ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ !
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಿ ಬಹಳ ದಿನಗಳಾಗಿವೆ; ಆದರೆ ಪಾಕಿಸ್ತಾನದ ಚುನಾವಣಾ ಪ್ರಕ್ರಿಯೆಯ ಮೇಲೆ ದೇಶದೊಳಗೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನೆಗಳನ್ನು ಮಾಡಲಾಗುತ್ತಿದೆ. ವಿಶೇಷವಾಗಿ: ದೇಶದ ಪ್ರಮುಖ ವಿರೋಧಿ ಪಕ್ಷವಾದ ‘ಪಾಕಿಸ್ತಾನ್ ತಹರೀಕ್-ಎ-ಇನ್ಸಾಫ್‘ ಚುನಾವಣಾ ಆಯೋಗವನ್ನು ಟೀಕಿಸುವ ಭರದಲ್ಲಿ ಇಡೀ ಚುನಾವಣಾ ಪ್ರಕ್ರಿಯೆಯೇ ಭ್ರಷ್ಟವಾಗಿದೆ ಎಂದು ಹೇಳಿದೆ. ಈಗ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇವರೂ ಸಹ ಈ ಅಂಶವನ್ನು ಎತ್ತಿದ್ದಾರೆ. ಜೈಲಿನಲ್ಲಿರುವ ಇಮ್ರಾನ್ ಖಾನ್, ಪಾಕಿಸ್ತಾನದಲ್ಲಿ ವಿದ್ಯುನ್ಮಾನ ಮತಯಂತ್ರ ಇದ್ದಿದ್ದರೆ(ಇವಿಎಂ), ಚುನಾವಣೆಯಲ್ಲಿ ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ. ಮತದಾನದ ಅವ್ಯವಹಾರದ ಎಲ್ಲಾ ಸಮಸ್ಯೆಗಳನ್ನು ಒಂದು ಗಂಟೆಯೊಳಗೆ ಪರಿಹರಿಸಲಾಗುತ್ತಿತ್ತು. ಪಾಕಿಸ್ತಾನದ ಚುನಾವಣಾ ಆಯೋಗ, ಕೆಲವು ರಾಜಕೀಯ ಪಕ್ಷಗಳು ಮತ್ತು ಸಂಸ್ಥೆಗಳು ದೇಶದಲ್ಲಿ ಇ.ವಿ.ಎಂ.ಗಳನ್ನು ಉಪಯೋಗಿಸುವ ಯೋಜನೆಯನ್ನು ತಳ್ಳಿಹಾಕಿವೆ.
ಜೈಲಿನಿಂದ ಸುದ್ದಿಗಾರರೊಂದಿಗೆ ಮಾತನಾಡಿದ ಇಮ್ರಾನ್ ಖಾನ್, ಸಾರ್ವತ್ರಿಕ ಚುನಾವಣೆಯಲ್ಲಿ ಜನಾದೇಶ ಕದಿಯುವವರನ್ನು ದೇಶದ್ರೋಹದ ಅಡಿಯಲ್ಲಿ ಕ್ರಮ ಜರುಗಿಸಬೇಕು ಎಂದು ಹೇಳಿದರು.