ಜ್ಞಾನವಾಪಿಯ ‘ವ್ಯಾಸ’ ನೆಲಮಾಳಿಗೆಯಲ್ಲಿ ರಾತ್ರಿಯಿಂದಲೇ ಪೂಜೆಗೆ ಪ್ರಾರಂಭ!

ವಾರಣಾಸಿ (ಉತ್ತರ ಪ್ರದೇಶ) – ಇಲ್ಲಿನ ಜ್ಞಾನವಾಪಿ ಪರಿಸರದ ವ್ಯಾಸ ನೆಲಮಾಳಿಗೆಯಲ್ಲಿ ಜಿಲ್ಲಾ ನ್ಯಾಯಾಲಯದ ಆದೇಶದ ಬಳಿಕ 31 ವರ್ಷಗಳ ನಂತರ ಪೂಜೆಯನ್ನು ಪ್ರಾರಂಭಿಸಲಾಯಿತು. ಜನವರಿ 31 ರಂದು ಸಂಜೆ 4 ಗಂಟೆ ಸುಮಾರಿಗೆ ನ್ಯಾಯಾಲಯವು ಪೂಜೆ ಸಲ್ಲಿಸಬಹುದೆಂದು ಆದೇಶಿಸಿದ ನಂತರ, ಜಿಲ್ಲಾಧಿಕಾರಿಗಳು ಪೂಜೆಗೆ ವ್ಯವಸ್ಥೆಯನ್ನು ಮಾಡಿಕೊಟ್ಟ ಬಳಿಕ ರಾತ್ರಿ 11 ಗಂಟೆಯ ಹೊತ್ತಿಗೆ ಪೂಜೆ ಮತ್ತು ಶಯನ ಆರತಿ ಮಾಡಲಾಯಿತು. ನೆಲಮಾಳಿಗೆಯಲ್ಲಿ ಮೂರ್ತಿಯನ್ನಿಟ್ಟು ಪೂಜಿಸಲಾಯಿತು. ದೀಪ ಬೆಳಗಿಸಿ ಶ್ರೀ ಗಣೇಶ ಮತ್ತು ಲಕ್ಷ್ಮೀದೇವಿಯ ಆರತಿಯನ್ನು ಮಾಡಲಾಯಿತು. ನೆಲಮಾಳಿಗೆಯ ಗೋಡೆಗಳ ಮೇಲಿನ ತ್ರಿಶೂಲ ಮತ್ತಿತರ ಧಾರ್ಮಿಕ ಚಿಹ್ನೆಗಳಿಗೂ ಪೂಜೆಯನ್ನು ಮಾಡಲಾಯಿತು. ನೆಲಮಾಳಿಗೆಯ ಮಾರ್ಗದಲ್ಲಿದ್ದ ಅಡೆತಡೆ ಮತ್ತು ಕಬ್ಬಿಣದ ಗೂಟಗಳನ್ನು ತೆಗೆಯಲಾಗಿದೆ.

ಈ ಸಂದರ್ಭದಲ್ಲಿ, ಹಿಂದೂ ಪಕ್ಷದ ಪರ ನ್ಯಾಯವಾದಿ ಮದನ ಮೋಹನ ಯಾದವ ಇವರು ಮಾತನಾಡಿ, ಈ ನೆಲಮಾಳಿಗೆಯಲ್ಲಿರುವ ಮೂರ್ತಿಗಳ ಪೂಜೆ ಮತ್ತು ಆರತಿ ಮಾಡುವ ವ್ಯವಸ್ಥೆಯನ್ನು ಮಾಡಲು ಆಡಳಿತಕ್ಕೆ ನ್ಯಾಯಾಲಯವು 7 ದಿನಗಳ ಕಾಲಾವಕಾಶವನ್ನು ನೀಡಿತ್ತು; ಆದರೆ ಕೆಲವೇ ಗಂಟೆಗಳಲ್ಲಿಯೇ ಆಡಳಿತವು ವ್ಯವಸ್ಥೆಯನ್ನು ಮಾಡಿ ಕೊಟ್ಟಬಳಿಕ ಪೂಜೆ ಮತ್ತು ಆರತಿಯನ್ನು ಮಾಡಲಾಯಿತು ಎಂದು ಹೇಳಿದರು.

ಹಿಂದೂ ಪಕ್ಷದವರು ದಿನಕ್ಕೆ 5 ಬಾರಿ ಆರತಿ ಮಾಡುವವರಿದ್ದಾರೆ!

