ಬನ್ನಿ, ನಾವೆಲ್ಲರೂ ರಾಮರಾಜ್ಯದೆಡೆಗೆ ಸಾಗೋಣ !

೫೦೦ ವರ್ಷಗಳ ವನವಾಸದ ನಂತರ ಶ್ರೀರಾಮಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ. ಕೇವಲ ನಮ್ಮ ಸಂಪೂರ್ಣ ದೇಶದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತದ ಹಿಂದೂಗಳಲ್ಲಿ ಉತ್ಸಾಹದ ಅಲೆ ಎದ್ದಿದೆ. ಅಮೇರಿಕಾದಲ್ಲಿ ಹಿಂದೂಗಳು ಶ್ರೀರಾಮ ಮಂದಿರದ ನಿಮಿತ್ತ ಶೋಭಾಯಾತ್ರೆಯನ್ನು ನಡೆಸಿದ್ದರು. ಸಂಪೂರ್ಣ ಭಾರತ ರಾಮಮಯವಾಗಿದೆ. ೨೨ ಜನವರಿಯಂದು ನೆರವೇರಿದ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯಿಂದ ಭಾರತೀಯರಲ್ಲಿ ರಾಮಭಕ್ತಿಯ ಜ್ಯೋತಿ ಹೆಚ್ಚು ತೇಜಸ್ವಿಯಾಗಿ ಬೆಳಗತೊಡಗಿದೆ. ಪ್ರಸಾರವಾಹಿನಿಗಳಲ್ಲಿ ಪ್ರತಿದಿನ ಅನೇಕ ಗಂಟೆಗಳ ಕಾಲ ಶ್ರೀರಾಮ ಮಂದಿರ, ಶ್ರೀರಾಮಜನ್ಮಭೂಮಿ ಆಂದೋಲನ, ರಾಮಾಯಣ ಮುಂತಾದವುಗಳ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಶ್ರೀರಾಮನ ಬಗೆಗಿನ ಹೊಸ ಹೊಸ ಭಕ್ತಿಗೀತೆಗಳು ಪ್ರಕಾಶನಗೊಳ್ಳುತ್ತಿವೆ ಮತ್ತು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಅವುಗಳಿಗೆ ‘ಪೋಸ್ಟ್‌’ (ಬರೆದು) ಕಳುಹಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಸಂಪೂರ್ಣ ದೇಶದಲ್ಲಿ ರಾಮನ ಅಲೆ ವ್ಯಾಪಿಸಿಕೊಂಡಿದೆ. ಶ್ರೀರಾಮನ ದೇವಸ್ಥಾನದಲ್ಲಿ, ಅವನ ಹೆಸರಿನಲ್ಲಿ ಎಷ್ಟು ಶಕ್ತಿ ಇದೆ, ಎಂಬ ಅನುಭೂತಿಯನ್ನು ಮತ್ತೊಮ್ಮೆ ಹಿಂದೂಗಳು ಪಡೆಯುತ್ತಿದ್ದಾರೆ. ಶ್ರೀರಾಮಜನ್ಮಭೂಮಿಯ ಮುಕ್ತಿ ಗಾಗಿ ೫೦೦ ವರ್ಷಗಳಲ್ಲಿ ಲಕ್ಷಾಂತರ ರಾಮಭಕ್ತರು ಪ್ರಾಣವನ್ನು ಅರ್ಪಿಸಿದರು. ಕಳೆದ ಅನೇಕ ದಶಕಗಳಿಂದ ನ್ಯಾಯಾಲಯಗಳಲ್ಲಿ ಈ ಕುರಿತು ಮೊಕದ್ದಮೆಗಳನ್ನು