ಅಬುಧಾಬಿಯ ಸ್ವಾಮಿನಾರಾಯಣ ದೇವಸ್ಥಾನದಲ್ಲೂ ಡ್ರೆಸ್‌ಕೋಡ್ ಜಾರಿ !

(ದೇವಾಲಯವನ್ನು ಪ್ರವೇಶಿಸುವಾಗ ಧರಿಸಬೇಕಾದ ವಸ್ತ್ರಗಳಿಗೆ ಸಂಬಂಧಿಸಿದ ನಿಯಮವೇ ಡ್ರೆಸ್‌ಕೋಡ್)

ಅಬುಧಾಬಿ (ಯುನೈಟೆಡ್ ಅರಬ್ ಎಮಿರೇಟ್ಸ್) – ಸ್ವಾಮಿನಾರಾಯಣ ದೇವಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 14 ರಂದು ಉದ್ಘಾಟಿಸಿದ ನಂತರ ಮಾರ್ಚ್ 1 ರಿಂದ ಭಕ್ತರಿಗಾಗಿ ತೆರೆಯಲಾಗಿದೆ. ಇದರೊಂದಿಗೆ ಈ ದೇವಸ್ಥಾನದಲ್ಲಿ ಡ್ರೆಸ್‌ಕೋಡ್ ಜಾರಿ ಮಾಡಲಾಗಿದೆ.

1. ದೇವಾಲಯವನ್ನು ಪ್ರವೇಶಿಸಲು ಯೋಗ್ಯವಾದ ಉಡುಗೆ ಅವಶ್ಯತೆ ಇದೆ. ಭಕ್ತರು ಭುಜ ಮತ್ತು ಮೊಣಕಾಲುಗಳನ್ನು ಮುಚ್ಚುವ ಬಟ್ಟೆಗಳನ್ನು ಧರಿಸಿ ಬರಬೇಕು, ಬಟ್ಟೆಗಳ ಮೇಲೆ ಆಕ್ಷೇಪಾರ್ಹ ವಿನ್ಯಾಸಗಳು ಅಥವಾ ಬರಹಗಳನ್ನು ಇರಬಾರದು ಮತ್ತು ಪರಿಸರದಲ್ಲಿ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಪಾರದರ್ಶಕ ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು ಎಂದು ಭಕ್ತರಿಗೆ ಹೇಳಲಾಗಿದೆ. ಭಕ್ತರು ಮಾರ್ಗಸೂಚಿಗಳನ್ನು ಅನುಸರಿಸದಿದ್ದಲ್ಲಿ ಮತ್ತು ಸಿಬ್ಬಂದಿಯು ಒಬ್ಬರ ಉಡುಗೆಯನ್ನು ಅನುಚಿತವೆಂದು ಪರಿಗಣಿಸಿದರೆ, ಅವರಿಗೆ ಪ್ರವೇಶವನ್ನು ನಿರಾಕರಿಸಬಹುದು.

2. ದೇವಸ್ಥಾನದ ಒಳಗೆ ಮೊಬೈಲ್ ಫೋನ್, ಆಯುಧಗಳು, ಹರಿತವಾದ ವಸ್ತುಗಳು, ಲೈಟರ್ ಮತ್ತು ಕಡ್ಡಿ ಪೆಟ್ಟಿಗೆಗಳನ್ನು ಒಯ್ಯುವುದು ನಿಷೇಧಿಸಲಾಗಿದೆ. ಪಾರ್ಕಿಂಗ್ ಸೇರಿದಂತೆ ಇಡೀ ದೇವಾಲಯದ ಪ್ರದೇಶದಲ್ಲಿ ಧೂಮಪಾನ, ಮದ್ಯಪಾನ ಮತ್ತು ತಂಬಾಕು ಉತ್ಪನ್ನಗಳ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.