ಸಧ್ಯಕ್ಕೆ ಇಲ್ಲಿ ಸಾಮಾನ್ಯ ಜನರಿಗೆ ದರ್ಶನ ಮತ್ತು ಪೂಜೆ ಮಾಡಲು ಪ್ರವೇಶ / ಅನುಮತಿ ನೀಡಲಾಗಿರುವುದಿಲ್ಲ. ಹಿಂದೂ ಪಕ್ಷದವರಿಗೆ ಮಾತ್ರ ಸಧ್ಯಕ್ಕೆ ಪೂಜೆ ಮತ್ತು ಆರತಿ ಮಾಡುವ ಅನುಮತಿ ಆಡಳಿತದ ವತಿಯಿಂದ ನೀಡಲಾಗಿದೆ.

ರಾತ್ರೋರಾತ್ರಿ ಈ ರೀತಿ ವ್ಯವಸ್ಥೆಗಳನ್ನು ಮಾಡಲಾಯಿತು!

ವಾರಣಾಸಿ ಜಿಲ್ಲಾ ನ್ಯಾಯಾಲಯವು ಜನವರಿ 31 ರಂದು ಸಂಜೆ 4 ಗಂಟೆಗೆ ಪೂಜೆ ಮಾಡಬಹುದೆಂದು ಆದೇಶ ನೀಡಿತ್ತು. ತದನಂತರ ಜಿಲ್ಲಾಧಿಕಾರಿ ಎಸ್. ರಾಜಲಿಂಗಮ್ ಇವರು ಸಾಯಂಕಾಲ 7 ಗಂಟೆಗೆ ಪೊಲೀಸ ಮತ್ತು ಆಡಳಿತಾಧಿಕಾರಿಗಳೊಂದಿಗೆ ಕಾಶಿ ವಿಶ್ವನಾಥ ಧಾಮಕ್ಕೆ ತಲುಪಿದರು. ಜಿಲ್ಲಾಧಿಕಾರಿಗಳು ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಯವರು ಮಂದಿರದ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದರು. ರಾತ್ರಿ 8 ಗಂಟೆಗೆ ಅಧಿಕಾರಿಗಳು ಜ್ಞಾನವಾಪಿಯ ನೆಲಮಾಳಿಗೆಯನ್ನು ಹೊರಗಿನಿಂದ ಪರಿಶೀಲಿಸಿದರು. ರಾತ್ರಿ 9 ಗಂಟೆಗೆ ಕಾಶಿ ವಿಶ್ವನಾಥ ಮಂದಿರದಲ್ಲಿ ದರ್ಶನಕ್ಕೆ ಬರುತ್ತಿದ್ದ ಜನರ ಗದ್ದಲ ಕಡಿಮೆಯಾದ ನಂತರ ಆಡಳಿತ ಮಂಡಳಿ ಗೇಟ್ ಸಂಖ್ಯೆ 4 ಮೂಲಕ ಜನರ ಪ್ರವೇಶವನ್ನು ಮುಚ್ಚಿತು. ಬಿಗಿಯಾದ ಭದ್ರತಾ ವ್ಯವಸ್ಥೆಯಲ್ಲಿ 9.30 ಗಂಟೆಯ ಹೊತ್ತಿಗೆ ವಿಶ್ವನಾಥ ದೇವಸ್ಥಾನದ ಪೂರ್ವ ದಿಕ್ಕಿನ ತಡೆಗೋಡೆಗಳನ್ನು ತೆಗೆಯುವ ಕಾರ್ಯ ಆರಂಭವಾಯಿತು. ಒಂದು ಗಂಟೆಯೊಳಗೆ ಎಲ್ಲಾ ತಡೆಗೋಡೆಗಳನ್ನು ತೆಗೆಯಲಾಯಿತು. ತದನಂತರ ಕಾಶಿ ವಿಶ್ವನಾಥ ಟ್ರಸ್ಟ್ ನ ನೌಕರರು ವ್ಯಾಸ ನೆಲಮಾಳಿಗೆಯನ್ನು ಸ್ವಚ್ಛಗೊಳಿಸಿದರು. ಟ್ರಸ್ಟ ವತಿಯಿಂದ ಪೂಜೆಯ ಸಾಮಗ್ರಿಗಳನ್ನು ನೆಲಮಾಳಿಗೆಗೆ ತರಲಾಯಿತು. ಟ್ರಸ್ಟನ 5 ಪೂಜಾರಿಗಳನ್ನು ಕರೆಸಲಾಯಿತು. ತದನಂತರ ಪ್ರಾರ್ಥನೆಯನ್ನು ಮಾಡಲಾಯಿತು. ಪೂಜೆಯ ಸಮಯದಲ್ಲಿ ವಾರಣಾಸಿಯ ಆಯುಕ್ತರು, ಕಾಶಿ ವಿಶ್ವನಾಥ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಆಚಾರ್ಯ ಗಣೇಶ್ವರ ಶಾಸ್ತ್ರಿ ದ್ರಾವಿಡ ಮತ್ತು ಪಂಡಿತ್ ಓಂಪ್ರಕಾಶ್ ಮಿಶ್ರಾ ಇವರು ನೆಲಮಾಳಿಗೆಯಲ್ಲಿ ಉಪಸ್ಥಿತರಿದ್ದರು. ಶ್ರೀ. ಗಣೇಶ್ವರ ಶಾಸ್ತ್ರಿ ದ್ರಾವಿಡ ಇವರ ನೇತೃತ್ವದಲ್ಲಿ ವಿಶ್ವನಾಥ ದೇವಸ್ಥಾನದ ಅರ್ಚಕ ಓಂಪ್ರಕಾಶ ಮಿಶ್ರಾ ಇವರು ಪೂಜೆ ನೆರವೇರಿಸಿದರು. ಓಂಪ್ರಕಾಶ ಮಿಶ್ರಾ ಅವರು ಕಾಶಿ ವಿಶ್ವನಾಥ ದೇವಸ್ಥಾನದ ಗರ್ಭಗುಡಿಯ ಅರ್ಚಕರಾಗಿದ್ದಾರೆ. ಪೂಜೆಯ ನಂತರ ಕೆಲವು ಜನರಿಗೆ ಚರಣಾಮೃತ, ಪ್ರಸಾದವನ್ನು ನೀಡಲಾಯಿತು. ಆಚಾರ್ಯ ಗಣೇಶ್ವರ ಶಾಸ್ತ್ರಿ ದ್ರಾವಿಡ ಇವರು ಕಲಶದ ಸ್ಥಾಪನೆ ಮಾಡಿದರು. ತದನಂತರ ಮಂತ್ರೋಚ್ಚಾರವನ್ನು ಮಾಡಿ ಶ್ರೀ ಗೌರಿ, ಶ್ರೀ ಗಣೇಶ ಮತ್ತು ಶ್ರೀ ಲಕ್ಷ್ಮೀದೇವಿಯನ್ನು ಆವಾಹನೆ ಮಾಡಲಾಯಿತು. ಪುರಾಧಿಪತಿಯ ಅಂಗಳದಲ್ಲಿ ಎಲ್ಲ ದೇವತೆಗಳ ಸ್ಮರಣೆ ಮತ್ತು ಪೂಜೆಯನ್ನು ಮಾಡಲಾಯಿತು. ದೇವತೆಗಳಿಗೆ ನೈವೇದ್ಯ, ಹಣ್ಣು ಹಂಪಲು ಅರ್ಪಿಸಿ ಆರತಿ ಮಾಡಲಾಯಿತು. ಈ ವಿಷಯದಲ್ಲಿ ವಾರಣಾಸಿ ಜಿಲ್ಲಾಧಿಕಾರಿ ಎಸ್. ರಾಜಲಿಂಗಮ್ ಇವರು ಮಾತನಾಡಿ ನಾನು ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿದೆನು ಎಂದು ಹೇಳಿದರು.