ನಡೆಸಲಾಯಿತು. ಕೊನೆಗೆ ಹಿಂದೂಗಳಿಗೆ ನ್ಯಾಯಾಲಯದಲ್ಲಿ ವಿಜಯ ದೊರಕಿತು ಮತ್ತು ಶ್ರೀರಾಮಮಂದಿರ ನಿರ್ಮಾಣವಾಯಿತು. ಹಿಂದೂಗಳು ಇಲ್ಲಿಗೇ ನಿಲ್ಲದೇ ಮಥುರಾ ಮತ್ತು ಕಾಶಿಯ ಮಂದಿರಗಳ ಭೂಮಿಯನ್ನು ಮುಕ್ತಗೊಳಿಸಲು ಹೋರಾಟ ಮುಂದುವರಿಸಿ ಅಲ್ಲಿಯೂ ವಿಜಯವನ್ನು ಸಾಧಿಸಬೇಕು. ಕೇವಲ ಮಥುರಾ ಮತ್ತು ಕಾಶಿಯಷ್ಟೇ ಅಲ್ಲ, ದೇಶದಲ್ಲಿನ ಮೂರೂವರೆ ಲಕ್ಷ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ, ಮಧ್ಯಪ್ರದೇಶದ ಧಾರನಲ್ಲಿರುವ ಭೋಜಶಾಲೆಯಲ್ಲಿ ಶ್ರೀ ಸರಸ್ವತಿದೇವಿಯ ಮಂದಿರವನ್ನು ಇದೇ ರೀತಿ ಕಬಳಿಸಲಾಗಿದೆ, ಅದಕ್ಕಾಗಿಯೂ ಹೋರಾಡಬೇಕಾಗಿದೆ. ಗೋವಾ ರಾಜ್ಯದಲ್ಲಿ ಪೋರ್ಚುಗೀಸ್‌ರ ಕಾಲದಲ್ಲಿ ದೇವಸ್ಥಾನಗಳನ್ನು ಕೆಡವಿ ಚರ್ಚ್‌ಗಳನ್ನು ಕಟ್ಟಲಾಯಿತು. ಅವುಗಳನ್ನೂ ಮುಕ್ತಗೊಳಿಸುವ ಆವಶ್ಯಕತೆಯಿದೆ. ಈ ಎಲ್ಲ ಸ್ಥಳಗಳ ದೇವತೆಗಳ ಸ್ಥಾನ ಗಳನ್ನು ಮತ್ತೊಮ್ಮೆ ಜಾಗೃತ ಮಾಡ ಬೇಕಾಗಿದೆ. ಇದಕ್ಕಾಗಿ ಕಾನೂನನ್ನು ಕೈಗೆತ್ತಿ ಕೊಳ್ಳುವ ಆವಶ್ಯಕತೆ ಇಲ್ಲ, ಕಾನೂನುಬದ್ಧವಾಗಿ ಪ್ರಯತ್ನಿಸÀಬಹುದು. ಇದಕ್ಕಾಗಿ ಸ್ಥಳೀಯ ರಾಜ್ಯ ಮತ್ತು ಕೇಂದ್ರ ಸರಕಾರಗಳೂ ಹಿಂದೂಗಳಿಗೆ ಸಹಾಯ ಮಾಡುವುದು ಅಪೇಕ್ಷಿತವಿದೆ. ಭಾಜಪದ ಆಡಳಿತವಿರುವ ರಾಜ್ಯಗಳಲ್ಲಿ ಇದು ಸಾಧ್ಯವಿದ್ದರೂ ಇತರ ರಾಜ್ಯಗಳಲ್ಲಿ ಹೀಗಾಗುವುದು ಸದ್ಯ ಕಠಿಣವಿದೆ. ಶ್ರೀರಾಮಮಂದಿರದಿಂದಾಗಿ ಈ ಹೋರಾಟಕ್ಕೆ ಬಲ ದೊರಕಿದೆ. ನಾಳೆ ಮಥುರಾ ಮತ್ತು ಕಾಶಿಯಲ್ಲಿಯೂ ಹಿಂದೂಗಳಿಗೆ ವಿಜಯ ಪ್ರಾಪ್ತವಾದರೆ, ಉಳಿದ ದೇವಸ್ಥಾನಗಳನ್ನು ಹಿಂದಿರುಗಿ ಪಡೆಯಲು ಬೇಕಾಗುವ ಪ್ರಯತ್ನಗಳಿಗೆ ಹೆಚ್ಚು ಬೆಂಬಲ ಸಿಗಬಹುದು.

ಶ್ರೀ. ಚೇತನ ರಾಜಹಂಸ

೧. ದೇವಸ್ಥಾನಗಳು ಧರ್ಮಶಿಕ್ಷಣದ ಕೇಂದ್ರಗಳಾಗಬೇಕು !

