ಅಮೇರಿಕಾದಲ್ಲಿ ಪ್ರತಿದಿನ ಕನಿಷ್ಟ ಪಕ್ಷ ಒಬ್ಬ ಭಾರತೀಯನ ಸಾವನ್ನಪ್ಪುತ್ತಿದ್ದಾನೆ !
ವಾಷಿಂಗ್ಟನ್ (ಅಮೇರಿಕಾ) – ನಾವು ಅತಿಶಯೋಕ್ತಿ ಮಾಡುತ್ತಿಲ್ಲ. ಆದರೆ ಅಮೇರಿಕಾದಲ್ಲಿ ಪ್ರತಿದಿನ ಅಂದಾಜು ಒಬ್ಬ ಭಾರತೀಯನು ಸಾವನ್ನಪ್ಪುವುದು ಸತ್ಯ ಸಂಗತಿಯಾಗಿದೆ. ಮೃತರಲ್ಲಿ ಹೆಚ್ಚಿನವರು ಇತ್ತೀಚೆಗೆ ಭಾರತದಿಂದ ಅಮೇರಿಕಾಗೆ ಬಂದಿರುವ ವಿದ್ಯಾರ್ಥಿಗಳು ಅಥವಾ ನೌಕರರು ಆಗಿರುತ್ತಾರೆ, ಎಂಬ ಹೇಳಿಕೆಯನ್ನು ಅಮೇರಿಕಾದಲ್ಲಿನ `ಟೀಮ್ ಎಡ್’ ಎಂಬ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕರಾದ ಮೋಹನ ನನ್ನಾಪಾನೆನಿಯವರು ನೀಡಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಅಮೇರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಆಕ್ರಮಣಗಳಾಗಿರುವ, ಅವರ ಹತ್ಯೆಯಾಗಿರುವ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ನನ್ನಾಪಾನೆನಿಯವರು ಮಾತು ಮುಂದುವರೆಸುತ್ತಾ,
1. ಭಾರತದಲ್ಲಿನ ಅನೇಕ ವಿದ್ಯಾರ್ಥಿಗಳು ಇತ್ತೀಚೆಗೆ ಅಡಚಣೆಯಲ್ಲಿ ಸಿಲುಕಿದ್ದರು ಹಾಗೂ ದುರ್ದೈವದಿಂದ ಹಲವರು ಮೃತಪಟ್ಟಿದ್ದಾರೆ, ಇದು ಅತ್ಯಂತ ದುಃಖಕರವಾಗಿದೆ. ಇದು ಇತ್ತೀಚೆಗೆ ನಡೆಯುತ್ತಿದೆ ಎಂದೇನೂ ಇಲ್ಲ. ಇತಿಹಾಸವನ್ನು ನೋಡಿದರೆ ಕಳೆದ ಅನೇಕ ವರ್ಷಗಳಿಂದ ಇದೇ ನಡೆಯುತ್ತಿದೆ. ನಾವು 2001 ರಿಂದ ಜನರಿಗೆ ಸಹಾಯ ಮಾಡುತ್ತಿದ್ದೇವೆ.
2. ಭಾರತೀಯ ವಿದ್ಯಾರ್ಥಿಗಳು ವಾಹನ ಅಪಘಾತದಲ್ಲಿ ಅಥವಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಅಮೇರಿಕಾದಲ್ಲಿ ಅಮಲು ಪದಾರ್ಥಗಳ ಸೇವೆನೆಯು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ದುರ್ದೈವದಿಂದ ಭಾರತೀಯ ವಿದ್ಯಾರ್ಥಿಗಳು ಅಮಲು ಪದಾರ್ಥಗಳ ಸೇವನೆಯಿಂದ ಸಾವನ್ನಪ್ಪಿರುವ ಘಟನೆಗಳು ನಡೆದಿವೆ.
3. ಕುಟುಂಬದವರಿಗೆ ಹಾಗೂ ವ್ಯಕ್ತಿಗಳಿಗೆ ಗಂಭೀರ ಪರಿಸ್ಥಿತಿಗಳನ್ನು ಎದುರಿಸಲು ಸಹಾಯ ಮಾಡಲು ಸಂಸ್ಥೆಯು ಅವಶ್ಯಕವಿರುವುದನ್ನು ಮಾಡುತ್ತದೆ. ಇದರಲ್ಲಿ ಮೃತದೇಹವನ್ನು ಭಾರತಕ್ಕೆ ಒಯ್ಯಲು ಸಹಾಯ ಮಾಡುವುದು, ಸ್ಥಳೀಯ ಮಟ್ಟದಲ್ಲಿ ಅಂತ್ಯಕ್ರಿಯೆ ಮಾಡುವುದು ಅಥವಾ ಆಸ್ಪತ್ರೆಯಲ್ಲಿ ಸಹಾಯ ಮಾಡುವುದೂ ಸೇರಿದೆ. ಕಳೆದ ಕೆಲವು ವಾರಗಳಿಂದ ಅಮೇರಿಕಾದಲ್ಲಿ ಸತತವಾಗಿ ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿರುವುದರಿಂದ ಚಿಂತೆಯಾಗುತ್ತಿದೆ.
4. ನಮ್ಮ ಸಂಸ್ಥೆಯು ಭಾರತೀಯ ವಿದ್ಯಾರ್ಥಿಗಳ ಸಾವಿನ ಪ್ರಕರಣಗಳಲ್ಲಿ ಕೆಲಸ ಮಾಡುತ್ತಿದೆ. ವಿವಿಧ ಕಾರಣಗಳಿಂದಾಗಿ ಅನೇಕ ಯುವ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ನೋಡಿದಾಗ ನನಗೆ ಬಹಳ ಕೆಟ್ಟದೆನಿಸುತ್ತದೆ. ಪಾಲಕರು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಲು ಬಹಳ ಹಣ ಖರ್ಚು ಮಾಡುತ್ತಾರೆ; ಆದರೆ ಉದ್ಯೋಗದ ಅವಕಾಶಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಒತ್ತಡ ನಿರ್ಮಾಣವಾಗುತ್ತದೆ. ಅವರಲ್ಲಿ ಕೆಲವರು ಆತ್ಮಹತ್ಯೆಯ ತಪ್ಪು ಹೆಜ್ಜೆಯನ್ನಿಡುತ್ತಾರೆ, ಎಂದು ಹೇಳಿದರು.