Bhojshala Survey : ಭೋಜಶಾಲೆಯ ಸಮೀಕ್ಷೆ ಆರಂಭ !

ಸಮೀಕ್ಷೆ ಸ್ಥಗಿತಕ್ಕೆ ಆಗ್ರಹಿಸಿ ಮುಸ್ಲಿಂ ಪಕ್ಷ ಸಲ್ಲಿಸಿದ್ದ ಅರ್ಜಿಯ ತಕ್ಷಣದ ವಿಚಾರಣೆಗೆ ಸುಪ್ರೀಂಕೋರ್ಟ್ ನಿಂದ ನಕಾರ !

ನವದೆಹಲಿ – ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಭೋಜ್‌ಶಾಲೆಯಲ್ಲಿ ಪುರಾತತ್ವ ಇಲಾಖೆಯು ಸಮೀಕ್ಷೆ ಆರಂಭಿಸಿದೆ. ಸಮೀಕ್ಷೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಮುಸ್ಲಿಂ ಪಕ್ಷ ಸಲ್ಲಿಸಿರುವ ಅರ್ಜಿಯ ತಕ್ಷಣವೇ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮೌಲಾನಾ ಕಮಾಲುದ್ದೀನ್ ವೆಲ್ಫೇರ್ ಸೊಸೈಟಿಯಿಂದ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಅರ್ಜಿಯಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ವಿಭಾಗೀಯಪೀಠವು ಸಮೀಕ್ಷೆ ನಡೆಸುವಂತೆ ನೀಡಿದ ಆದೇಶಕ್ಕೆ ತಡೆ ಹೇರಲು ಕೋರಲಾಗಿದೆ.

ಹಿಂದೂ ಪಕ್ಷದ ವಕೀಲರಾದ ವಿಷ್ಣು ಶಂಕರ್ ಜೈನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ,

ನ್ಯಾಯಾಲಯದ ಆದೇಶದ ಮೇರೆಗೆ ಭಾರತೀಯ ಪುರಾತತ್ವ ಇಲಾಖೆಯು ಇಂದು (ಮಾರ್ಚ್ 22) ಬೆಳಗ್ಗೆಯಿಂದ ಸಮೀಕ್ಷೆ ಆರಂಭಿಸಿದೆ. ಮುಸ್ಲಿಂ ಪಕ್ಷವು ಸಮೀಕ್ಷೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು; ಆದರೆ ಕೂಡಲೇ ಈ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಸದ್ಯ ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುವುದಿಲ್ಲ.
ಈ ಸಮೀಕ್ಷೆಯು ಮುಂದುವರಿಯಲಿದ್ದು, ಈ ವಿವಾದದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿಂದ ಯಾವುದೇ ಹೊಸ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ. ಹೊಸ ದಿನಾಂಕ ನಿಗದಿಯಾಗುವವರೆಗೆ ಈ ಸಮೀಕ್ಷೆ ಮುಂದುವರಿಯಲಿದೆ ಎಂದವರು ತಿಳಿಸಿದರು.

ಭೋಜಶಾಲೆಯ ಸಮೀಕ್ಷೆ ಆರಂಭ

ಭಾರತೀಯ ಪುರಾತತ್ವ ಇಲಾಖೆಯ ತಂಡವು ಭೋಜಶಾಲಾ ಪ್ರದೇಶದ ಸಮೀಕ್ಷೆಯನ್ನು ಪ್ರಾರಂಭಿಸಿತು. ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸೇರಿದಂತೆ 12 ಜನರ ತಂಡವು ಬೆಳಿಗ್ಗೆ ಇಲ್ಲಿಗೆ ತಲುಪಿತು. ಮಾರ್ಚ 22ರಂದು ಎರಡು ಹಂತಗಳಲ್ಲಿ ಸಮೀಕ್ಷೆ ಕಾರ್ಯ ನಡೆದಿದೆ. ಮೊದಲ ಹಂತದ ಸಮೀಕ್ಷೆಯು ಬೆಳಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ನಡೆದಿದೆ. ಶುಕ್ರವಾರವಾಗಿದ್ದರಿಂದ ನಮಾಜ್ ನಿಮಿತ್ತ ಕೆಲಕಾಲ ಸಮೀಕ್ಷೆ ಸ್ಥಗಿತಗೊಳಿಸಲಾಗಿತ್ತು.

ಸಮೀಕ್ಷೆಯ ನಂತರ, ನಮ್ಮ ಪರವಾಗಿ ಅನೇಕ ಬಲವಾದ ಪುರಾವೆಗಳು ಸಿಗುತ್ತವೆ ! – ಭೋಜ್ ಉತ್ಸವ ಸಮಿತಿ

ಭೋಜ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಮಿತ್ ಚೌಧರಿ ಮಾತನಾಡಿ, ಭೋಜಶಾಲೆಯನ್ನು ರಾಜ ಭೋಜರು ನಿರ್ಮಿಸಿದ್ದರು. ಇದಕ್ಕೆ ಅನೇಕ ಪುರಾವೆಗಳಿವೆ, ಇಲ್ಲಿ ಹಿಂದೂ ದೇವಾಲಯವಿದೆ ಎಂಬುದು ಸ್ಪಷ್ಟವಾಗುತ್ತದೆ. ಇಲ್ಲಿ ಯಜ್ಞ ಕುಂಡವಿದೆ, ದೇವತೆಗಳ ಚಿತ್ರಗಳೂ ಇವೆ. ಆಂತರಿಕ ಸಮೀಕ್ಷೆಯ ನಂತರ ನಮಗೆ ಸಾಕಷ್ಟು ಬಲವಾದ ಪುರಾವೆಗಳನ್ನು ಸಿಗಲಿದೆ, ಇದರಿಂದ ನಮ್ಮ ಪರವಾಗಿ ನಿರ್ಣಯ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು.

60 ಕ್ಯಾಮೆರಾಗಳ ಸಹಾಯದಿಂದ ಸಮೀಕ್ಷೆಯತ್ತ ನಿಗಾ !

ದೆಹಲಿ ಮತ್ತು ಭೋಪಾಲ್‌ನಿಂದ ತಂಡವೊಂದನ್ನು ಈ ಸಮೀಕ್ಷೆಗಾಗಿ ಕರೆಯಿಸಲಾಗಿದೆ. ಸಮೀಕ್ಷೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಇಂದ್ರಜಿತ್ ಬಕಲ್ವಾರ್ ಅವರೊಂದಿಗೆ 175 ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ, 60 ಕ್ಯಾಮೆರಾಗಳ ಸಹಾಯದಿಂದ ಈ ಪ್ರದೇಶದ ನಿಗಾ ಇಡಲಾಗಿದೆ. ಧಾರ್ ಪೊಲೀಸ್ ಅಧೀಕ್ಷಕ ಮನೋಜ್ ಕುಮಾರ್ ಸಿಂಗ್ ಮಾತನಾಡಿ, ಸಮೀಕ್ಷಾ ತಂಡಕ್ಕೆ ಸರ್ವೆಗೆ ಅಗತ್ಯವಾದ ಎಲ್ಲಾ ನೆರವು ನೀಡಿದ್ದೇವೆ. ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಮೀಕ್ಷೆ ನಡೆಯುತ್ತಿದ್ದರೂ, ಸದ್ಯ ನಗರದಲ್ಲಿ ಶಾಂತಿ ನೆಲೆಸಿದೆ ಎಂದು ಹೇಳಿದ್ದಾರೆ.