ಹಿಂದೂಗಳ ದೇವಸ್ಥಾನಗಳು ಚೈತನ್ಯದ ಸ್ರೋತವಾಗಿವೆ. ಆಧ್ಯಾತ್ಮಿಕ ದೃಷ್ಟಿಯಿಂದ ಅವುಗಳಿಗಿರುವ ಮಹತ್ವವನ್ನು ಭಕ್ತರು, ಸಾಧಕರು, ಸಂತರೇ ತಿಳಿದುಕೊಳ್ಳಬಹುದು. ಆದ್ದರಿಂದ ಇಂತಹ ಚೈತನ್ಯಸ್ರೋತಗಳನ್ನು ವಿರೋಧಿಸಿದ ಆಸುರಿ ಜನರು ಈ ದೇವಸ್ಥಾನಗಳನ್ನು ನಾಶ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ ಎನ್ನಬಹುದು. ಹಿಂದೂಗಳ ದೇವಸ್ಥಾನಗಳ ಮಾಧ್ಯಮಗಳಿಂದ ಸಮಾಜದಲ್ಲಿ ಭಾವಭಕ್ತಿ, ಧರ್ಮಾಚರಣೆ, ಸಾಧನೆ, ತ್ಯಾಗ, ಮನಃಶಾಂತಿ ಮುಂತಾದ ವಿಷಯಗಳನ್ನು ಸಾಧ್ಯ ಮಾಡಬಹುದಾಗಿದೆ. ದೇವಸ್ಥಾನಗಳ ಈ ಮಹತ್ವ ಹಿಂದೂಗಳಿಗೆ ಗೊತ್ತಿದೆ. ದೇಶದಲ್ಲಿ ಪ್ರತಿಯೊಂದು ಊರಲ್ಲಿ ಒಂದೆರಡಲ್ಲ, ಅನೇಕ ದೇವಸ್ಥಾನಗಳಿವೆ. ಇಂತಹ ದೇವಸ್ಥಾನಗಳು ಈಗ ಹಿಂದೂಗಳ ಧರ್ಮಶಿಕ್ಷಣದ ಕೇಂದ್ರಗಳಾಗುವುದು ಆವಶ್ಯಕವಾಗಿದೆ. ಶ್ರೀರಾಮಮಂದಿರದ ನಿಮಿತ್ತ ಹಿಂದೂಗಳಲ್ಲಿ ಆಧ್ಯಾತ್ಮಿಕ ದೃಷ್ಟಿಯಿಂದ ಒಂದು ರೀತಿಯ ಜಾಗೃತಿ ಮೂಡಿದೆ. ಈ ಜಾಗೃತಿಯನ್ನು ಮುಂದೆ ಬೆಳೆಸುವ ಆವಶ್ಯಕತೆ ಇದೆ. ಅದಕ್ಕಾಗಿ ಪ್ರತಿಯೊಂದು ದೇವಸ್ಥಾನದಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿ ಪ್ರತ್ಯಕ್ಷ ಸಾಧನೆಗೆ ಮತ್ತು ಧರ್ಮಾಚರಣೆಗೆ ಪ್ರೋತ್ಸಾಹ ನೀಡುವ ಆವಶ್ಯಕತೆ ಇದೆ. ಇದರಿಂದಲೇ ದೇವಸ್ಥಾನಗಳಿಂದ ಹಿಂದೂಗಳಿಗೆ, ಸಮಾಜಕ್ಕೆ ಮತ್ತು ದೇಶಕ್ಕೆ ಹೆಚ್ಚು ಲಾಭವಾಗಲಿದೆ, ಎಂಬುದನ್ನೂ ಅವರಿಗೆ ಹೇಳಬೇಕು. ಶ್ರೀರಾಮಮಂದಿರದ ಉದ್ಘಾಟನೆಯ ದಿನ ದೇಶದ ಸುಮಾರು ೫ ಲಕ್ಷ ದೇವಸ್ಥಾನಗಳಲ್ಲಿ ಪೂಜೆ, ಆರತಿ ಮುಂತಾದ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ವಿಶ್ವ ಹಿಂದೂ ಪರಿಷತ್ತು ಕರೆ ನೀಡಿತ್ತು. ಅದಕ್ಕೂ ಮೊದಲು ಅಂದರೆ ಜನವರಿ ೧೪ ರಿಂದ ೨೨ ಈ ಕಾಲಾವಧಿಯಲ್ಲಿ ದೇವಸ್ಥಾನಗಳ ಸ್ವಚ್ಛತೆಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವುದು ಗೊತ್ತೇ ಇದೆ, ಅಂದರೆ ಏನು, ಈ ದೇವಸ್ಥಾನಗಳಲ್ಲಿ ಹಿಂದೂಗಳನ್ನು ಸಂಘಟಿಸಲು ಸಾಧ್ಯವಾಗುತ್ತಿದೆ. ಅದಕ್ಕಾಗಿ ಬೇರೆ ಜಾಗೃತಿ, ಪ್ರಬೋಧನೆ ಮಾಡುವ ಆವಶ್ಯಕತೆ ಅನಿಸುವುದಿಲ್ಲ. ಇಂದಿನವರೆಗೆ ಹಿಂದೂಗಳಲ್ಲಿ ದೇವಸ್ಥಾನಗಳ ಬಗ್ಗೆ ಶ್ರದ್ಧೆ ಮತ್ತು ಭಾವ ಉಳಿದುಕೊಂಡಿದೆ. ಇದನ್ನೇ ಮುಂದೆ ಬೆಳೆಸಲು ಹಿಂದೂಗಳನ್ನು ದೇವಸ್ಥಾನಗಳೊಂದಿಗೆ ಜೋಡಿಸಿಡಬೇಕಾಗಿದೆ. ಭಾರತವು ಜಾತ್ಯತೀತ ದೇಶವಾಗಿರುವುದರಿಂದ ಪ್ರಧಾನಿ ಮೋದಿ ಅಥವಾ ಯಾವುದೇ ಸರಕಾರ ಹಿಂದೂಗಳಿಗೆ ನೇರ ಧರ್ಮಶಿಕ್ಷಣ ನೀಡುವ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಿಲ್ಲ; ಆದರೆ ಹಿಂದೂಗಳ ಸಂಘಟನೆಗಳು ಅದಕ್ಕಾಗಿ ಈಗ ಪ್ರಯತ್ನಿಸುವುದು ಆವಶ್ಯಕವಾಗಿದೆ. ಜನ್ಮಹಿಂದೂಗಳಿಂದಾಗುವ ದೇವತೆಗಳ ಅಪಮಾನವನ್ನು ಧರ್ಮಶಿಕ್ಷಣವನ್ನು ಪಡೆದ ಹಿಂದೂಗಳು ತಡೆಗಟ್ಟುವರು. ಇತರ ಧರ್ಮೀಯರು ಹಿಂದೂಗಳ ಬುದ್ಧಿಭೇದ ಮಾಡುವುದನ್ನು ನಿಲ್ಲಿಸಿದರೆ ಮತಾಂತರಕ್ಕೆ ದೊಡ್ಡ ಪ್ರಮಾಣದಲ್ಲಿ ಕಡಿವಾಣ ಬೀಳುವುದು. ಲವ್‌ ಜಿಹಾದ್‌ನಲ್ಲಿ ಸಿಲುಕುವ ಹಿಂದೂ ಹುಡುಗಿಯರ ರಕ್ಷಣೆಯಾಗುವುದು. ಹಿಂದೂಗಳಲ್ಲಿ ಧರ್ಮದ ಬಗ್ಗೆ ಹೆಚ್ಚು ಪ್ರೇಮ ಮತ್ತು ಜಾಗೃತಿಯು ಮೂಡುವುದು ಮತ್ತು ತಮ್ಮನ್ನು ಹಿಂದೂ ಎಂದು ಒಪ್ಪಿಕೊಳ್ಳಲು ಅವರಿಗೆ ನಿಜವಾಗಿಯೂ ಅಭಿಮಾನ ಅನಿಸುವುದು !

೨. ದೇವಸ್ಥಾನಗಳು ಪ್ರವಾಸಿತಾಣದ ಕೇಂದ್ರಗಳಾಗಬಾರದು !

