India Objects US Diplomat : ಅಮೆರಿಕಾಗೆ ಈ ಕುರಿತು ಉತ್ತರ ಕೇಳಿದ ಭಾರತ !

ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಅಮೆರಿಕ ಪ್ರತಿಕ್ರಿಯಿಸಿದ ಪ್ರಕರಣ

ನವ ದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ಕುರಿತು ಅಮೆರಿಕಾ ನೀಡಿದ ಪ್ರತಿಕ್ರಿಯೆ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯವು ಅಮೇರಿಕಾದಲ್ಲಿನ ಭಾರತದ ರಾಯಭಾರ ಕಚೇರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಗ್ಲೋರಿಯಾ ಬಾರ್ಬೆನಾ ಅವರನ್ನು ಕರೆದು ಉತ್ತರ ಕೇಳಿದೆ. ಭಾರತದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮತ್ತು ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳ ನಡುವೆ ಅಂದಾಜು 40 ನಿಮಿಷಗಳ ಕಾಲ ಈ ಬಗ್ಗೆ ಚರ್ಚೆ ನಡೆದಿದೆ.

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೌಸ್ವಾಲ್

1. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೌಸ್ವಾಲ್ ಅವರು ಬಿಡುಗಡೆ ಮಾಡಿದ ಮನವಿಯಲ್ಲಿ, ಭಾರತದ ಕೆಲವು ಕಾನೂನು ಪ್ರಕ್ರಿಯೆಗಳ ಬಗ್ಗೆ ಅಮೆರಿಕಾದ ವಿದೇಶಾಂದ ಸಚಿವಾಲಯದ ವಕ್ತಾರರು ಮಾಡಿದ ಟೀಕೆಗಳನ್ನು ನಾವು ಬಲವಾಗಿ ಆಕ್ಷೇಪಿಸುತ್ತೇವೆ. ಯಾವುದೇ ದೇಶದ ಸಾರ್ವಭೌಮತ್ವವಾಗಲಿ ಅದನ್ನು ಅನ್ಯ ದೇಶಗಳೂ ಕೂಡ ಗೌರವಿಸಬೇಕು ಎಂಬ ಅಪೇಕ್ಷೆ ನಿರೀಕ್ಷಿಸಲಾಗುತ್ತದೆ. ಪ್ರಜಾಪ್ರಭುತ್ವವನ್ನು ಹಂಚಿಕೊಂಡಿರುವ ಎರಡು ದೇಶಗಳ ನಡುವೆ ಇಂತಹ ಅಪೇಕ್ಷೆ ಇನ್ನೂ ಹೆಚ್ಚಿರುತ್ತದೆ. ಇಂತಹ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲವಾಗುವುದು ಒಂದು ಕೆಟ್ಟ ಉದಾಹರಣೆಯಾಗಿದೆ. ಭಾರತದ ಕಾನೂನು ಪ್ರಕ್ರಿಯೆಯು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಆಧರಿಸಿದೆ, ಇದು ವಸ್ತುನಿಷ್ಠ ಮತ್ತು ಸಮಯೋಚಿತ ನಿರ್ಧಾರ ತೆಗೆದುಕೊಳ್ಳಲು ಬದ್ಧವಾಗಿದೆ. ಭಾರತೀಯ ನ್ಯಾಯಾಂಗವನ್ನು ಆಕ್ಷೇಪಿಸುವುದು ಸೂಕ್ತವಲ್ಲ.

2. ‘ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನದ ವಿಷಯವನ್ನು ನಾವು ಗಮನಿಸುತ್ತಿದ್ದೇವೆ. ಕೇಜ್ರಿವಾಲ್ ಪ್ರಕರಣದಲ್ಲಿ ನ್ಯಾಯಯುತ, ಪಾರದರ್ಶಕ ಮತ್ತು ಸಮಯೋಚಿತ ಕಾನೂನು ಪ್ರಕ್ರಿಯೆಯನ್ನು ನಾವು ನಿರೀಕ್ಷಿಸುತ್ತೇವೆ” ಎಂದು ಅಮೆರಿಕಾದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿಕೆ ನೀಡಿದ್ದರು.

3. ಅಮೆರಿಕಾಕ್ಕಿಂತ ಮೊದಲು ಜರ್ಮನಿ ಕೂಡ ಈ ರೀತಿಯ ಭಾರತ ವಿರೋಧಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿತ್ತು. ಇದಕ್ಕೆ ಭಾರತವು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜರ್ಮನಿಯ ರಾಯಭಾರಿ ಜಾರ್ಜ್ ಎಂಜ್‌ವೀಲರ್ ಅವರನ್ನು ಕರೆಸಿ, ಇಂತಹ ಹೇಳಿಕೆಗಳು ನಮ್ಮ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದು ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತವೆ. ಭಾರತವು ಕಾನೂನಿನ ನಿಯಮಗಳನ್ನು ಪಾಲಿಸುವಂತಹ ಆಡಳಿತವನ್ನು ಹೊಂದಿರುವ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇತರ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಕಾನೂನು ವ್ಯವಸ್ಥೆ ಹೇಗೆ ತನ್ನ ಕಾರ್ಯ ಮಾಡುವುದೋ ಭಾರತದಲ್ಲಿಯೂ ಅದೇ ರೀತಿ ಕೇಜ್ರಿವಾಲ್ ಪ್ರಕರಣದಲ್ಲಿ ಕಾನೂನು ತನ್ನ ಕೆಲಸ ಮಾಡಲಿದೆ. ಈ ಪ್ರಕರಣದ ಬಗ್ಗೆ ಪಕ್ಷಪಾತವನ್ನು ಊಹಿಸುವುದು ಸೂಕ್ತವಲ್ಲ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಭಾರತವು ಇದೇ ರೀತಿಯ ಕ್ರಮವನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ. ಅಮೆರಿಕಾ ಭಾರತದ ನಂಬಿಕಸ್ಥ ಗೆಳೆಯನಲ್ಲ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಅಮೆರಿಕಾಗೆ ಅದರ ಇತಿ-ಮಿತಿಗಳ ಅರಿವು ಮೂಡಿಸುವುದು ನಮ್ಮ ವಿದೇಶಾಂಗ ನೀತಿಯ ದೃಷ್ಟಿಯಿಂದ ಆವಶ್ಯಕವಾಗಿದೆ !