲಿ ಬಂಧನದಲ್ಲಿದ್ದ ಸರಬಜೀತನನ್ನು ಅಮೀರ ಸರಫರಾಜ ಎಂಬವನು ಐಎಸ್ಐನ ಆದೇಶದ ಮೇರೆಗೆ ಹತ್ಯೆ ಮಾಡಿದ್ದನು. ಅಮೀರ ಕೂಡ ಇದೇ ಕಾರಾಗ್ರಹದಲ್ಲಿದ್ದನು. ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿ ಇದುವರೆಗೆ ಭಾರತ ವಿರೋಧಿ ಭಯೋತ್ಪಾದಕರು ಮತ್ತು ಗೂಂಡಾಗಳ 21 ಹತ್ಯೆಗಳು ನಡೆದಿವೆ. ಈ ಹತ್ಯೆಗಳು ಅಪರಿಚಿತರಿಂದ ನಡೆದಿವೆ.

ಸರಬಜೀತ ಸಿಂಗನಿಗೆ ಕಾರಾಗೃಹದಲ್ಲಿ ಪೀಡಿಸಲಾಗುತ್ತಿತ್ತು !

1990 ರಲ್ಲಿ, ಪಾಕಿಸ್ತಾನವು ಸರಬಜೀತನನ್ನು ಬಂಧಿಸಿತ್ತು. ಅಂದಿನಿಂದ ಅವನು ಆ ಕಾರಾಗೃಹದಲ್ಲಿದ್ದನು. ಸರಬಜೀತನ ಬಿಡುಗಡೆಗಾಗಿ ಭಾರತದಲ್ಲಿ ಅನೇಕ ಚಳುವಳಿಗಳು ನಡೆದಿದ್ದವು. ಭಾರತ ಸರಕಾರವು ಸರಬಜೀತನ ಬಿಡುಗಡೆಗಾಗಿ ಪ್ರಯತ್ನಿಸಿತ್ತು; ಆದರೆ ಪಾಕಿಸ್ತಾನವು ಬಿಡುಗಡೆ ಮಾಡಲು ನಿರಾಕರಿಸಿತ್ತು. ಕೊನೆಗೆ 2013 ರಲ್ಲಿ ಸರಬಜೀತನ ಹತ್ಯೆ ಮಾಡಲಾಯಿತು.

ಇದು ನ್ಯಾಯವಲ್ಲ- ಸರಬಜೀತರ ಪುತ್ರಿ ಸ್ವಪ್ನದೀಪ

ಸರಫರಾಜನ ಹತ್ಯೆಯ ಕುರಿತು ಸರಬಜೀತರ ಪುತ್ರಿ ಸ್ವಪ್ನದೀಪ ಮಾತನಾಡಿ, ಮೊದಲು ನನಗೆ ಸಮಾಧಾನವೆನಿಸಿತು; ಆದರೆ ನಂತರ ಇದು ನ್ಯಾಯವಲ್ಲ ಎಂದು ನನಗೆ ಅನಿಸಿತು. ನನ್ನ ತಂದೆಯವರ ಅಮಾನುಷ ಹತ್ಯೆಯ ಪ್ರಕರಣದಲ್ಲಿ 3-4 ಜನರು ಭಾಗಿಯಾಗಿದ್ದರು. ಈಗ ಅಮೀರನ ಹತ್ಯೆ ಮಾಡಿ ಈ ಸಂಚನ್ನು ಮುಚ್ಚಿಡಲು ಪ್ರಯತ್ನಿಸಲಾಗುತ್ತಿದೆ ಎಂದು ಸ್ವಪ್ನದೀಪ ಆರೋಪಿಸಿದರು.

ಕರ್ಮಾನುಸಾರ ಫಲ ಸಿಗುತ್ತದೆ- ನಟ ರಣದೀಪ ಹೂಡಾ

ಹಿಂದಿ ಭಾಷೆಯಲ್ಲಿ ಸರಬಜೀತ ಸಿಂಗನ ಜೀವನಾಧಾರಿತ ಚಲನಚಿತ್ರವನ್ನು ನಿರ್ಮಿಸಲಾಗಿತ್ತು ಮತ್ತು ಅದರಲ್ಲಿ ಸರಬಜೀತನ ಪಾತ್ರವನ್ನು ನಟ ರಣದೀಪ ಹೂಡಾ ನಿರ್ವಹಿಸಿದ್ದರು. ಅವರು ಸರಫರಾಜನ ಹತ್ಯೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, ನೀವು ಯಾವ ಕರ್ಮವನ್ನು ಮಾಡುತ್ತೀರೋ, ಅದು ನಿಮ್ಮ ಕಡೆಗೆ ಖಂಡಿತವಾಗಿಯೂ ಮರಳಿ ಬರುತ್ತದೆ. ಅಪರಿಚಿತ ಕೊಲೆಗಾರರಿಗೆ ನಾನು ಕೃತಜ್ಞನಾಗಿದ್ದೇನೆ. ಇಂದು ನನಗೆ ನನ್ನ ಸಹೋದರಿ (ಸರಬಜೀತ ಸಹೋದರಿ) ದಲ್ಬೀರ ಕೌರ ಅವರ ನೆನಪಾಗುತ್ತಿದೆ. ಪೂನಮ್ ಮತ್ತು ಸ್ವಪ್ನದೀಪ (ಸರಬಜೀತ ಇವರ ಪುತ್ರಿಯರು) ನೆನಪಿಗೆ ಬರುತ್ತಿದ್ದಾರೆ. ಸರಬಜೀತರಿಗೆ ಕನಿಷ್ಠ ಪಕ್ಷ ಇಷ್ಟಾದರೂ ನ್ಯಾಯ ಸಿಕ್ಕಿದೆ ಎಂದು ರಣದೀಪ ಅಭಿಪ್ರಾಯ ವ್ಯಕ್ತಪಡಿಸಿದರು.