ಸದ್ಯ ದೇವಸ್ಥಾನಗಳ ವಿಕಾಸವನ್ನು ಮಾಡಲಾಗುತ್ತಿದೆ, ಅಂದರೇನು, ಅಂದರೆ ಅಲ್ಲಿ ಹೆಚ್ಚೆಚ್ಚು ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುತ್ತಿದೆ. ಅಲ್ಲಿಗೆ ತಲುಪಲು ವಿವಿಧ ಮಾಧ್ಯಮಗಳನ್ನು ನಿರ್ಮಿಸಲಾಗುತ್ತಿದೆ. ಈ ವಿಷಯಗಳು ಆವಶ್ಯಕವೇ ಆಗಿವೆ; ಆದರೆ ಓರ್ವ ಭಕ್ತ, ಭಾವಿಕ, ಸಾಧಕ ಈ ದೃಷ್ಟಿಯಿಂದ ಸಹ ಇದರ ಉಪಯೋಗವಾಗಬೇಕು. ವಾಸ್ತವದಲ್ಲಿ ಅದು ಎಷ್ಟು ಪ್ರಮಾಣದಲ್ಲಿದೆ, ಎಂಬುದರ ಚಿಂತನೆಯಾಗಬೇಕು. ಪ್ರಸ್ತುತ ದೇವಸ್ಥಾನಗಳನ್ನು  ಪ್ರವಾಸಿತಾಣಗಳೆಂದು ನೋಡಲಾಗುತ್ತಿದೆ. ಕೆಲವು ಬೆರಳೆಣಿಕೆಯಷ್ಟು ದೇವಸ್ಥಾನಗಳು ತಮ್ಮ ಮೂಲ ಸ್ವರೂಪವನ್ನು ಉಳಿಸಿಕೊಂಡಿವೆ ಅಥವಾ ಭಕ್ತರು ಅವುಗಳನ್ನು ಅದೇ ದೃಷ್ಟಿಯಿಂದಲೇ ನೋಡುತ್ತಿದ್ದಾರೆ. ದೇವಸ್ಥಾನಗಳು ಎಂದಿಗೂ ಪ್ರವಾಸಿತಾಣಗಳಾಗಲು ಸಾಧ್ಯವಿಲ್ಲ. ಅವು ಚೈತನ್ಯದ ಕೇಂದ್ರಗಳಾಗಿವೆ. ಈ ಚೈತನ್ಯವನ್ನು ಉಳಿಸಿಡುವುದು ಭಕ್ತರ ಕರ್ತವ್ಯವಲ್ಲ, ಸಾಧನೆಯೇ ಆಗಿದೆ. ಒಂದು ವೇಳೆ ಈ ಚೈತನ್ಯ ನಾಶವಾದರೆ, ಆ ದೇವಸ್ಥಾನಗಳಿಗೆ ಯಾವುದೇ ಮಹತ್ವವು ಉಳಿಯುವುದಿಲ್ಲ; ಏಕೆಂದರೆ ಅಲ್ಲಿ ‘ದೇವರು’ ಇರುವುದಿಲ್ಲ. ಅನೇಕ ಸಂತರಿಗೆ, ಉನ್ನತರಿಗೆ, ‘ದೇವಸ್ಥಾನಗಳ ಚೈತನ್ಯ ನಾಶವಾಗಿ ಅಲ್ಲಿನ ದೇವತ್ವವು ಹೊರಟುಹೋಗಿರುವುದು’, ಗಮನಕ್ಕೆ ಬರುತ್ತಿದೆ. ಹಿಂದೂಗಳಿಗೆ ಇದೊಂದು ದೊಡ್ಡ ಸಮಷ್ಟಿ ಪಾಪವಾಗಿದೆ. ಕೆಲವು ಸಂತರು ಇಂತಹ ದೇವಸ್ಥಾನಗಳಿಗೆ ಭೇಟಿ ನೀಡಿ ಅವುಗಳನ್ನು ಶುದ್ದೀಕರಿಸುತ್ತಾರೆ; ಆದರೆ ಒಂದು ವೇಳೆ ಚೈತನ್ಯವನ್ನು ನಾಶಗೊಳಿಸುವ ವಿಷಯವನ್ನೇ ನಿಲ್ಲಿಸಿದರೆ, ಅದು ಹೆಚ್ಚು ಮಹತ್ವದ್ದಾಗುವುದು. ವಿಕಾಸಕಾರ್ಯ ಮಾಡುವಾಗ ಸರಕಾರ ಈ ದೃಷ್ಟಿಯಿಂದ ನೋಡಬೇಕು .

೩. ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಿ !

