ಹಿಂದೂ ಪೆಸಿಫಿಕ್ ಮಹಾಸಾಗರ ಪ್ರದೇಶವು ಹೆಚ್ಚು ಸುರಕ್ಷಿತ ಮತ್ತು ಸಮೃದ್ಧವಾಗಿದೆ ! – ಅಮೇರಿಕಾ

ವಾಷಿಂಗ್ಟನ್ – ಹಿಂದೂ ಪೆಸಿಫಿಕ್ ಮಹಾಸಾಗರದ ಕಾರ್ಯತಂತ್ರದಿಂದಾಗಿ ಹಿಂದೂ ಪೆಸಿಫಿಕ್ ಸಾಗರ ಪ್ರದೇಶವು ಹೆಚ್ಚು ಸುರಕ್ಷಿತ ಮತ್ತು ಸಮೃದ್ಧವಾಗಿದೆಯೆಂದು ಅಮೇರಿಕಾ ಹೇಳಿದೆ. ಅಮೇರಿಕಾದ ಹಿಂದೂ – ಪೆಸಿಫಿಕ್ ಮಹಾ ಸಾಗರ ಕಾರ್ಯತಂತ್ರ ಜಾರಿಗೆ ಬಂದು ಎರಡು ವರ್ಷಗಳಾಗಿವೆ. ಈ ನಿಮಿತ್ತ, ಅಮೇರಿಕಾದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಆಡ್ರಿಯನ ವ್ಯಾಟ್ಸನ್ ಇವರು ಶ್ವೇತಭವನದಲ್ಲಿ ಪ್ರಸಾರ ಮಾಧ್ಯಮಗಳೊಂದಿಗೆ ಸಂವಾದವನ್ನು ನಡೆಸಿದರು. ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಗಳು ಅಭೂತಪೂರ್ವ ರೀತಿಯಲ್ಲಿ ಪ್ರಗತಿಯಲ್ಲಿವೆ ಎಂದು ಅಮೇರಿಕಾ ಹೇಳಿದೆ.

ರಾಷ್ಟ್ರಾಧ್ಯಕ್ಷ ಬೈಡೆನ್ ಅವರ ನಾಯಕತ್ವದ ಪರಿಣಾಮ

ಪ್ರಸಾರ ಮಾಧ್ಯಮಗಳೊಂದಿಗೆ ಸಂವಾದ ನಡೆಸುವಾಗ ಆಂಡಿಯನ ವ್ಯಾಟ್ಸನ್ ಇವರು, ಅಮೇರಿಕಾ ಹಿಂದೂ-ಪೆಸಿಫಿಕ್ ಮಹಾಸಾಗರ ಪ್ರದೇಶದಲ್ಲಿ ಹಿಂದೆಂದೂ ಬಲಿಷ್ಠವಾಗಿರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ, ಅಮೇರಿಕಾ ಹಿಂದೂ-ಪೆಸಿಫಿಕ್ ಮಹಾಸಾಗರದ ಪ್ರದೇಶವನ್ನು ಸಮೃದ್ಧ, ಸುರಕ್ಷಿತ ಮತ್ತು ಸ್ವಾವಲಂಬಿಯಾಗಿಸುವಲ್ಲಿ ಐತಿಹಾಸಿಕ ಪ್ರಗತಿಯನ್ನು ಸಾಧಿಸಿದೆ. ಇದಕ್ಕಾಗಿ ಅಧ್ಯಕ್ಷ ಬೈಡೆನ ಅವರ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದರು. ವ್ಯಾಟ್ಸನ್ ಮಾತನಾಡುತ್ತಾ, “ನಾವು ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಆಸ್ಟ್ರೇಲಿಯಾ, ಫಿಲಿಪೈನ್ಸ್, ಥೈಲ್ಯಾಂಡ್ ಜೊತೆ ಸಂಬಂಧವನ್ನು ಬಲಪಡಿಸಿದ್ದೇವೆ. ವಿಯೆಟ್ನಾಂ ಮತ್ತು ಇಂಡೋನೇಷ್ಯಾ ಜೊತೆಗಿನ ದ್ವಿಪಕ್ಷೀಯ ಸಂಬಂಧವೂ ಸುಧಾರಿಸಿದೆ. ಭಾರತದೊಂದಿಗಿನ ಸಂಬಂಧಗಳು ಅಭೂತಪೂರ್ವ ರೀತಿಯಲ್ಲಿ ವಿಸ್ತರಿಸುತ್ತಿವೆ ಎಂದು ಹೇಳಿದರು.

ಅಮೇರಿಕಾದ ಹಿಂದೂ-ಪೆಸಿಫಿಕ್ ಮಹಾಸಾಗರದ ಕಾರ್ಯತಂತ್ರ ಯಾವುದು ?

ಹಿಂದೂ-ಪೆಸಿಫಿಕ್ ಮಹಾಸಾಗರದ ರಣತಂತ್ರದ ಅಡಿಯಲ್ಲಿ, ಅಮೇರಿಕಾ ಹಿಂದೂ ಪೆಸಿಫಿಕ್ ಮಹಾಸಾಗರ ಪ್ರದೇಶದಲ್ಲಿ ವಿವಿಧ ದೇಶಗಳ ನಡುವಿನ ಭದ್ರತಾ ಸಹಕಾರವನ್ನು ವಿಸ್ತರಿಸುತ್ತಿದೆ. ವಿವಿಧ ದೇಶಗಳಿಗೆ ಸೇನಾ ಪಡೆಗಳನ್ನು ಪೂರೈಸಲಾಗುತ್ತಿದೆ. ಇದರೊಂದಿಗೆ ಅಮೇರಿಕಾ ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿದೆ. ಚೀನಾವನ್ನು ಎದುರಿಸಲು ಮತ್ತು ಹಿಂದೂ-ಪ್ರಶಾಂತ ಮಹಾಸಾಗರವನ್ನು ಮುಕ್ತ ಮತ್ತು ಸಮೃದ್ಧವಾಗಿಡಲು ಒಂದು ಮಾರ್ಗವೆಂದು ಅಮೇರಿಕಾದ ಕಾರ್ಯತಂತ್ರವನ್ನು ನೋಡಲಾಗುತ್ತಿದೆ. ‘ಕ್ವಾಡ್’ ನಂತರ, ಅಮೇರಿಕಾವು ಈಗ ಜಪಾನ ಮತ್ತು ದಕ್ಷಿಣ ಕೊರಿಯಾದೊಂದಿಗೆ ಸೈನ್ಯ ಮೈತ್ರಿ ಮಾಡಿಕೊಳ್ಳುವ ಸಿದ್ಧತೆಯಲ್ಲಿದೆ. ಅಮೇರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ನಡುವೆಯೂ ಮೈತ್ರಿಗೆ ಪ್ರಯತ್ನಿಸುತ್ತಿದೆ ಎಂದು ಹೇಳಿದರು.