ಹಿಂದೂ ಸಂಸ್ಕ್ರತಿಯನ್ನು ಹೆಚ್ಚಿಸುವ ಹಿಂದೂಗಳ ಪಾರಂಪಾರಿಕ ನವವರ್ಷದ ಯುಗಾದಿ ಹಬ್ಬ !

ಯುಗಾದಿ, ಅಂದರೆ ಚೈತ್ರ ಶುಕ್ಲ ಪಾಡ್ಯ. ಈ ದಿನ, ಶಿಶಿರ ಋತು ಮುಗಿದು ವಸಂತ ಋತುವಿನ ಆಗಮನವಾಗಿರುತ್ತದೆ ಮತ್ತು ಪೂರ್ಣ ಚರಾಚರ ಸೃಷ್ಟಿಯು ಸೃಜನೆಯ (ಸೃಷ್ಟಿಯ) ಪರಿಮಳದಿಂದ ತುಂಬಿರುತ್ತದೆ. ಕೆಲವೆಡೆ ಶುಭ್ರ ಮಲ್ಲಿಗೆ ಬಳ್ಳಿಗಳಿಗೆ ತುಂಬಾ ಮೊಗ್ಗುಗಳು ಬಂದಿರುತ್ತವೆ, ಕೆಲವೆಡೆ ಮಾವಿನ ಮರಗಳು ಹೂ ಬಿಟ್ಟು ಪರಿಮಳ ಸೂಸುತ್ತಿರುತ್ತವೆ. ವೃಕ್ಷ, ವನಸ್ಪತಿಗಳು ಚೈತ್ರದ ಚಿಗುರಿನಲ್ಲಿ ಅರಳುತ್ತಿರುತ್ತವೆ. ಮನೆಯ ಎದುರಿಗೆ ಸುಂದರ ರಂಗೋಲಿಗಳನ್ನು ಬಿಡಿಸಲಾಗುತ್ತದೆ. ಪ್ರವೇಶದ್ವಾರಕ್ಕೆ ಚೆಂಡುಹೂ ಮತ್ತು ಮಾವಿನ ಎಲೆಗಳ ಸುಶೋಭಿತ ತೋರಣವನ್ನು ಕಟ್ಟಲಾಗುತ್ತದೆ. ಪಾರಂಪರಿಕ ವಸ್ತ್ರಗಳನ್ನು ಧರಿಸಿ, ಬ್ರಹ್ಮಧ್ವಜ ನಿಲ್ಲಿಸಿ ಅದನ್ನು ಪೂಜಿಸಲಾಗುತ್ತದೆ.

ಸೌ. ಅನಘಾ ಸಾಖರೆ

೧. ಆಯುರ್ವೇದಿಕ ಗುಣಧರ್ಮದ ವಿಚಾರದೊಂದಿಗೆ ಸಿದ್ಧಗೊಳ್ಳುವ ಪ್ರಸಾದ !

ಈ ಸಂದರ್ಭದಲ್ಲಿ ಪ್ರಸಾದವೆಂದು ಕಹಿಬೇವಿನ ಎಲೆಗಳ ಚಟ್ನಿಯನ್ನು ನೀಡಲಾಗುತ್ತದೆ. ಇದರಲ್ಲಿ ಶರೀರದ ಬಗ್ಗೆ ವಿಚಾರವನ್ನು ಮಾಡಲಾಗಿದೆ. ಮುಂಬರುವ ಕಾಲಾವಧಿಯಲ್ಲಿ ತಾಪಮಾನ ಹೆಚ್ಚಾಗುವುದರಿಂದ, ಉಷ್ಣತೆಯ ರೋಗಗಳು ಸಂಭವಿಸ ಬಹುದು. ಕಹಿಬೇವು ಉಷ್ಣತೆ ನಿವಾರಣೆಗೆ ಅತ್ಯಂತ ಗುಣಕಾರಿ ಔಷಧಿಯಾಗಿದೆ. ಕೆಲವು ಸ್ಥಳಗಳಲ್ಲಿ ಕಹಿಬೇವು, ಕಾಳುಮೆಣಸು, ಶುಂಠಿ, ಓಂ ಕಾಳು ಇವುಗಳ ಮಿಶ್ರಣವನ್ನು ಮಾಡಿ ಅದನ್ನು ಸೇವಿಸಲಾಗುತ್ತದೆ. ಇದರಿಂದ ಹಬ್ಬಗಳ ಪರಂಪರೆಯ ಮಹತ್ವ ಗಮನಕ್ಕೆ ಬರುತ್ತದೆ.