ಶ್ರೀರಾಮಮಂದಿರವನ್ನು ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌’ನ ವತಿಯಿಂದ ನಿರ್ಮಿಸಲಾಗುತ್ತಿದೆ. ನ್ಯಾಯಾಲಯದ ಆದೇಶದ ನಂತರ ಈ ಟ್ರಸ್ಟ್‌ನ ಸ್ಥಾಪನೆಯಾಗಿದೆ. ಇದರಲ್ಲಿ ಸರಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಆದರೆ ಇಂದು ದೇಶದ ಲಕ್ಷಾಂತರ ದೇವಸ್ಥಾನಗಳು ಸರಕಾರಗಳ ನಿಯಂತ್ರಣದಲ್ಲಿವೆ. ಈ ದೇವಸ್ಥಾನಗಳಿಗೆ ಬರುವ ಕೋಟ್ಯಂತರ ರೂಪಾಯಿಗಳ ಅರ್ಪಣೆಯು ಸರಕಾರದ ತಿಜೋರಿಯಲ್ಲಿ ಜಮೆಯಾಗುತ್ತಿದೆ. ಇದರಲ್ಲಿ ಸ್ವಲ್ಪ ಹಣ ಮಾತ್ರ ವಾಸ್ತವದಲ್ಲಿ ದೇವಸ್ಥಾನಗಳ ಕೆಲಸಕ್ಕೆ ಬಳಸಲಾಗುತ್ತಿದೆ ಮತ್ತು ಇತರ ಎಲ್ಲ ಹಣವನ್ನು ಸರಕಾರಿ ಯೋಜನೆಗಳಿಗಾಗಿ ಬಳಸಲಾಗುತ್ತಿದೆ. ಹಾಗೆಯೇ ದೇವಸ್ಥಾನಗಳ ಸಮಿತಿಗಳೂ ಈ ಹಣವನ್ನು ಹಿಂದೂಗಳ ಧರ್ಮಶಿಕ್ಷಣಕ್ಕೆ ಅಥವಾ ಧರ್ಮಕಾರ್ಯಕ್ಕೆ ಬಳಸುತ್ತಿಲ್ಲ ಎಂಬುದೂ ಕಂಡು ಬರುತ್ತಿದೆ. ಮನೆಯನ್ನು ನಡೆಸುವ ಹಿರಿಯರು ಕಿರಿಯÀರನ್ನು ನೋಡಿಕೊಳ್ಳುವಂತೆ, ಹೆಚ್ಚು ಆದಾಯವಿರುವ ದೇವಸ್ಥಾನಗಳು ದೇಶದಲ್ಲಿನ ಅತ್ಯಲ್ಪ ಆದಾಯವಿರುವ ಚಿಕ್ಕ ದೇವಸ್ಥಾನಗಳನ್ನು ಅಥವಾ ಪಾಳು ಬಿದ್ದ ದೇವಸ್ಥಾನಗಳ ವ್ಯವಹಾರಗಳನ್ನು ನೋಡಿಕೊಳ್ಳಬೇಕು. ಆದರೆ ಹೀಗಾಗುತ್ತಿಲ್ಲ, ಅಂದರೆ ಹಿಂದೂಗಳು ಅರ್ಪಿಸಿದ ಹಣ ಧರ್ಮಕ್ಕಾಗಿ ಬಳಕೆಯಾಗುತ್ತಿಲ್ಲ ಎಂದರ್ಥ. ಈ ಹಣವನ್ನು ಆಸ್ಪತ್ರೆಗಳನ್ನು ಕಟ್ಟಲು, ನೆರೆಪೀಡಿತರಿಗೆ, ಶಾಲೆಗಳಿಗೆ, ರೋಗಿಗಳ ಸಹಾಯಕ್ಕಾಗಿ ಬಳಸಲಾಗುತ್ತಿದೆ. ಇವೆಲ್ಲವೂ ಸಾಮಾಜಿಕ ಕಾರ್ಯಗಳಾಗಿವೆ. ಸಾಮಾಜಿಕ ಕಾರ್ಯಕ್ಕೆ ಧರ್ಮದ ಹಣ ಖರ್ಚಾಗಬಾರದು. ಸಾಮಾಜಿಕ ಕಾರ್ಯಕ್ಕಾಗಿ ಇತರ ಸ್ರೋತ ಗಳಿವೆ; ಆದರೆ ಧರ್ಮಕಾರ್ಯಕ್ಕಾಗಿ ಇಂತಹ ಶಾಶ್ವತ ಸ್ವರೂಪದ ಸ್ರೋತಗಳಿಲ್ಲ. ಆದುದರಿಂದ ದೇವಸ್ಥಾನಗಳ ಹಣ ಧರ್ಮ ಕಾರ್ಯಕ್ಕೆ ಬಳಕೆಯಾಗಬೇಕು. ಕೆಲವು ದೇವಸ್ಥಾನಗಳ ಹಣ ಇತರ ಧರ್ಮೀಯರಿಗಾಗಿ ಖರ್ಚು ಮಾಡಿದ ಕೆಲವು ಉದಾಹರಣೆಗಳೂ ಬಹಿರಂಗವಾಗಿದ್ದವು. ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ. ಆದುದರಿಂದ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ ಸಾಧನೆಯನ್ನು ಮಾಡುವ ಭಕ್ತರ ವಶಕ್ಕೆ ಒಪ್ಪಿಸಬೇಕು. ಸರಕಾರಿ ಅಧಿಕಾರಿಗಳ ಬದಲು ಇಂತಹ ಭಕ್ತರೇ ನಿಜವಾದ ಅರ್ಥದಲ್ಲಿ ದೇವಸ್ಥಾನಗಳನ್ನು ಭಾವಭಕ್ತಿಯಿಂದ ನಿಭಾಯಿಸಬಹುದು. ಇದಕ್ಕಾಗಿ ಹಿಂದೂಗಳು ಪ್ರಯತ್ನಿಸಬೇಕು. ಶ್ರದ್ಧಾಭಕ್ತಿಯುಕ್ತವಾದ ದೇವಸ್ಥಾನಗಳಲ್ಲಿ ಯೋಗ್ಯ ನಿರ್ವಹಣೆಯಾಗ ಕಾರಣ ಅಲ್ಲಿನ ಹಣವನ್ನು ಮತ್ತು ಆಭರಣ ಗಳನ್ನು ದೋಚಲಾಗುತ್ತದೆ, ಆ ದೇವಸ್ಥಾನಗಳ ಹಣ ಧರ್ಮ ಕಾರ್ಯಕ್ಕಾಗಿ ಖರ್ಚಾಗುವುದಿಲ್ಲ, ಹಾಗಾದರೆ, ಅಲ್ಲಿ ದೇವರು ಇರಲು ಸಾಧ್ಯವೇ ? ಇದಕ್ಕಾಗಿ ಈಗ ಹಿಂದೂಗಳು ಹೋರಾಡುವುದು ಆವಶ್ಯಕವಾಗಿದೆ. ಇದಕ್ಕಾಗಿ ಈಗ ದೇಶದಾದ್ಯಂತ ಜಾಗೃತಿ ಮೂಡಿಸಿ ದೊಡ್ಡ ಚಳುವಳಿಯನ್ನು ನಡೆಸಬೇಕಾಗಿದೆ. ದೇವಸ್ಥಾನಗಳ ಹಣದಿಂದ ಧರ್ಮಶಿಕ್ಷಣಕ್ಕಾಗಿ ಪ್ರಯತ್ನಿಸ ಬಹುದಾಗಿದೆ. ಕೋಟ್ಯಂತರ ರೂಪಾಯಿಗಳ ಆದಾಯವಿರುವ ದೊಡ್ಡ ದೇವಸ್ಥಾನಗಳು ಎಲ್ಲ ಕಡೆಗೆ ಗುರುಕುಲಗಳನ್ನು ಸ್ಥಾಪಿಸ ಬೇಕು. ಈ ಹಣದಿಂದ ಪರಿಸರದ ಶುದ್ಧಿಗಾಗಿ ನಿಯಮಿತ ವಾಗಿ ಯಜ್ಞ-ಯಾಗಗಳನ್ನು ಮಾಡುವುದು ಆವಶ್ಯಕವಾಗಿದೆ. ಕೊರೊನಾ ಮಹಾಮಾರಿಯ ಕಾಲದಲ್ಲಿ ನಿರ್ಜಂತುಕರಣವನ್ನು ಮಾಡಲಾಗುತ್ತಿತ್ತು, ಅದೇ ರೀತಿ ಯಜ್ಞ-ಯಾಗಗಳೂ ಆಧ್ಯಾತ್ಮಿಕ ಸ್ತರದಲ್ಲಿ ಕಾರ್ಯವನ್ನು ಮಾಡುತ್ತವೆ.

೪. ರಾಮರಾಜ್ಯಸಮಾನ ಆದರ್ಶ ಹಿಂದೂ ರಾಷ್ಟ್ರ ಬೇಕು !

