Police In Disguise: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಅರ್ಚಕರ ವೇಷದಲ್ಲಿ ಪೊಲೀಸರು!

ವಾರಣಾಸಿ (ಉತ್ತರ ಪ್ರದೇಶ) – ಇಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಜಗತ್ತಿನೆಲ್ಲೆಡೆಯ ಭಕ್ತರು ಬರುತ್ತಾರೆ. ಅವರ ಭದ್ರತೆಗಾಗಿ ಸಂಪೂರ್ಣ ದೇವಸ್ಥಾನದ ಆವರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇತ್ತೀಚೆಗೆ ವಾರಣಾಸಿ ಪೊಲೀಸ್ ಆಯುಕ್ತರು ಕಾಶಿ ವಿಶ್ವನಾಥ ದೇವಸ್ಥಾನದ ಗರ್ಭಗುಡಿಯಲ್ಲಿ ನಿಯೋಜಿಸಲಾದ ಪೊಲೀಸರ ಉಡುಗೆಯನ್ನು ಬದಲಾಯಿಸಿದ್ದಾರೆ. ಹೊಸ ಆದೇಶದ ಪ್ರಕಾರ, ಗರ್ಭಗುಡಿಯಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಗಳು ಅರ್ಚಕರಂತೆ ಕೇಸರಿ ಧೋತಿ-ಕುರ್ತಾ ಮತ್ತು ರುದ್ರಾಕ್ಷ ಮಾಲೆ ಧರಿಸುತ್ತಾರೆ ಹಾಗೆಯೇ ಹಣೆಗೆ ತ್ರಿಪುಂಡ್ರವನ್ನು ಧರಿಸುತ್ತಾರೆ. ಹಾಗೆಯೇ ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಕೇಸರಿ ಸಲ್ವಾರ್ ಕುರ್ತಾ ಇರಲಿದೆ. . ಪೊಲೀಸ್ ಆಯುಕ್ತರ ಈ ನಿರ್ಣಯವನ್ನು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರಿದಂತೆ ಹಲವರು ಟೀಕಿಸಿದ್ದು, ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಅಂತಹ ಸ್ಥಿತಿಯಲ್ಲಿ ಅನೇಕ ಬಾರಿ ಅನುಚಿತ ವರ್ತನೆ ಅಥವಾ ನೂಕು ನುಗ್ಗಲು ಆಗಿರುವ ದೂರುಗಳು ಬರುತ್ತಿತ್ತು. ಆದುದರಿಂದ ದೇವಸ್ಥಾನದಲ್ಲಿ ವಿಭಿನ್ನ ರೀತಿಯ ಪೊಲೀಸ್ ವ್ಯವಸ್ಥೆ ಅವಶ್ಯವಾಗಿತ್ತು. ಇದರನ್ವಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ, ಗರ್ಭಗುಡಿಯಲ್ಲಿ ಅರ್ಚಕರ ಉಡುಪಿನಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದಲ್ಲದೇ ದೇವಸ್ಥಾನದಲ್ಲಿ ` ಟಚ್ ಪಾಲಿಸಿ’ ಜಾರಿಗೊಳಿಸಲಾಗಿಲ್ಲ. (ಇದರಡಿಯಲ್ಲಿ ಪೊಲೀಸರು ಸರತಿ ಸಾಲಿನಲ್ಲಿರುವ ಭಕ್ತರನ್ನು ಮುಂದೆ ಕಳಿಸಲು ತಳ್ಳುವುದಿಲ್ಲ ಅಥವಾ ಮುಟ್ಟುವುದಿಲ್ಲ.)

ಜ್ಯೋತಿಷಿಗಳಿಂದ ಬೆಂಬಲ!

ಈ ಉಡುಪಿನ ವಿಷಯಕ್ಕೆ ಸಂಬಂಧಿಸಿದಂತೆ, ಜ್ಯೋತಿಷಿ ಪಂಡಿತ್ ಶಶಿ ಶೇಖರ ತ್ರಿಪಾಠಿಯವರು ಮಾತನಾಡಿ, ಈ ನಿರ್ಧಾರ ಯೋಗ್ಯವಾಗಿದೆ. ಜ್ಯೋತಿಷ್ಯ ಶಾಸ್ತ್ರಾನುಸಾರ ಪೊಲೀಸನು ದಂಡಾಧಿಕಾರಿಯಾಗಿದ್ದು, ಕ್ರೂರತತ್ವದ ಮಂಗಳನಿಗೆ ಸಂಬಂಧಿಸಿದೆ. ಆದರೆ ದೇವಸ್ಥಾನ ಮತ್ತು ದೇವಸ್ಥಾನದ ವಾತಾವರಣವು ದೇವಗುರು ಬೃಹಸ್ಪತಿಯನ್ನು (ಭಗವಾನ್ ಗುರು) ಪ್ರತಿನಿಧಿಸುತ್ತದೆ. ಗುರುವಿನ ಸಂಬಂಧ ಧರ್ಮ ಮತ್ತು ಆಧ್ಯಾತ್ಮಕ್ಕೆ ಸಂಬಂಧಿಸಿದೆ. ಪುರೋಹಿತರ ಉಡುಗೆ ಧರಿಸುವ ಪೊಲೀಸರಿಂದ ಮಂಗಳ ತತ್ವ ಕಡಿಮೆಯಾಗಿ ಗುರುತತ್ವ ಹೆಚ್ಚಾಗುವುದು ಇದು ಒಳ್ಳೆಯದು. ಧಾರ್ಮಿಕ ಸ್ಥಳಗಳಲ್ಲಿ ಗುರುವಿನ ಪ್ರಾಬಲ್ಯ ಅಧಿಕ ಇರಬೇಕು.