೨. ಶಾಲಿವಾಹನ ಶಕೆ

ಪೈಠಣದ ಶಾಲಿವಾಹನ ರಾಜನು ಅಥವಾ ಸಾತವಾಹನ ರಾಜನು ಅಪ್ರತಿಮ ಶೌರ್ಯವನ್ನು ಮಾಡಿ, ಪರಕೀಯ ಶಕ ವಂಶದ ರಾಜರ ಮೇಲೆ ಗಳಿಸಿದ ದೈದೀಪ್ಯಮಾನ ವಿಜಯದ ಪ್ರತೀಕವೆಂದು ಆ ರಾಜನು ತನ್ನ ಹೆಸರಿನಿಂದ ಕಾಲಗಣನೆಯನ್ನು ಪ್ರಾರಂಭಿಸಿದನು. ಅದನ್ನು ‘ಶಾಲಿವಾಹನ ಶಕೆ’ ಎಂದು ಹೇಳಲಾಗುತ್ತದೆ.  ಶಾಲಿವಾಹನ ಶಕೆಯು ವರ್ಷ ೭೮ ಕ್ಕೆ ಪ್ರಾರಂಭವಾಯಿತು, ಅಂದರೆ ಇಂಗ್ಲಿಷ್ ವರ್ಷ ೨೦೨೪ ರಿಂದ ೭೮ ಕಳೆದರೆ, ನಮಗೆ ಶಾಲಿವಾಹನ ಶಕೆ ೧೯೪೬ ಸಿಗುತ್ತದೆ. ಶಾಲಿವಾಹನ ಶಕೆಯು ಯುಗಾದಿಯಿಂದ ಪ್ರಾರಂಭವಾಗುತ್ತದೆ.

೩. ವಿಕ್ರಮ ಸಂವತ್ಸರ

ಉಜ್ಜೈನಿಯ ರಾಜಾ ವಿಕ್ರಮಾದಿತ್ಯನು ಕ್ರಿ.ಪೂ. ೫೭ ರ ಮಧ್ಯದಲ್ಲಿ ಕುಶಾಣ ವಂಶದ ರಾಜರನ್ನು ಹೀನಾಯವಾಗಿ ಸೋಲಿಸಿದನು ಮತ್ತು ಹಿಂದೂಸ್ಥಾನದಿಂದ ಅವನನ್ನು ಓಡಿಸಿದನು. ಆ ವಿಜಯಕ್ಕಾಗಿ ಅವನು ತನ್ನ ಹೆಸರಿನಿಂದ ಕಾಲಗಣನೆಯನ್ನು ಪ್ರಾರಂಭಿಸಿದನು. ೨೦೨೪ ಕ್ಕೆ ೫೭ ವರ್ಷಗಳನ್ನು ಸೇರಿಸಿದರೆ, ನಮಗೆ ವಿಕ್ರಮ ಸಂವತ್ಸರ ೨೦೮೧ ಸಿಗುತ್ತದೆ; ಇದು ದೀಪಾವಳಿಯ ಬಲಿಪಾಡ್ಯದಂದು ಪ್ರಾರಂಭವಾಗಿತ್ತು. ಗುಜರಾತಿನ ಜನರಲ್ಲಿ ಶಾಲಿವಾಹನ ಶಕೆಗನುಸಾರ ಪಂಚಾಂಗವಿರುತ್ತದೆ.

