ಮಾಲದೀವನಲ್ಲಿ ಭಾರತೀಯ ಪ್ರವಾಸಿಗರಲ್ಲಿ ಇಳಿಕೆ ಹಾಗೂ ಚೀನಿ ಪ್ರವಾಸಿಗರಲ್ಲಿ ಏರಿಕೆ !

ಮಾಲೆ(ಮಾಲದೀವ) – ಭಾರತ ಮತ್ತು ಮಾಲದೀವನ ನಡುವಿನ ವಿವಾದದ ಹಿನ್ನೆಲೆಯಲ್ಲಿ ಭಾರತದಿಂದ ಮಾಲದೀವಗೆ ಹೋಗುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ, ಆದರೆ ಮತ್ತೊಂದೆಡೆ ಚೀನಾದ ಪ್ರವಾಸಿಗರ ಸಂಖ್ಯೆಯು ಗಣನೀಯವಾಗಿ ಏರಿದೆ.

1. ಮಾಲದೀವನ ಪ್ರವಾಸೋದ್ಯಮ ಸಚಿವಾಲಯವು ಪ್ರಕಟಿಸಿದ ಪ್ರವಾಸಿಗಳ ಅಂಕಿ ಅಂಶಗಳ ಅನುಸಾರ, ಫೆಬ್ರವರಿ 4ರ ವರೆಗೆ, ಮಾಲದೀವಗೆ ಗರಿಷ್ಠ ಸಂಖ್ಯೆಯಲ್ಲಿ ಅಂದರೆ 23 ಸಾವಿರದ 972 ಪ್ರವಾಸಿಗರು ಚೀನಾದಿಂದ ಬಂದಿದ್ದರು. ಈ ವರ್ಷ ಕೇವಲ 16 ಸಾವಿರದ 536 ಭಾರತೀಯರು ಮಾಲದೀವಗೆ ಭೇಟಿ ನೀಡಿದ್ದಾರೆ. ಇಲ್ಲಿ ಫೆಬ್ರುವರಿ ವರೆಗೆ ಒಟ್ಟು ಪ್ರವಾಸಿಗರಲ್ಲಿ ಭಾರತದ ಪಾಲು ಶೇ.7.7 ರಷ್ಟಿದ್ದರೆ, ಚೀನಾದ ಪಾಲು ಶೇ.11.2 ರಷ್ಟಿದೆ.

2. ಕಳೆದ ತಿಂಗಳು ಮಾಲದೀವನ ಅಧ್ಯಕ್ಷರಾದ ಮೊಹಮ್ಮದ ಮುಯಿಜ್ಜುರವರು ಚೀನಾದ ಪ್ರವಾಸ ಮಾಡಿದ್ದರು. ಅಲ್ಲಿ ಅವರು ಚೀನಾದ ರಾಷ್ಟ್ರಾಧ್ಯಕ್ಷರಾದ ಶಿ ಜಿನ್‌ಪಿಂಗರವರಿಗೆ `ತಮ್ಮ ದೇಶದ ನಾಗರಿಕರಿಗೆ ಪ್ರವಾಸಕ್ಕಾಗಿ ಮಾಲದೀವಗೆ ಭೇಟಿ ನೀಡುವಂತೆ ಮನವಿ ಮಾಡಿ’ ಎಂದು ವಿನಂತಿಸಿದ್ದರು. ಇದರಿಂದಲೂ ಚೀನಾ ಪ್ರವಾಸಿಗರ ಹೆಚ್ಚಳವಾಗಿದೆಯೆಂದು ಹೇಳಲಾಗುತ್ತಿದೆ.

ಮೇ 10ನೇ ತಾರೀಖಿನೊಳಗೆ ಭಾರತೀಯ ಸೈನಿಕರು ಹಿಂದಕ್ಕೆ ಹೋಗುತ್ತಾರೆ ! – ರಾಷ್ಟ್ರಪತಿ ಮುಯಿಜ್ಜು ರವರ ಹೇಳಿಕೆ

ಫೆಬ್ರವರಿ 5 ರಂದು ಮಾಲದೀವನ ರಾಷ್ಟ್ರಪತಿಗಳು ಸಂಸತ್ತಿನಲ್ಲಿ ತಮ್ಮ ಮೊದಲ ಭಾಷಣದಲ್ಲಿ, ಭಾರತದೊಂದಿಗಿನ ಚರ್ಚೆಯಲ್ಲಿ ಭಾರತದ ಎಲ್ಲ 80 ಭಾರತೀಯ ಸೈನಿಕರು ಮೇ 10 ರೊಳಗೆ ಭಾರತಕ್ಕೆ ಮರಳಲಿದ್ದಾರೆ. ಮಾಲದೀವನಲ್ಲಿ 3 ವಾಯುಯಾನ ಪ್ಲಾಟಫಾರ್ಮಗಳಿವೆ (ವಿಮಾನಗಳಿಗೆ ಸಂಬಂಧಿತ ಉಪಕರಣಗಳು ಮತ್ತು ಸಾಮಗ್ರಿಗಳ ಸಂದರ್ಭದಲ್ಲಿನ ವ್ಯವಸ್ಥೆಗಳು). ಇವುಗಳಲ್ಲಿ ಒಂದರಲ್ಲಿ ಕಾರ್ಯನಿರತರಾಗಿರುವ ಸೈನಿಕರು ಮಾರ್ಚ 10 ರವರೆಗೆ ಭಾರತಕ್ಕೆ ಮರಳುತ್ತಾರೆ. ಅನಂತರ ಇನ್ನುಳಿದ 2 ಪ್ಲಾಟಫಾರ್ಮನಲ್ಲಿ ಕಾರ್ಯನಿರತವಾಗಿರುವ ಭಾರತೀಯ ಸೈನಿಕರು ಮೇ 10ರ ವರೆಗೆ ಭಾರತಕ್ಕೆ ಮರಳುತ್ತಾರೆ, ಎಂದು ಹೇಳಿದರು.

ಮುಯಿಜ್ಜು ತಮ್ಮ ಮಾತನ್ನು ಮುಂದುವರಿಸಿ, ಮಾಲದೀವ ಭಾರತದೊಂದಿಗಿನ ಜಲ ಸಂಶೋಧನೆಯ ಒಪ್ಪಂದವನ್ನೂ ನವೀಕರಿಸುವುದಿಲ್ಲ. ನಾವು ಯಾವುದೇ ದೇಶಕ್ಕೂ ನಮ್ಮ ಸಾರ್ವಭೌಮತ್ವದಲ್ಲಿ ಹಸ್ತಕ್ಷೇಪ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಮಾಲದೀವ ಆತ್ಮಹತ್ಯೆಯ ದಿಶೆಯಲ್ಲಿ ಸಾಗುತ್ತಿರುವಾಗ, ಭಾರತಕ್ಕೂ ಅದರಿಂದ ಬಹುದೊಡ್ಡ ಅಪಾಯವಿದೆ, ಆದುದರಿಂದ ಸಕಾಲದಲ್ಲಿಯೇ ಭಾರತವು ಈ ಪರಿಸ್ಥಿತಿಯನ್ನು ನಿಯಂತ್ರಿಸಿ ಸೂಕ್ತ ಕೃತಿಯ ಮೂಲಕ ಮಾಲದೀವ ಚೀನಾದ ಹಿಡಿತಕ್ಕೆ ಬಾರದಂತೆ ತಡೆಯಬೇಕು.