ಕುಖ್ಯಾತ ಗೂಂಡಾ ಮುಖ್ತಾರ ಅನ್ಸಾರಿ ಕಾರಾಗೃಹದಲ್ಲಿ ಹೃದಯಘಾತದಿಂದ ಸಾವು

ವಿಷ ಬೆರೆಸಿ ಕೊಲೆ ಮಾಡಲಾಗಿದೆಯೆಂದು ಅನ್ಸಾರಿ ಕುಟುಂಬಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಯಲಿದೆ

ಬಾಂದಾ (ಉತ್ತರ ಪ್ರದೇಶ) – ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕುಖ್ಯಾತ ಗೂಂಡಾ ಮುಖ್ತಾರ ಅನ್ಸಾರಿ ಹೃದಯಾಘಾತದಿಂದ ಮರಣ ಹೊಂದಿದನು. ಕಾರಾಗೃಹದಲ್ಲಿಯೇ ಅವನು ಪ್ರಜ್ಞೆ ತಪ್ಪಿ ಬಿದ್ದ ಬಳಿಕ ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಯ ಸಮಯದಲ್ಲಿಯೇ ಅವನು ಮರಣ ಹೊಂದಿದನು. ‘ಅನ್ಸಾರಿಗೆ ವಿಷವನ್ನು ನೀಡಿ ಹತ್ಯೆ ಮಾಡಲಾಗಿದೆ’ ಎಂದು ಅವನ ಕುಟುಂಬಸ್ಥರು ಆರೋಪಿಸಿದ್ದಾರೆ. ಅನ್ಸಾರಿಯ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅದರ ವರದಿ ಬಹಿರಂಗವಾಗಬೇಕಾಗಿದೆ; ಆದರೆ ಈ ಮರಣೋತ್ತರ ಪರೀಕ್ಷೆಯ ಮೇಲೆ ನಮಗೆ ನಂಬಿಕೆಯಿಲ್ಲವೆಂದು ಹೇಳಿದ ಅವನ ಕುಟುಂಬಸ್ಥರು ಏಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಕುಟುಂಬಸ್ಥರ ಆರೋಪದ ಬಳಿಕ ನ್ಯಾಯಾಧೀಶರಿಂದ ಈ ಪ್ರಕರಣದ ತನಿಖೆ ನಡೆಯಲಿದೆ.

ಅನ್ಸಾರಿ ಮರಣದ ನಂತರ, ಬಾಂದಾ ಮತ್ತು ಗಾಜಿಪುರ ಪ್ರದೇಶಗಳಲ್ಲಿ ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಕಲಂ 144 ಜಾರಿಗೊಳಿಸಲಾಗಿದೆ. ಮೊರಾದಾಬಾದ್‌ನಲ್ಲಿ ಅನ್ಸಾರಿಯ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಡೆಯಲಿದೆ.

ಯಾರು ಈ ಮುಖ್ತಾರ ಅನ್ಸಾರಿ?

ಮುಖ್ತಾರ ಅನ್ಸಾರಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದನು. ಅನ್ಸಾರಿಯ ಮೇಲೆ 65 ಕ್ಕಿಂತ ಹೆಚ್ಚು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ದಾಖಲಾಗಿತ್ತು. ಭಾಜಪ ಶಾಸಕ ಕೃಷ್ಣಾನಂದ ರಾಯ್ ಅವರ ಹತ್ಯೆಯ ಆರೋಪ ಕೂಡ ಅವನ ಮೇಲಿತ್ತು. ಅವನು ಕಾರಾಗೃಹದಿಂದಲೇ ತನ್ನ ಗ್ಯಾಂಗ್ ನಡೆಸುತ್ತಿದ್ದನು. ಮುಖ್ತಾರ ಅನ್ಸಾರಿಯ ಒಬ್ಬ ಸಹೋದರ ಹಾಲಿ ಸಂಸದನಾಗಿದ್ದಾರೆ. ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರಕಾರವು ಮುಖ್ತಾರ ಅನ್ಸಾರಿಯ ಮೇಲೆ ಕ್ರಮ ಕೈಕೊಂಡು ಸುಮಾರು 605 ಕೋಟಿ ರೂಪಾಯಿಗಳ ಸಂಪತ್ತನ್ನು ವಶಪಡಿಸಿಕೊಂಡಿತ್ತು. ಹಾಗೆಯೇ ಅವನ ಅನೇಕ ಅಕ್ರಮ ವ್ಯವಹಾರಗಳನ್ನು ಸರಕಾರ ಸ್ಥಗಿತಗೊಳಿಸಿತ್ತು.