 ೪. ಭಾರತೀಯ ಕಾಲಗಣನೆ

ಭಾರತೀಯ ಕಾಲಗಣನೆಯಲ್ಲಿ ಚಂದ್ರ ಮತ್ತು ಸೂರ್ಯ, ಇವೆರಡರ ಭ್ರಮಣಗಳ, ಯೋಗಗಳನ್ನು ಸಂಯೋಜಿಸಿ, ನಿಸರ್ಗದೊಂದಿಗೆ ಸಮನ್ವಯ ಸಾಧಿಸುವ ಕಾಲಗಣನೆಯನ್ನು ಮಾಡಲಾಗುತ್ತದೆ. ಕೆಲವು ಹಬ್ಬಉತ್ಸವಗಳ ದಿನಗಳಿಗೆ ಸೂರ್ಯೋದಯದ ತಿಥಿಯನ್ನು ಶುಭವೆಂದು ತಿಳಿಯಲಾಗುತ್ತದೆ. ಇನ್ನೂ ಕೆಲವು ಹಬ್ಬ ಉತ್ಸವಗಳಲ್ಲಿ ಹುಣ್ಣಿಮೆಗೆ ಅಂದರೆ ಚಂದ್ರನ ತಿಥಿಗೆ ಮಹತ್ವವಿರುತ್ತದೆ. ಉದಾ. ಚತುರ್ಥಿ, ಶ್ರಾವಣ ಹುಣ್ಣಿಮೆ, ವಟಪೂರ್ಣಿಮೆ, ಕೋಜಾಗಿರಿ ಹುಣ್ಣಿಮೆ, ಹೋಳಿ ಹುಣ್ಣಿಮೆ ಇತ್ಯಾದಿ. ಯಾವುದೇ ಶುಭಕಾರ್ಯವನ್ನು ಮಾಡುವಾಗ ಸಂಕಲ್ಪದಲ್ಲಿ ನಾವು ತಿಥಿ, ವಾರ, ನಕ್ಷತ್ರ, ಸೂರ್ಯ-ಚಂದ್ರ ರಾಶಿ ತಿಥಿ, ಆ ನಗರದ ನದೀತೀರದ ಸ್ಥಾನ ಇವೆಲ್ಲವನ್ನು ಉಚ್ಚರಿಸಿ ಶುಭಕಾರ್ಯವನ್ನು ಪ್ರಾರಂಭಿಸಲಾಗುತ್ತದೆ.

೫. ಹೊಸ ವರ್ಷದ ಸ್ವಾಗತ ಯಾತ್ರೆ

ಯುಗಾದಿಯಂದು ಹೊಸವರ್ಷವನ್ನು ಸ್ವಾಗತಿಸಲು ನಗರಗಳಲ್ಲಿ ಆಕರ್ಷಕ ಅಲಂಕಾರಗಳೊಂದಿಗೆ ಶೋಭಾಯಾತ್ರೆಗಳನ್ನು ಅಂದರೆ ಮೆರವಣಿಗೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವಿವಿಧ ಸಾಮಾಜಿಕ ಸಂಸ್ಥೆಗಳ ಸಂದೇಶಗಳನ್ನು ನೀಡುವ ಚಿತ್ರರಥ, ಡೋಲು-ಮೃದಂಗ, ಲೇಝಿಮ, ಭಜನಾ ಮಂಡಳಿ ಮುಂತಾದವುಗಳೊಂದಿಗೆ ಆಕರ್ಷಕ ಸ್ವಾಗತ ಕಮಾನು, ರಂಗೋಲಿ ಇಂತಹ ಮಂಗಲಮಯ ವಾತಾವರಣದಲ್ಲಾಗುವ ಈ ಶೋಭಾಯಾತ್ರೆಗಳಲ್ಲಿ ಎಲ್ಲ ಭೇದಭಾವವನ್ನು ಮರೆತು ಹಿಂದೂಗಳು ಉತ್ಸಾಹದಿಂದ ಭಾಗವಹಿಸುತ್ತಾರೆ. ಇದರಿಂದಲೇ ಹಿಂದೂಗಳ ಸಂಘಟನೆ ಮತ್ತು ಏಕೀಕರಣದ ವಾತಾವರಣ ಅನುಭವಿಸಲು ಸಿಗುತ್ತದೆ.

– ಸೌ. ಅನಘಾ ಅನಿಲ ಸಾಖರೆ, ಕೊಪರಿ, ಠಾಣೆ, ಮಹಾರಾಷ್ಟ್ರ.