ಶ್ರೀರಾಮಮಂದಿರವನ್ನು ನಿರ್ಮಿಸಿದ್ದರೂ ಅದು ಅಂತಿಮ ‘ಸಾಧ್ಯ’ ಎಂದಾಗಬಾರದು. ಶ್ರೀರಾಮನ ಪ್ರಾಣಪ್ರತಿಷ್ಠೆ ೫೦೦ ವರ್ಷಗಳ ನಂತರ ಈ ದೇಶದಲ್ಲಿ ನಡೆದಿದೆ, ಈಗ ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾಗುವುದೂ ಆವಶ್ಯಕವಾಗಿದೆ, ಅಂದರೇನು, ದೇಶದಲ್ಲಿ ಶ್ರೀರಾಮನು ನಡೆಸಿದಂತಹ ರಾಜ್ಯ, ಅಂದರೆ ದೇಶವನ್ನು ನಡೆಸುವ ಆವಶ್ಯಕತೆ ಇದೆ. ಸದ್ಯ ಈ ಸ್ಥಿತಿ ಇದೆಯೇನು ? ಇಲ್ಲ. ಭಾರತ ಒಂದು ಧರ್ಮನಿರಪೇಕ್ಷ (ಜಾತ್ಯತೀತ) ದೇಶವಾಗಿದೆ. ಎಲ್ಲಿ ಧರ್ಮವೇ ಇಲ್ಲವೋ, ಅಲ್ಲಿ ಧರ್ಮಾಚರಣೆ ಸಾಧ್ಯವಿದೆಯೇ ? ಇದಕ್ಕಾಗಿ ಮೊದಲು ಭಾರತವನ್ನು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು. ಈ ದೇಶ ಹಿಂದೂಗಳದ್ದು. ಈ ದೇಶವನ್ನು ಮುಸಲ್ಮಾನರು ಮತ್ತು ಕ್ರೈಸ್ತರು ಸುಮಾರು ೧ ಸಾವಿರ ವರ್ಷಗಳ ಕಾಲ ಆಳಿದರು. ಅವರ ಗುಲಾಮಗಿರಿಯಿಂದಾಗಿ ಭಾರತವು ತನ್ನ ಮೂಲ ಸಂಸ್ಕೃತಿಯನ್ನೇ ಮರೆತಿದೆ, ಅಂದರೆ ಸಾಧನೆಯನ್ನು ಮಾಡುವ ಸಂಸ್ಕೃತಿಯನ್ನೇ ಮರೆತಿದೆ. ಭಾರತ ಆಧ್ಯಾತ್ಮಿಕ ಸ್ತರದಲ್ಲಿ ಜಗತ್ತಿನ ವಿಶ್ವಗುರು ಆಗಿತ್ತು ! ಇಂದು ದೇಶದಲ್ಲಿ ಭಾರತ ಜಗತ್ತಿನ ವಿಶ್ವಗುರುವಾಗುವಂತಹ ಸ್ಥಿತಿ ಇದೆಯೇ, ಇದರ ಉತ್ತರ ‘ಇಲ್ಲ’ ಎಂದಾಗಿದೆ. ಆದುದರಿಂದ ಮೊದಲು ದೇಶದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ ಹಿಂದೂ ಧರ್ಮಕ್ಕನುಸಾರ ರಾಜ್ಯವನ್ನು ನಡೆಸಬೇಕು. ಇದರಿಂದ ಪ್ರತಿಯೊಬ್ಬ ವ್ಯಕ್ತಿ ಹಿಂದೂ ಧರ್ಮಪಾಲಿಸವನು. ಹಿಂದೂ ಧರ್ಮಕ್ಕನುಸಾರ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು, ಇತರ ಕಾರ್ಯವನ್ನು ಮಾಡಲಾಗುವುದು, ಆ ದೃಷ್ಟಿಯಿಂದ ಅಭಿವೃದ್ಧಿ ಮಾಡಲಾಗುವುದು. ದೇಶದಲ್ಲಿ ಈ ಸ್ಥಿತಿ ಬಂದರೆ, ‘ರಾಮರಾಜ್ಯ ಬಂತು’ ಎನ್ನಬಹುದು. ಇಂತಹ ರಾಜ್ಯಕರ್ತರು ಪಿತೃಶಾಹಿಗನುಸಾರ ಆಡಳಿತವನ್ನು ನಡೆಸುವರು. ಇಂತಹ ದೇಶದ ಪ್ರಜೆಗಳು ರಾಜರಂತೆ ಇರುತ್ತಾರೆ. ಈ ರಾಜ್ಯದಲ್ಲಿ ಯಾರೂ ದುಃಖಿಯಾಗಿರುವುದಿಲ್ಲ ಮತ್ತು ಯಾರಿಗಾದರೂ ಸಮಸ್ಯೆಗಳಿದ್ದರೆ ಅವುಗಳನ್ನು ತಕ್ಷಣ ಪರಿಹರಿಸಲಾಗುವುದು. ಇತರ ದೇಶಗಳಲ್ಲಿ ಭಾರತದ ಬಗ್ಗೆ ಶತ್ರುತ್ವವಿರುವುದಿಲ್ಲ, ಗೌರವವಿರುವುದು. ಅವರು ಭಾರತವನ್ನು ಆದರ್ಶವಾಗಿಟ್ಟುಕೊಂಡು ರಾಜ್ಯಾಡಳಿತವನ್ನು ನಡೆಸುವರು.

ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ.