ರಾಜಸ್ಥಾನದಲ್ಲಿ ೨ ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರಕಾರಿ ಕೆಲಸ ಸಿಗುವುದಿಲ್ಲ !

ಸರ್ವೋಚ್ಚ ನ್ಯಾಯಾಲಯದಿಂದಲೂ ಕಾಯಿದೆಗೆ ಅನುಮೋದನೆ ನೀಡಿದೆ

ನವದೆಹಲಿ – ರಾಜಸ್ಥಾನ ಸರಕಾರದ ೧೯೮೯ರ ಕಾನೂನಿನಲ್ಲಿ ೨ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರಿ ನೌಕರಿ ಮಾಡಲು ಸಾಧ್ಯವಿಲ್ಲ, ಈ ಕಾನೂನಿಗೆ ಈಗ ಸರ್ವೋಚ್ಚ ನ್ಯಾಯಾಲಯ ಅನುಮೋದನೆ ನೀಡಿದೆ. ಹಾಗಾಗಿ ಈಗ ರಾಜ್ಯದಲ್ಲಿ ೨ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರಕಾರಿ ಕೆಲಸ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ರಾಜಸ್ಥಾನ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಮಾಜಿ ಯೋಧ ರಾಮಜಿ ಲಾಲ್ ಜಾಟ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅಕ್ಟೋಬರ್ 12, ೨೦೨೨ ರ ರಾಜಸ್ಥಾನ ಹೈಕೋರ್ಟ್‌ನ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ ಮತ್ತು ರಾಜಸ್ಥಾನ ಸರಕಾರದ ನಿಯಮವು ನೀತಿಯ ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಹೇಳಿದೆ.

೨೦೧೭ ರಲ್ಲಿ ನಿವೃತ್ತರಾದ ಮಾಜಿ ಸೈನಿಕ ರಾಮಜಿ ಲಾಲ್ ಜಾಟ್ ಇವರು ೨೦೧೮ ರಲ್ಲಿ ರಾಜಸ್ಥಾನ ಪೊಲೀಸನಲ್ಲಿ ಕಾನ್ಸ್‌ಟೇಬಲ್ ಆಗಿ ಸೇರಲು ಪ್ರಯತ್ನಿಸಿದರು. ರಾಜಸ್ಥಾನ ಪೊಲೀಸ್ ಅಧೀನ ಸೇವಾ ನಿಯಮ ೧೯೮೯ ರ ನಿಯಮ ೨೪ (೪) ಅನ್ನು ಉಲ್ಲೇಖಿಸಿ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಈ ನಿಯಮದ ಪ್ರಕಾರ, ಜೂನ್ ೧, ೨೦೦೨ ರ ನಂತರ ಜನಿಸಿದ ೨ ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಯನ್ನು ಉದ್ಯೋಗದಿಂದ ನಿರ್ಬಂಧಿಸಲಾಗಿದೆ. ಈ ನಿಯಮದ ವಿರುದ್ಧ ಯುಕ್ತಿವಾದ ಮಂಡಿಸಲು ಜಾಟ್ ಮೊದಲು ರಾಜಸ್ಥಾನ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು ಮತ್ತು ನಂತರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.