ನೆಲಮಾಳಿಗೆ ಸ್ಥಳದಲ್ಲಿ ಕಾಶಿ ವಿಶ್ವನಾಥ ದೇವಾಲಯವಿದೆ! – ಜಿತೇಂದ್ರ ನಾಥ ವ್ಯಾಸ

ದೇವರ ಪೂಜೆ ಮತ್ತು ಆರತಿಯನ್ನು ಮಾಡುವ ಹಕ್ಕು ಸಿಕ್ಕಿರುವುದರಿಂದ ನಮಗೆ ಬಹಳ ಆನಂದವಾಗಿದೆ. ಜ್ಞಾನವಾಪಿಯ ನೆಲಮಾಳಿಗೆಯಲ್ಲಿ ಪೂಜೆ ಮಾಡಿದೆವು. ನಮ್ಮ ಕುಟುಂಬದ ಸದಸ್ಯರು ಹಾಗೂ ಐವರು ಅರ್ಚಕರು ಉಪಸ್ಥಿತರಿದ್ದರು. ಅಲ್ಲದೆ ಆಯುಕ್ತರು ಹಾಜರಿದ್ದರು. ಅವರೆಲ್ಲರ ಸಮ್ಮುಖದಲ್ಲಿ ನಾವು ನೆಲಮಾಳಿಗೆಯಲ್ಲಿ ಪೂಜೆ ಮತ್ತು ಆರತಿ ಮಾಡಿದ್ದೇವೆ ಎಂದು ವ್ಯಾಸ ಕುಟುಂಬದ ಜಿತೇಂದ್ರನಾಥ ವ್ಯಾಸ ತಿಳಿಸಿದರು. ಅವರು ತಮ್ಮ ಮಾತನ್ನು ಮುಂದುವರಿಸಿ, ನೆಲಮಾಳಿಗೆಯ ಸ್ಥಳದಲ್ಲಿ ಕಾಶಿ ವಿಶ್ವನಾಥನ ಮಂದಿರವೇ ಇದೆ. ಅದು ಸ್ವಯಂಭೂ ಮಂದಿರವಿತ್ತು, ಇದೆ ಮತ್ತು ಇರಲಿದೆ. ನೀವು ಅದನ್ನು ಮುಚ್ಚಿದ್ದರೂ, ಅದು ಮಂದಿರವೇ ಆಗಿದೆ. ಗೋಡೆಗಳ ಮೇಲೆ ಸ್ವಸ್ತಿಕ, ಕಮಲಗಳ ಚಿಹ್ನೆಗಳಿವೆ. ಇದು ಹಿಂದೂ ಮಂದಿರವೇ ಆಗಿದೆ ಎಂದು ಹೇಳಿದರು.

‘ನ್ಯಾಯಾಲಯದ ನಿರ್ಣಯ ತಪ್ಪಾಗಿದೆ !'(ಅಂತೆ) – ಅಸಾದುದ್ದೀನ್ ಓವೈಸಿ

ಅಸಾದುದ್ದೀನ್ ಓವೈಸಿ ಮಾತನಾಡಿ, ನ್ಯಾಯಾಧೀಶರು ತೆಗೆದುಕೊಂಡಿರುವ ನಿರ್ಣಯ ಸಂಪೂರ್ಣವಾಗಿ ತಪ್ಪಾಗಿದೆ. ಇದು ‘ಧಾರ್ಮಿಕ ಪೂಜಾ ಸ್ಥಳಗಳ ಕಾಯ್ದೆ 1991’ ಉಲ್ಲಂಘನೆಯಾಗಿದೆ. 30 ವರ್ಷಗಳ ಬಳಿಕ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಅನುಮತಿ ನೀಡಲಾಗಿದೆ. ಅಲ್ಲಿ ಮೂರ್ತಿಗಳು ಎಲ್ಲಿವೆ? ಮೂರ್ತಿಯನ್ನು ನೋಡಿದವರು ಯಾರು? ಇಲ್ಲಿ ‘6ನೇ ಡಿಸೆಂಬರ್’ ರ (ಬಾಬರಿ ಗುಮ್ಮಟ ಕೆಡವಿರುವ) ಪುನರಾವರ್ತನೆಯಾಗಬಹುದು. ಶ್ರೀರಾಮ ಮಂದಿರದ ಪ್ರಕರಣದ ತೀರ್ಪು ನೀಡುವಾಗ ನಾವು ಶ್ರದ್ಧೆಯ ಆಧಾರದ ಮೇಲೆ ತೀರ್ಪು ನೀಡಲಾಗಿದೆಯೆಂದು ಹೇಳಿದ್ದೆವು. ಈಗ ಈ ವಿಷಯ ಭವಿಷ್ಯದಲ್ಲಿಯೂ ಮುಂದುವರಿಯುತ್ತವೆ. ನೀವು ಆಡಳಿತ ಸಮಿತಿಗೆ ಪ್ರಶ್ನಿಸಲು 30 ದಿನಗಳ ಅವಧಿಯನ್ನು ನೀಡಿದ್ದೀರಿ ಈಗ ಆಡಳಿತ ಸಮಿತಿ ಈ ತಪ್ಪು ನಿರ್ಣಯದ ವಿರುದ್ಧ ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು.

ಸಂಪಾದಕೀಯ ನಿಲುವು

1993ರಲ್ಲಿ ಆಗಿನ ಸರ್ಕಾರ ಮೌಖಿಕವಾಗಿ ಆದೇಶ ನೀಡಿ, 1551ರಿಂದ ನಡೆಯುತ್ತಿದ್ದ ಪೂಜೆಯನ್ನು ನಿಲ್ಲಿಸಿದ್ದು, ತಪ್ಪಾಗಿತ್ತು ಎಂದು ಓವೈಸಿ ಎಂದಾದರೂ ಹೇಳುವರೇ?